ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲದಿದ್ದರೆ 3ನೇ ವಿಶ್ವಯುದ್ಧ : ಟ್ರಂಪ್‌ ಎಚ್ಚರಿಕೆ

KannadaprabhaNewsNetwork |  
Published : Dec 13, 2025, 02:00 AM IST
Donald Trump

ಸಾರಾಂಶ

ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಕಳೆದ ಒಂದೇ ತಿಂಗಳ ಅವಧಿಯಲ್ಲಿ 25,000 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ಇಲ್ಲಿಗೇ ನಿಲ್ಲದಿದ್ದರೆ ಮೂರನೇ ವಿಶ್ವಯುದ್ಧದಲ್ಲಿ ಅಂತ್ಯವಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

 ವಾಷಿಂಗ್ಟನ್: ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಕಳೆದ ಒಂದೇ ತಿಂಗಳ ಅವಧಿಯಲ್ಲಿ 25,000 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ಇಲ್ಲಿಗೇ ನಿಲ್ಲದಿದ್ದರೆ ಮೂರನೇ ವಿಶ್ವಯುದ್ಧದಲ್ಲಿ ಅಂತ್ಯವಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

ಶ್ವೇತಭವನದಲ್ಲಿ ಮಾತನಾಡಿದ ಅವರು, ‘ಯುದ್ಧದಲ್ಲಿ ಸಾವುಗಳು ನಿಲ್ಲುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ಕಳೆದ ತಿಂಗಳು 25,000 ಜನ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಸೈನಿಕರು. ಬಾಂಬ್‌ಗಳು ಬಿದ್ದಲ್ಲಿ ಜನಸಾಮಾನ್ಯರೂ ಮೃತಪಟ್ಟಿದ್ದಾರೆ. ಇದು ನಿಲ್ಲಬೇಕು. ಇದಕ್ಕಾಗಿ ಪರಿಶ್ರಮದಿಂದ ನಾವು ಕೆಲಸ ಮಾಡುತ್ತಿದ್ದೇವೆ. ಈ ತರಹದ ವಿದ್ಯಮಾನಗಳು 3ನೇ ವಿಶ್ವಯುದ್ಧದಲ್ಲಿ ಅಂತ್ಯವಾಗುತ್ತವೆ. ಇದನ್ನು ನಾನು ಹಿಂದೆಯೂ ಹೇಳಿದ್ದೆ. ಅದು ಸಂಭವಿಸುವುದು ನಮಗೆ ಇಷ್ಟವಿಲ್ಲ’ ಎಂದಿದ್ದಾರೆ.

ಭಾರತವೂ ಸೇರಿ 5 ದೇಶಗಳ ಸಿ5 ಗುಂಪು ರಚನೆಗೆ ಟ್ರಂಪ್‌ ಚಿಂತನೆ 

ವಾಷಿಂಗ್ಟನ್‌: ಭಾರತವೂ ಸೇರಿ ಐದು ರಾಷ್ಟ್ರಗಳನ್ನೊಳಗೊಂಡ ಹೊಸ ‘ಸಿ5’ ಅಥವಾ ‘ಕೋರ್‌ ಫೈವ್‌’ ಗುಂಪೊಂದರ ರಚನೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗಂಭೀರ ಚಿಂತನೆ ನಡೆಸುತ್ತಿದ್ದಾರೆ.ಈ ‘ಸೂಪರ್‌ ಕ್ಲಬ್‌’ನ ಚಿಂತನೆಯನ್ನು ರಾಜನೀತಿ ತಜ್ಞರು ದಿಟ್ಟ ಹೆಜ್ಜೆ ಎಂದು ಕರೆದಿದ್ದು, ಈ ಮೂಲಕ ಯುರೋಪ್‌ ಕೇಂದ್ರಿತ ಜಿ7 ಒಕ್ಕೂಟದಿಂದ ದೂರಸರಿದು ಅಂತಾರಾಷ್ಟ್ರೀಯ ಪವರ್‌ ಪಾಲಿಟಿಕ್ಸ್‌ನಲ್ಲಿ ಮಹತ್ವದ ಬದಲಾವಣೆಗೆ ಟ್ರಂಪ್‌ ಮುನ್ನುಡಿಗೆ ಹೆಜ್ಜೆ ಇಟ್ಟಂತಾಗಲಿದೆ ಎಂದು ವಿಶ್ಲೇಷಿಸಿದ್ದಾರೆ.

ಶಕ್ತಿಶಾಲಿ ರಾಷ್ಟ್ರಗಳ ಜತೆಗೆ ಭಾರತ

ಅಮೆರಿಕ, ರಷ್ಯಾ, ಜಪಾನ್‌, ಚೀನಾನಂಥ ಶಕ್ತಿಶಾಲಿ ರಾಷ್ಟ್ರಗಳ ಜತೆಗೆ ಭಾರತದಂಥ ಉದಯೋನ್ಮುಖ ಆರ್ಥಿಕತೆಗಳನ್ನೂ ಒಂದೇ ವೇದಿಕೆಗೆ ತಂದು ಮಧ್ಯಪ್ರಾಚ್ಯ ರಾಷ್ಟ್ರಗಳ ಬಿಕ್ಕಟ್ಟು, ತಾಂತ್ರಿಕ ಸ್ಪರ್ಧೆ, ಆಡಳಿತ ಮತ್ತು ಮಹತ್ವದ ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಪರಸ್ಪರ ಮಾತುಕತೆಗೆ ಉತ್ತೇಜನ ನೀಡುವ ಉದ್ದೇಶ ಸಿ5 ಗುಂಪು ರಚನೆಯ ಹಿಂದಿದೆ ಎಂದು ಹೇಳಲಾಗಿದೆ.ಈ ಗುಂಪು ರಚನೆಯ ಪ್ರಸ್ತಾಪ ಕುರಿತು ಅಮೆರಿಕದ ರಾಷ್ಟ್ರೀಯ ಭದ್ರತಾ ತಂತ್ರಗಾರಿಕೆಯ ಕರಡು ವರದಿಯನ್ನಾಧರಿಸಿ ಡಿಫೆನ್ಸ್‌ ಒನ್‌ ಆನ್‌ಲೈನ್‌ ನ್ಯೂಸ್‌ ಮತ್ತು ‘ಪೊಲಿಟಿಕೋ’ ಪತ್ರಿಕೆಗಳು ವರದಿ ಮಾಡಿವೆ. ಇಂಥ ವೇದಿಕೆಯ ರಚನೆ ಅಚ್ಚರಿಯೇನೂ ಅಲ್ಲ. ಆದರೆ ಇದು ತಕ್ಷಣಕ್ಕೆ ಕಾರ್ಯರೂಪಕ್ಕೆ ಬರುವುದು ಕಷ್ಟ ಎಂದು ಪತ್ರಿಕೆಗಳು ಅಭಿಪ್ರಾಯಪಟ್ಟಿವೆ.ಸಿ5 ಗುಂಪು ವಿಶ್ವದ ಅತಿ ಹೆಚ್ಚು ಜನಸಂಖ್ಯೆಯುಳ್ಳ ಮತ್ತು ವ್ಯೂಹಾತ್ಮಕವಾಗಿ ಪ್ರಮುಖವಾಗಿರುವ ದೇಶಗಳನ್ನು ಒಂದೇ ವೇದಿಕೆಯಡಿ ತರಲಿದೆ. ಸಿ5 ದೇಶಗಳು ವಿಷಯಾಧಾರಿತವಾಗಿ ಸಭೆ ಸೇರುವ ಉದ್ದೇಶವಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!