ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌

KannadaprabhaNewsNetwork |  
Published : Dec 13, 2025, 02:15 AM IST
Condom

ಸಾರಾಂಶ

ಜನಸಂಖ್ಯಾ ಕುಸಿತ ತಡೆಯುವ ನಿಟ್ಟಿನಲ್ಲಿ ಕಾಂಡೋಮ್‌ ಸೇರಿ ಗರ್ಭನಿರೋಧಕ ಉತ್ಪನ್ನಗಳು ಹಾಗೂ ಔಷಧಗಳ ಮೇಲೆ ಜ.1ರಿಂದ ಹೆಚ್ಚಿನ ಮೌಲ್ಯವರ್ಧಿತ ತೆರಿಗೆ ವಿಧಿಸಲು ಚೀನಾ ಸರ್ಕಾರ ನಿರ್ಧರಿಸಿದೆ. ಗರ್ಭನಿರೋಧಕಗಳ ಮೇಲೆ ಚೀನಾ ಈ ರೀತಿ ತೆರಿಗೆ ವಿಧಿಸುತ್ತಿರುವುದು ಮೂರು ದಶಕಗಳಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ.

 ಬೀಜಿಂಗ್‌: ಜನಸಂಖ್ಯಾ ಕುಸಿತ ತಡೆಯುವ ನಿಟ್ಟಿನಲ್ಲಿ ಕಾಂಡೋಮ್‌ ಸೇರಿ ಗರ್ಭನಿರೋಧಕ ಉತ್ಪನ್ನಗಳು ಹಾಗೂ ಔಷಧಗಳ ಮೇಲೆ ಜ.1ರಿಂದ ಹೆಚ್ಚಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ವಿಧಿಸಲು ಚೀನಾ ಸರ್ಕಾರ ನಿರ್ಧರಿಸಿದೆ. ಗರ್ಭನಿರೋಧಕಗಳ ಮೇಲೆ ಚೀನಾ ಈ ರೀತಿ ತೆರಿಗೆ ವಿಧಿಸುತ್ತಿರುವುದು ಮೂರು ದಶಕಗಳಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ.

ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣ

ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣಕ್ಕೆ ಚೀನಾವು ದಶಕಗಳ ಹಿಂದೆ ಒಂದೇ ಮಗು ಕಡ್ಡಾಯ ಸೇರಿ ಹಲವು ಕ್ರಮಗಳನ್ನು ಜಾರಿಗೆ ತಂದಿತ್ತು. ಆಗ ಗರ್ಭನಿರೋಧಕಗಳ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಮಾಡಿತ್ತು. ಇದೀಗ ಜನಸಂಖ್ಯಾ ಪ್ರಮಾಣ ತೀವ್ರವಾಗಿ ಕುಸಿಯುತ್ತಿದ್ದಂತೆ ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಕುಟುಂಬ ಹೊಂದುವಂತೆ ಸರ್ಕಾರ ಜನರಿಗೆ ಪ್ರೋತ್ಸಾಹ ನೀಡಲು ಆರಂಭಿಸಿದೆ. ಅದರ ಭಾಗವಾಗಿ ಜ.1ರಿಂದ ಗರ್ಭನಿರೋಧಕ ಔಷಧಗಳು ಮತ್ತು ಕಾಂಡೋಮ್‌ನಂಥ ಉತ್ಪನ್ನಗಳಿಗೆ ಮೌಲ್ಯವರ್ಧಿತ ತೆರಿಗೆಯಿಂದ ಸಿಗುತ್ತಿದ್ದ ವಿನಾಯ್ತಿಯನ್ನು ರದ್ದು ಮಾಡಿ ಹೆಚ್ಚಿನ ವ್ಯಾಟ್‌ ವಿಧಿಸಲು ನಿರ್ಧರಿಸಿದೆ. ಅದರಂತೆ ಹೊಸ ವರ್ಷದಿಂದ ಕಾಂಡೋಮ್‌ಗಳ ಮೇಲೆ ಶೇ.13ರಷ್ಟು ವ್ಯಾಟ್‌ ಬೀಳಲಿದೆ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಚೀನಾ ಸರ್ಕಾರದ ಈ ನಡೆ ವೈರಲ್‌

 ಸರ್ಕಾರ ನಿಯಂತ್ರಿತ ಸುದ್ದಿ ಸಂಸ್ಥೆಗಳು ಈ ಸುದ್ದಿಗೆ ಹೆಚ್ಚಿನ ಮಹತ್ವ ನೀಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಚೀನಾ ಸರ್ಕಾರದ ಈ ನಡೆ ವೈರಲ್‌ ಆಗಿದೆ. ಮಕ್ಕಳನ್ನು ಬೆಳೆಸುವುದಕ್ಕಿಂತ ಕಾಂಡೋಮ್‌ ಖರೀದಿಸುವುದೇ ಕಡಿಮೆ ವೆಚ್ಚದಾಯಕ ಎಂದು ಅರ್ಥ ಮಾಡಿಕೊಳ್ಳದಷ್ಟು ಜನ ದಡ್ಡರಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡಲು ಆರಂಭಿಸಿವೆ.

ತಜ್ಞರ ಆತಂಕ:

ಸರ್ಕಾರದ ಈ ಕ್ರಮದಿಂದ ಲೈಂಗಿಕ ರೋಗಗಳು ಹೆಚ್ಚಾಗಬಹುದು, ಅನವಶ್ಯಕ ಗರ್ಭಧಾರಣೆ ಪ್ರಕರಣಗಳೂ ಹೆಚ್ಚಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಚೀನಾದ ಕಮ್ಯುನಿಸ್ಟ್‌ ಸರ್ಕಾರವು ಒಂದೇ ಮಗು ನೀತಿಯನ್ನು 1980ರಿಂದ 2015ರ ವರೆಗೆ ಜಾರಿ ಮಾಡಿತ್ತು. ಆಗ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರ ಮೇಲೆ ಭಾರೀ ಪ್ರಮಾಣದ ದಂಡ ಅಥವಾ ಒಂದು ಮಗುವಿದ್ದರೂ ಮತ್ತೊಮ್ಮೆ ಗರ್ಭಿಣಿಯಾದರೆ ಬಲವಂಥದ ಅಬಾರ್ಷನ್‌ನಂಥ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!