;Resize=(412,232))
ಢಾಕಾ: ಚೀನಾದಿಂದ ಬಾಂಗ್ಲಾದೇಶಕ್ಕೆ ರಹಸ್ಯವಾಗಿ ಸಾಗಿಸಲಾಗುತ್ತಿದ್ದ, 100 ಕ್ಷಿಪಣಿ ತಯಾರಿಸಬಹುದಾದ 405 ಟನ್ ತೂಕದ ಸೋಡಿಯಂ ಪರ್ಕ್ಲೋರೇಟ್ ರಾಸಾಯನಿಕ ಹಾಗೂ ಲಕ್ಷಾಂತರ ನೋಂದಣಿಯಾದ ಸಿಮ್ ಕಾರ್ಡ್ಗಳನ್ನು ಹೊತ್ತ ಹಡಗನ್ನು ಇಂಡೋನೇಷ್ಯಾ ನೌಕಾಪಡೆ ವಶಪಡಿಸಿಕೊಂಡಿದೆ. ಈ ರಹಸ್ಯ ಸಾಗಣೆಯ ಉದ್ದೇಶ ಹಾಗೂ ಬಾಂಗ್ಲಾದೇಶದಲ್ಲಿ ಇದನ್ನು ಸ್ವೀಕರಿಸಬೇಕಿದ್ದ ಖರೀದಿರಾರರು ಯಾರು ಎಂಬ ಬಗ್ಗೆ ತೀವ್ರ ಕುತೂಹಲ ಹಾಗೂ ಭದ್ರತಾ ಆತಂಕ ಮೂಡಿದೆ.
ಕೊಮೊರಸ್ ಧ್ವಜ ಹೊಂದಿರುವ ಎಂವಿ ಸ್ಟಾರ್ಲೈನ್ ಎಂಬ ಸರಕು ಸಾಗಣೆ ಹಡಗು ಚೀನಾದ ಲಿಯಾನ್ಯುಂಗಾಂಗ್ ಬಂದರಿನಿಂದ ಬಾಂಗ್ಲಾದೇಶದ ಮೊಂಗ್ಲಾ ಬಂದರಿನತ್ತ ಪ್ರಯಾಣಿಸುತ್ತಿತ್ತು. ನ.7ರಂದು ಇಂಧನ ತುಂಬಿಸಿಕೊಳ್ಳುವ ಸಲುವಾಗಿ ಉತ್ತರ ಸುಮಾತ್ರಾದ ಬೆಲಾವನ್ ಕರಾವಳಿಯಲ್ಲಿ ಅನಿರೀಕ್ಷಿತವಾಗಿ ಲಂಗರು ಹಾಕಿದ್ದಾಗ, ಇಂಡೋನೇಷ್ಯಾ ನೌಕಾಪಡೆಯ ಗಸ್ತು ನೌಕೆ ಕೆಆರ್ಐ ಸಿಗಾಲು-857 ಸಿಬ್ಬಂದಿಗೆ ಹಡಗಿನ ಚಲನವಲನದ ಮೇಲೆ ಅನುಮಾನ ಬಂದಿದೆ. ನಿಗದಿತ ಮಾರ್ಗ ಬಿಟ್ಟು ಸಂಚರಿಸುತ್ತಿದ್ದ ಹಡಗನ್ನು ತಡೆದು ಪರಿಶೀಲಿಸಿದಾಗ ದಾಖಲೆಗಳಲ್ಲಿ ಲೋಪದೋಷಗಳು ಕಂಡುಬಂದಿವೆ. ನಂತರ ನೌಕಾಪಡೆಯ ಪ್ರಾದೇಶಿಕ ಕಮಾಂಡರ್ ಆದೇಶದ ಮೇರೆಗೆ ಸಂಪೂರ್ಣ ತಪಾಸಣೆ ನಡೆಸಲಾಯಿತು.
