ಶಾಸಕಾಂಗಕ್ಕೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸಲಹೆನವದೆಹಲಿ: ನ್ಯಾಯಾಲಯ ನೀಡುವ ತೀರ್ಪುಗಳನ್ನು ಹತ್ತಿಕ್ಕುವ ನಿರ್ಣಯ ತೆಗೆದುಕೊಳ್ಳುವ ಬದಲು ನ್ಯಾಯದಾನ ಮಾಡುವಾಗ ಉಂಟಾದ ಲೋಪಗಳನ್ನು ಸರಿಪಡಿಸಲು ಯೋಗ್ಯವಾಗುವಂತಹ ಶಾಸನಗಳನ್ನು ರೂಪಿಸಲು ಶಾಸನಸಭೆ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್ ತಿಳಿಸಿದರು.ಹಿಂದೂಸ್ತಾನ್ ಟೈಮ್ಸ್‌ಆಯೋಜಿಸಿದ್ದ ನಾಯಕತ್ವ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನ್ಯಾಯಾಲಯಗಳು ತೀರ್ಪು ನೀಡುವಾಗ ಕಾನೂನನ್ನು ಪರಿಗಣಿಸುತ್ತದೆಯೇ ಹೊರತು, ಸಮಾಜದ ಪ್ರತಿಕ್ರಿಯೆಯನ್ನಲ್ಲ. ಹಾಗಾಗಿ ಕಾನೂನನ್ನು ಸರಿಪಡಿಸಿದರೆ ಸಮಾಜದ ಭಾವನೆಗಳಿಗೆ ಅನುಗುಣವಾಗಿ ನ್ಯಾಯದಾನ ಮಾಡಬಹುದು. ನಾವು ಕಳೆದ 10 ತಿಂಗಳಿನಲ್ಲಿ 72,000 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, 31,000 ತೀರ್ಪುಗಳನ್ನು ವಿವಿಧ ಪ್ರಾದೇಶಿಕ ಭಾಷೆಗಳಿಗೆ ಅನುವಾದ ಮಾಡುವ ಮೂಲಕ ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ತಿಳಿಸಿದರು. ಇದೇ ವೇಳೆ ‘ನ್ಯಾಯಾಂಗದ ಹಿರಿಯ ಹುದ್ದೆಗಳು ಅನುಭವಿಗಳ ತಾಣವಾಗಿದ್ದು, ಅದನ್ನು ಪ್ರವೇಶ ಪರೀಕ್ಷೆಯ ಮೂಲಕ ನೇರ ನೇಮಕಾತಿ ಆಗುವಂತೆ ಮಾಡಿದರೆ ಹೆಚ್ಚಿನ ಮಹಿಳೆಯರನ್ನು ನ್ಯಾಯಾಂಗದ ಉನ್ನತ ಹುದ್ದೆಗಳಲ್ಲಿ ಕಾಣಬಹುದಾಗಿದೆ’ ಎಂದು ತಿಳಿಸಿದರು. ಹಾಗೆಯೇ ಭಾರತೀಯ ಕ್ರಿಕೆಟ್ ತಂಡವು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದಕ್ಕೆ ಶುಭ ಹಾರೈಸಿದರು.