ಪಾಕ್‌ಗೆ ಹೊರಟಿದ್ದ ಚೀನಾ ‘ಶಸ್ತ್ರಾಸ್ತ್ರ’ ಹಡಗು ಭಾರತದಲ್ಲಿ ಜಪ್ತಿ!

KannadaprabhaNewsNetwork |  
Published : Mar 03, 2024, 01:33 AM ISTUpdated : Mar 03, 2024, 09:19 AM IST
ಹಡಗು | Kannada Prabha

ಸಾರಾಂಶ

ಅಣ್ವಸ್ತ್ರ, ಕ್ಷಿಪಣಿ ತಯಾರಿಕೆಗೆ ಬೇಕಾದ ಸರಕು ಸಾಗಿಸುತ್ತಿದ್ದ ಶಂಕೆಯ ಮೇರೆಗೆ ಪಾಕಿಸ್ತಾನಕ್ಕೆ ಹೊರಟಿದ್ದ ಚೀನಾ ಹಡಗನ್ನು ಭಾರತ ಜಪ್ತಿ ಮಾಡಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಅಣ್ವಸ್ತ್ರ ಹಾಗೂ ಕ್ಷಿಪಣಿ ತಯಾರಿಕೆಗೆ ಬಳಸಲಾಗುತ್ತದೆ ಎನ್ನಲಾದ ಅನುಮಾನಾಸ್ಪದ ಸರಕನ್ನು ಪಾಕಿಸ್ತಾನಕ್ಕೆ ಸಾಗಿಸುತ್ತಿದ್ದ ಚೀನಾದಿಂದ ಹೊರಟ ಹಡಗನ್ನು ಭಾರತದ ಭದ್ರತಾ ಪಡೆಗಳು ಮುಂಬೈನಲ್ಲಿ ತಡೆದು ಜಪ್ತಿ ಮಾಡಿವೆ.

ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಆಧರಿಸಿ ಕಸ್ಟಮ್ಸ್‌ ಅಧಿಕಾರಿಗಳು ಚೀನಾದಿಂದ ಬರುತ್ತಿದ್ದ ಸಿಎಂಎ ಸಿಜಿಎಂ ಅಟ್ಟಿಲಾ ಎಂಬ ಹಡಗನ್ನು ಜ.23ರಂದು ನವಾ ಶೇವಾ ಬಂದರಿನಲ್ಲಿ ತಡೆದಿದ್ದಾರೆ. 

ಅದು ಕರಾಚಿಗೆ ಹೋಗುತ್ತಿದ್ದ ಹಡಗು ಎನ್ನಲಾಗಿದೆ. ಹಡಗಿನಲ್ಲಿ ತಪಾಸಣೆ ನಡೆಸಿದಾಗ ಕ್ಷಿಪಣಿ ಮುಂತಾದ ಮಿಲಿಟರಿ ಸರಕುಗಳನ್ನು ಉತ್ಪಾದಿಸಲು ಬಳಸುವ ಇಟಾಲಿಯನ್‌ ಕಂಪನಿಯ ಕಂಪ್ಯೂಟರ್‌ ನ್ಯೂಮರಿಕಲ್‌ ಕಂಟ್ರೋಲ್‌ (ಸಿಎನ್‌ಸಿ) ಯಂತ್ರ ಲಭಿಸಿದೆ. ಅದೂ ಸೇರಿದಂತೆ 22,180 ಕೆ.ಜಿ. ತೂಕದ ಸರಕನ್ನು ಭದ್ರತಾ ಪಡೆಗಳು ಮುಟ್ಟುಗೋಲು ಹಾಕಿಕೊಂಡಿವೆ.

ಸುಳ್ಳು ದಾಖಲೆಗಳು ನೀಡಿದ ಸುಳಿವು: ಅಮೆರಿಕ ಹಾಗೂ ಯುರೋಪಿಯನ್‌ ದೇಶಗಳು ನಿರ್ಬಂಧಿಸಿರುವ ಅಣ್ವಸ್ತ್ರ ಹಾಗೂ ಕ್ಷಿಪಣಿ ತಯಾರಿಕೆಗೆ ಬೇಕಾದ ಸರಕನ್ನು ಪಾಕಿಸ್ತಾನವು ಚೀನಾದಿಂದ ತರಿಸಿಕೊಳ್ಳುತ್ತಿತ್ತು ಎಂದು ಶಂಕಿಸಲಾಗಿದೆ. 

ಹಡಗಿನಲ್ಲಿದ್ದ ನಾವಿಕರು ಚೀನಾದ ಶಾಂಘೈ ಗ್ಲೋಬಲ್‌ ಲಾಜಿಸ್ಟಿಕ್ಸ್‌ ಕಂಪನಿಯಿಂದ ಪಾಕಿಸ್ತಾನದ ಸಿಯಾಲ್ಕೋಟ್‌ನಲ್ಲಿರುವ ಪಾಕಿಸ್ತಾನ್‌ ವಿಂಗ್ಸ್‌ ಪ್ರೈ.ಲಿ. ಕಂಪನಿಗೆ ಸರಕು ಸಾಗಿಸುತ್ತಿರುವುದಾಗಿ ದಾಖಲೆಗಳನ್ನು ನೀಡಿದ್ದರು. 

ಆದರೆ, ತನಿಖೆ ನಡೆಸಿದಾಗ ಸರಕನ್ನು ತೈಯುವಾನ್‌ ಮೈನಿಂಗ್‌ ಕಂಪನಿಯು ಪಾಕಿಸ್ತಾನದ ಕಾಸ್ಮೋಸ್‌ ಎಂಜಿನಿಯರಿಂಗ್‌ ಕಂಪನಿಗೆ ಕಳುಹಿಸುತ್ತಿತ್ತು ಎಂದು ಗೊತ್ತಾಗಿದೆ. ಕಾಸ್ಮೋಸ್‌ ಎಂಜಿನಿಯರಿಂಗ್‌ ಕಂಪನಿಯು ಪಾಕಿಸ್ತಾನದ ಸೇನಾಪಡೆಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತದೆ. 

ಡಿಆರ್‌ಡಿಒದಿಂದ ತಪಾಸಣೆ: ಚೀನಾದ ಹಡಗಿನಲ್ಲಿದ್ದ ಸರಕನ್ನು ಡಿಆರ್‌ಡಿಎ ತಂಡ ಕೂಡ ಪರಿಶೀಲನೆ ನಡೆಸಿದ್ದು, ಸಿಎನ್‌ಸಿ ಯಂತ್ರವು ಪಾಕಿಸ್ತಾನದ ಕ್ಷಿಪಣಿ ಯೋಜನೆಗೆ ಬಳಕೆಯಾಗಬಹುದು ಎಂದು ವರದಿ ನೀಡಿದೆ. 

ಈ ಎಲ್ಲ ಕಾರಣಗಳಿಂದ ಹಡಗಿನಲ್ಲಿದ್ದ ಸರಕನ್ನು ಭಾರತ ಮುಟ್ಟುಗೋಲು ಹಾಕಿಕೊಂಡಿದೆ.2020ರಲ್ಲೂ ಚೀನಾದಿಂದ ಪಾಕಿಸ್ತಾನಕ್ಕೆ ಸಾಗಣೆಯಾಗುತ್ತಿದ್ದ ಮಿಲಿಟರಿ ಉತ್ಪನ್ನಗಳನ್ನು ಭಾರತದಲ್ಲಿ ಜಪ್ತಿ ಮಾಡಲಾಗಿತ್ತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !