ಜಾಲತಾಣದಲ್ಲಿ ಭಾರತದ ವಿರುದ್ಧ ಚೀನಾ ಸುಳ್ಳು ಸುದ್ದಿ ಪ್ರಚಾರ

KannadaprabhaNewsNetwork | Published : Dec 6, 2023 1:15 AM

ಸಾರಾಂಶ

ಒಂದೆಡೆ ಗಡಿಯಲ್ಲಿ ಸದಾ ಕ್ಯಾತೆ ತೆಗೆಯುವ ಮೂಲಕ ದೇಶದ ಭದ್ರತೆಗೆ ಅಪಾಯ ತರುವ ಕೆಲಸ ಮಾಡುತ್ತಿರುವ ಚೀನಾ ಸರ್ಕಾರ, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು ಅವುಗಳ ಮೂಲಕ ಭಾರತದ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಕೆಲಸ ಮಾಡುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಜಾಲತಾಣದಲ್ಲಿ ವಕೀಲರು, ಪತ್ರಕರ್ತರ ಹೆಸರಲ್ಲಿ ನಕಲಿ ಖಾತೆ

ರಾಷ್ಟ್ರೀಯ ಭದ್ರತೆ, ರಾಜಕೀಯ, ಸೇನೆ ಕುರಿತು ಅಪಪ್ರಚಾರ

ಫೇಸ್‌ಬುಕ್‌ ಮಾತೃ ಸಂಸ್ಥೆ ಮೆಟಾ ವರದಿಯಯಲ್ಲಿ ಕಳವಳಕಾರಿ ಅಂಶನವದೆಹಲಿ: ಒಂದೆಡೆ ಗಡಿಯಲ್ಲಿ ಸದಾ ಕ್ಯಾತೆ ತೆಗೆಯುವ ಮೂಲಕ ದೇಶದ ಭದ್ರತೆಗೆ ಅಪಾಯ ತರುವ ಕೆಲಸ ಮಾಡುತ್ತಿರುವ ಚೀನಾ ಸರ್ಕಾರ, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು ಅವುಗಳ ಮೂಲಕ ಭಾರತದ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಕೆಲಸ ಮಾಡುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.ಫೇಸ್‌ಬುಕ್‌, ಇನ್ಸ್ಟಾಗ್ರಾಂ ಮೊದಲಾದ ಜಾಲತಾಣಗಳ ಮಾತೃಸಂಸ್ಥೆಯಾಗಿರುವ ‘ಮೆಟಾ’ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಕಳವಳಕಾರಿ ಅಂಶವಿದೆ. ಇಂಥ ವಿಷಯಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸಾವಿರಾರು ನಕಲಿ ಖಾತೆಗಳನ್ನು ರದ್ದುಗೊಳಿಸಲಾಗಿದೆ. ಭಾರತ ಮಾತ್ರವಲ್ಲದೆ ಅಮೆರಿಕ ಸೇರಿದಂತೆ ಇತರೆ ಹಲವು ದೇಶಗಳ ವಿರುದ್ಧವೂ ಚೀನಾ ಇಂಥ ಸೋಷಿಯಲ್‌ ಮೀಡಿಯಾ ‘ಯುದ್ಧ’ ನಡೆಸುತ್ತಿದೆ ಎಂದು ವರದಿಯಿಂದ ಬಹಿರಂಗವಾಗಿದೆ.ನಕಲಿ ಖಾತೆ:ಚೀನಾ ಸರ್ಕಾರ, ಭಾರತೀಯ ಪತ್ರಕರ್ತರು, ವಕೀಲರು, ಸಾಮಾಜಿಕ ಕಾರ್ಯಕರ್ತರ ಹೆಸರಲ್ಲಿ ವಿವಿಧ ಜಾಲತಾಣಗಳಲ್ಲಿ ಸಾವಿರಾರು ನಕಲಿ ಖಾತೆಗಳನ್ನು ತೆರೆದು ಅದರ ಮೂಲಕ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದೆ. ಮುಖ್ಯವಾಗಿ ಭಾರತೀಯ ರಾಜಕೀಯ, ರಾಜಕೀಯ ವ್ಯಕ್ತಿಗಳು, ದೇಶದ ಭದ್ರತೆ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಜನರ ಅಭಿಪ್ರಾಯವನ್ನು ಬದಲಾಯಿಸುವ ಯತ್ನವನ್ನು ಮಾಡುತ್ತಿದೆ.ಇಂಥ ಬಹುತೇಕ ಸುಳ್ಳು ಸುದ್ದಿಗಳನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಜೊತೆಗೆ ಕೆಲವೊಂದು ವರದಿಗಳನ್ನು ಹಿಂದಿ ಮತ್ತು ಚೀನಿ ಭಾಷೆಯಲ್ಲೂ ಪ್ರಕಟಿಸಲಾಗುತ್ತಿದೆ. ಭಾರತದ ಸ್ಥಳೀಯ ಸುದ್ದಿಗಳು, ಸಂಸ್ಕೃತಿ, ಕ್ರೀಡೆ ಮತ್ತು ಅರುಣಾಚಲಪ್ರದೇಶದ ಕುರಿತು ತಪ್ಪು ಮಾಹಿತಿಗಳನ್ನು ಈ ಜಾಲತಾಣಗಳ ಮೂಲಕ ಹರಿಯಬಿಡಲಾಗುತ್ತಿದೆ.ಅರುಣಾಚಲ ಪ್ರದೇಶವನ್ನು ಗುರಿಯಾಗಿಸಿಕೊಂಡ ಖಾತೆಗಳಲ್ಲಿ ಭಾರತೀಯ ಸೇನೆ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಲಾಗಿದೆ.ಇನ್ನು ವಿಶೇಷವಾಗಿ ಟಿಬೆಟ್‌ ಗುರಿಯಾಗಿಸಿಕೊಂಡ ಕೆಲ ಖಾತೆಗಳಲ್ಲಿ ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ಮತ್ತು ಅವರ ಹಿಂಬಾಲಕರನ್ನು ಭ್ರಷ್ಟರು ಮತ್ತು ಶಿಶುಕಾಮಿಗಳು ಎಂದೆಲ್ಲಾ ಟೀಕಿಸಲಾಗುತ್ತಿದೆ.ಜೊತೆಗೆ ಈ ಖಾತೆಗಳು ಅಧಿಕೃತ ಎಂದು ಬಿಂಬಿಸಲು, ಇಂಥ ಕೆಲಸಗಳಲ್ಲಿ ನಿರತರಾದವರೇ ಸಾಕಷ್ಟು ಪ್ರಮಾಣದಲ್ಲಿ ಸುದ್ದಿಗಳಿಗೆ ಪ್ರತಿಕ್ರಿಯಿಸುವ ಕೆಲಸ ಮಾಡುತ್ತಿದ್ದಾರೆ.

Share this article