ನೇಪಾಳಕ್ಕೆ ಭಾರತದಿಂದ ₹24000 ಕೋಟಿ ಪ್ಯಾಕೇಜ್‌

Published : Nov 24, 2026, 11:07 AM IST
india nepal

ಸಾರಾಂಶ

ನೆರೆಯ ನೇಪಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚೀನಾ ನಿರಂತರವಾಗಿ ಪ್ರಯತ್ನಿಸುತ್ತಿರುವ ನಡುವೆಯೇ, ನೇಪಾಳವನ್ನು ಮತ್ತೆ ತನ್ನತ್ತ ಗಟ್ಟಿಯಾಗಿ ಸೆಳೆದುಕೊಳ್ಳಲು ಭಾರತ ಮಹತ್ವದ ರಾಜತಾಂತ್ರಿಕ ಹಾಗೂ ಆರ್ಥಿಕ ಹೆಜ್ಜೆಯಿಟ್ಟಿದೆ.

ನವದೆಹಲಿ: ನೆರೆಯ ನೇಪಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಚೀನಾ ನಿರಂತರವಾಗಿ ಪ್ರಯತ್ನಿಸುತ್ತಿರುವ ನಡುವೆಯೇ, ನೇಪಾಳವನ್ನು ಮತ್ತೆ ತನ್ನತ್ತ ಗಟ್ಟಿಯಾಗಿ ಸೆಳೆದುಕೊಳ್ಳಲು ಭಾರತ ಮಹತ್ವದ ರಾಜತಾಂತ್ರಿಕ ಹಾಗೂ ಆರ್ಥಿಕ ಹೆಜ್ಜೆಯಿಟ್ಟಿದೆ. ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರೊಂದಿಗೆ ಸೋಮವಾರ ವಿಸ್ತೃತ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನೇಪಾಳದ ಸಮಗ್ರ ಅಭಿವೃದ್ಧಿಗಾಗಿ 24,000 ಕೋಟಿ ನೇಪಾಳಿ ರು. (15,000 ಕೋಟಿ ಭಾರತೀಯ ರು.) ಬೃಹತ್‌ ಮೊತ್ತದ ಅಭಿವೃದ್ಧಿ ಪ್ಯಾಕೇಜ್‌ ಘೋಷಿಸಿದ್ದಾರೆ.

ಕಳೆದ ಮೇನಲ್ಲಿ ಭಾರತ ಮತ್ತು ನೇಪಾಳ ನಡುವಿನ ದೀರ್ಘಕಾಲದ ಗಡಿ ವಿವಾದವನ್ನು ಬಗೆಹರಿಸಲು ಚೀನಾ ಮತ್ತು ಬ್ರಿಟನ್ ಮಧ್ಯಸ್ಥಿಕೆ ವಹಿಸಬೇಕು ಎಂದು ಬಾಲೇಂದ್ರ ಶಾ ಹೇಳಿಕೆ ನೀಡಿದ್ದು ಉಭಯ ದೇಶಗಳ ಸಂಬಂಧದಲ್ಲಿ ಕೊಂಚ ಬಿರುಕು ಮೂಡಿಸಿತ್ತು. ಅದರ ಬೆನ್ನಲ್ಲೇ, ಭಾರತವು ನೇಪಾಳದಲ್ಲಿ ಚೀನಾದ ಪ್ರಭಾವ ಹೆಚ್ಚಾಗುವುದನ್ನು ತಡೆಯುವ ಉದ್ದೇಶದಿಂದ ಈ ಹೆಜ್ಜೆಯಿಟ್ಟಿದೆ.

ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಭಾರತ ಮತ್ತು ನೇಪಾಳ ಕೇವಲ ನೆರೆಯ ರಾಷ್ಟ್ರಗಳಲ್ಲ, ನಮ್ಮದು ಪರಸ್ಪರ ನಂಬಿಕೆ ಮತ್ತು ರಕ್ತಸಂಬಂಧದಂತಹ ಬೆಸುಗೆ. ಕಳೆದ ಆಗಸ್ಟ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಪುನರ್ ನಿರ್ಮಾಣ ಹಾಗೂ ದೀರ್ಘಕಾಲೀನ ಅಭಿವೃದ್ಧಿಗಾಗಿ ಈ 24,000 ಕೋಟಿ ನೇಪಾಳಿ ರು. ಪ್ಯಾಕೇಜ್ ನೀಡಲಾಗುತ್ತಿದೆ’ ಎಂದು ತಿಳಿಸಿದರು. ಅಲ್ಲದೆ, ತೈಲ ಪೂರೈಕೆಯಲ್ಲಿ ಜಾಗತಿಕ ಸವಾಲುಗಳಿದ್ದರೂ ನೇಪಾಳಕ್ಕೆ ಇಂಧನ, ರಸಗೊಬ್ಬರ ಮತ್ತು ಅಗತ್ಯ ವಸ್ತುಗಳ ಪೂರೈಕೆಯನ್ನು ಭಾರತ ನಿರಂತರವಾಗಿ ಕಾಯ್ದುಕೊಂಡಿದೆ ಎಂದು ಚೀನಾಗೆ ಪರೋಕ್ಷ ಸಂದೇಶ ರವಾನಿಸಿದರು.

8 ಒಪ್ಪಂದಗಳಿಗೆ ಸಹಿ:

ಈ ಐತಿಹಾಸಿಕ ಭೇಟಿಯ ವೇಳೆ ಭಾರತ ಮತ್ತು ನೇಪಾಳ ನಡುವೆ ಬಾಹ್ಯಾಕಾಶ ಸಂಶೋಧನೆ, ಆರೋಗ್ಯ ಮತ್ತು ಔಷಧ, ನಗರಾಭಿವೃದ್ಧಿ, ಆಯುರ್ವೇದ ಹಾಗೂ ನಾಗರಿಕ ಸೇವಾ ತರಬೇತಿ ಸೇರಿದಂತೆ ಒಟ್ಟು 8 ಮಹತ್ವದ ಒಪ್ಪಂದಗಳಿಗೆ (ಎಂಒಯು) ಸಹಿ ಹಾಕಲಾಯಿತು.

ನೇಪಾಳಕ್ಕೆ ರೈಲು:

ಇದೇ ವೇಳೆ ಪ್ರಧಾನಿ ಮೋದಿ ಮತ್ತು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ವರ್ಚುವಲ್ ಮೂಲಕ ಉತ್ತರ ಪ್ರದೇಶದ ಅಯೋಧ್ಯೆ ಮತ್ತು ನೇಪಾಳದ ಜನಕಪುರ ಧಾಮದ ನಡುವಿನ ಸರಯೂ ಕಮಲಾ ಎಕ್ಸ್‌ಪ್ರೆಸ್ ಅಂತಾರಾಷ್ಟ್ರೀಯ ಪ್ರಯಾಣಿಕ ರೈಲು ಸೇವೆಗೆ ಹಸಿರು ನಿಶಾನೆ ತೋರಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಾಟ್ಸಾಪ್‌ ವೆಬ್‌ ಮೂಲಕ ಸೈಬರ್‌ ವಂಚನೆ: ಕೇಂದ್ರ
ರಾಮಜನ್ಮಭೂಮಿಯಿಂದ ಸೀತೆಯ ಜನ್ಮಭೂಮಿಗೆ ಇನ್ನು ನೇರ ರೈಲು!