ಹಡಗಿನಲ್ಲಿದ್ದ ಒಟ್ಟು 36 ಕಂಟೇನರ್ಗಳ ಪೈಕಿ 15 ಕಂಟೇನರ್ಗಳಲ್ಲಿ 405 ಟನ್ ಸೋಡಿಯಂ ಪರ್ಕ್ಲೋರೇಟ್ ಪತ್ತೆಯಾಗಿದ್ದು, 4 ಪ್ಯಾಲೆಟ್ಗಳಲ್ಲಿ ಲಕ್ಷಾಂತರ ನೋಂದಣಿಯಾಗದ ಖಾಲಿ 4ಜಿ ಎಲ್ಟಿಇ ಸಿಮ್ ಕಾರ್ಡ್ಗಳು ಸಿಕ್ಕಿವೆ. ಇದರೊಂದಿಗೆ ಹಡಗಿನಲ್ಲಿ ರಾಸಾಯನಿಕ ಮಿಶ್ರಣ ಮಾಡುವ ಟ್ಯಾಂಕ್ ಕೂಡ ಪತ್ತೆಯಾಗಿರುವುದು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಸೋಡಿಯಂ ಪರ್ಕ್ಲೋರೇಟ್ ಒಂದು ಪ್ರಮುಖ ಆಕ್ಸಿಡೈಸಿಂಗ್ ಏಜೆಂಟ್ ಆಗಿದ್ದು, ಇದನ್ನು ರಾಕೆಟ್ ಮತ್ತು ಕ್ಷಿಪಣಿಗಳಿಗೆ ಬೇಕಾದ ಇಂಧನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ವಶಪಡಿಸಿಕೊಂಡ ರಾಸಾಯನಿಕದಿಂದ ಸುಮಾರು 100 ಕ್ಷಿಪಣಿಗಳನ್ನು ತಯಾರಿಸಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಬಾಂಗ್ಲಾದೇಶದ ಜವಳಿ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಸೋಡಿಯಂ ಪರ್ಕ್ಲೋರೇಟ್ ಬಳಕೆಯಲ್ಲಿದ್ದರೂ, ಒಂದೇ ಬಾರಿಗೆ 405 ಟನ್ಗಳಷ್ಟು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದು ಸಾಮಾನ್ಯ ವಾಣಿಜ್ಯ ಉದ್ದೇಶಕ್ಕೆ ಮೀರಿದ್ದಾಗಿದೆ. ಬಾಂಗ್ಲಾದೇಶವು ಸದ್ಯಕ್ಕೆ ಯಾವುದೇ ದೊಡ್ಡ ಮಟ್ಟದ ಕ್ಷಿಪಣಿ ತಯಾರಿಕಾ ಕಾರ್ಯಕ್ರಮವನ್ನು ಹೊಂದಿಲ್ಲ. ಈ ಬೆಳವಣಿಗೆಯು 2004ರಲ್ಲಿ ಬಾಂಗ್ಲಾದ ಚಿತ್ತಗಾಂಗ್ ಬಂದರಿನಲ್ಲಿ ಬಂಡುಕೋರರಿಗಾಗಿ ವಾಣಿಜ್ಯ ಹಡಗಿನ ಮೂಲಕ ಅಕ್ರಮವಾಗಿ ಸಾಗಿಸಲಾಗಿದ್ದ ಬೃಹತ್ ಶಸ್ತ್ರಾಸ್ತ್ರಗಳ ವಶಪಡಿಸಿಕೊಳ್ಳುವಿಕೆ ಪ್ರಕರಣವನ್ನು ನೆನಪಿಸುತ್ತಿದೆ ಎಂದು ಭಾರತೀಯ ಗುಪ್ತಚರ ಮೂಲಗಳು ಕಳವಳ ವ್ಯಕ್ತಪಡಿಸಿವೆ.
ಇಂಡೋನೇಷ್ಯಾ ತನಿಖೆ:
ಹಡಗು ಜಪ್ತಿಯಾಗಿ 2 ವಾರಗಳು ಕಳೆದರೂ, ಬಾಂಗ್ಲಾದಲ್ಲಿ ಈ ಬೃಹತ್ ಪ್ರಮಾಣದ ರಾಸಾಯನಿಕವನ್ನು ಆಮದು ಮಾಡಿಕೊಂಡವರು ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಹಡಗು ಮೊಂಗ್ಲಾ ಬಂದರು ತಲುಪುವ ಮೊದಲೇ ಸಿಕ್ಕಿಬಿದ್ದಿರುವುದರಿಂದ ಆಮದು ದಾಖಲೆಗಳನ್ನು ಪೂರ್ಣವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಬಾಂಗ್ಲಾದ ಕಸ್ಟಮ್ಸ್ ಮೂಲಗಳು ತಿಳಿಸಿವೆ. ಅಲ್ಲದೆ, ಹಡಗಿನ ನೋಂದಣಿ ರದ್ದಾಗಿದ್ದರೂ ಮತ್ತು ದಾಖಲೆಗಳಲ್ಲಿ ವ್ಯತ್ಯಾಸವಿದ್ದರೂ ಅಕ್ರಮವಾಗಿ ಸಂಚರಿಸುತ್ತಿದ್ದದ್ದು ತನಿಖೆಯಿಂದ ಬಯಲಾಗಿದೆ. ಸದ್ಯ ಇಂಡೋನೇಷ್ಯಾ ಅಧಿಕಾರಿಗಳು ಹಡಗಿನ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದು, ಈ ನಿಗೂಢ ಸರಕಿನ ಅಸಲಿ ಮಾಲೀಕರು ಮತ್ತು ಉದ್ದೇಶದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.