ಮುಂಬೈ: ‘ಬಾಲಿವುಡ್ ನಟ ಸಲ್ಮಾನ್ ಖಾನ್ ಅಯೋಧ್ಯೆ ರಾಮಜನ್ಮಭೂಮಿಯ ಚಿತ್ರವುಳ್ಳ 61 ಲಕ್ಷ ರು. ಬೆಲೆಯ ಐಷಾರಾಮಿ ವಾಚ್ ಧರಿಸಿದ್ದು ಹರಾಮ್’ ಎಂದು ಅಖಿಲ ಭಾರತೀಯ ಮುಸ್ಲಿಂ ಜಮಾತ್‌ನ ಅಧ್ಯಕ್ಷರೂ ಆಗಿರುವ ಬರೇಲಿಯ ಮೌಲ್ವಿ ಶಹಾಬುದ್ದೀನ್ ರಜ್ವಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೌಲ್ವಿ, ‘ಸಲ್ಮಾನ್ ಅವರು ರಾಮಮಂದಿರವನ್ನು ಪ್ರಚಾರ ಮಾಡುವ ವಾಚ್ ಧರಿಸಿದ್ದು ಶರಿಯತ್ ಕಾನೂನಿನ ಪ್ರಕಾರ ಹರಾಮ್(ಇಸ್ಲಾಂನಲ್ಲಿ ನಿಷಿದ್ಧ). ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಅವರು ಧರ್ಮವಿರೋಧಿ ಚಟುವಟಿಕೆಗಳಲ್ಲಿ ತೊಡಗಬಾರದು’ ಎಂದಿದ್ದಾರೆ.
ತಮ್ಮ ಚಿತ್ರ ಸಿಕಂದರ್ ಪ್ರಚಾರಕ್ಕಾಗಿ ಸಲ್ಮಾನ್ ಅವರು ಜಾಕೋಬ್ ಆ್ಯಂಡ್ ಕೋ ಎಂಬ ಕಂಪನಿಯ, ರಾಮಮಂದಿರದ ಚಿತ್ರವಿರುವ ವಾಚ್ ಧರಿಸಿದ್ದರು.
ದಲ್ಲೇವಾಲ್ ಉಪವಾಸ ಅಂತ್ಯ: ಸುಪ್ರೀಂಗೆ ಪಂಜಾಬ್ ಮಾಹಿತಿ
ಉಪವಾಸ ನಿಲ್ಲಿಸಿಲ್ಲ: ರೈತ ನಾಯಕರ ಸ್ಪಷ್ಟನೆ
ರೈತ ನಾಯಕ ದಲ್ಲೇವಾಲ್ ಉಪವಾಸ ನಿಲ್ಲಿಸಿದ್ದಾರೆ ಎಂದು ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದೆ. ವಾಸ್ತವವಾಗಿ ಅವರು ವೈದ್ಯಕೀಯ ಚಿಕಿತ್ಸೆ ಕಾರಣ ನೀರು ಕುಡಿದ್ದಾರೆಯೇ ವಿನಾ ಉಪವಾಸ ನಿಲ್ಲಿಸಿಲ್ಲ. ಆಮರಣ ನಿರಶನ ಮುಂದುವರಿಸಿದ್ದಾರೆ ಎಂದು ರೈತ ನಾಯಕರು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ಬೆಳೆಗಳ ಬೆಂಬಲ ಬೆಲೆಗೆ ಕಾಯ್ದೆ ರೂಪ ನೀಡಬೇಕು ಎಂಬುದು ಸೇರಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ವರ್ಷ ನ.26ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪಂಜಾಬ್‌ನ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ತಮ್ಮ ಉಪವಾಸ ಕೈ ಬಿಟ್ಟಿದ್ದಾರೆ ಎಂದು ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.‘ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ದಲ್ಲೇವಾಲ್ ಶುಕ್ರವಾರ ಬೆಳಿಗ್ಗೆ ನೀರು ಕುಡಿದು ಉಪವಾಸ ಕೈಬಿಟ್ಟರು ಎಂದು ಪಂಜಾಬ್ ಸರ್ಕಾರ’ ಹೇಳಿದೆ. ಇನ್ನು ಇದೇ ವೇಳೆ ಸುಪ್ರೀಂ ಕೋರ್ಟ್ ರೈತ ಬೇಡಿಕೆಗಳ ಈಡೇರಿಕೆಗಳಿಗೆ ದಲ್ಲೆವಾಲ್ ಪ್ರಯತ್ನಗಳನ್ನು ಶ್ಲಾಘಿಸಿದ್ದು, ‘ಯಾವುದೇ ರಾಜಕೀಯ ಅಜೆಂಡಾಗಳಿರದ ನಿಜವಾದ ನಾಯಕ’ ಎಂದಿದೆ.
ಇದೇ ಸಂದರ್ಭದಲ್ಲಿ ಪಂಜಾಬ್ ಸರ್ಕಾರ ಖನೌರಿ ಮತ್ತು ಶಂಭು ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರನ್ನು ಚದುರಿಸಲಾಗಿದೆ. ಮುಚ್ಚಿದ್ದ ರಸ್ತೆ ಮತ್ತು ಹೆದ್ದಾರಿಗಳನ್ನು ತೆರವುಗೊಳಿಸಲಾಗಿದೆ ಎಂದೂ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ವಕ್ಫ್ ಮಸೂದೆ ವಿರುದ್ಧ ಕಪ್ಪುಪಟ್ಟಿ ಧರಿಸಿ ಮುಸ್ಲಿಮರ ನಮಾಜ್
ಪಟನಾ: ರಂಜಾನ್ ತಿಂಗಳ ಕೊನೆಯ ಶುಕ್ರವಾರದಂದು ದೇಶದ ಬಹುತೇಕ ಕಡೆಗಳಲ್ಲಿ ಶಾಂತಿಯುತ ಪ್ರಾರ್ಥನೆ ನೆರವೇರಿತು. ಆದರೆ ದೇಶದ ಕೆಲವೆಡೆ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗಾಗಿ ಮುಸ್ಲಿಮರು ಕೈಗೆ ಕಪ್ಪು ಪಟ್ಟಿ ಧರಿಸಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.ಪಟನಾದ ದರಿಯಾಪುರ ಮಸೀದಿಯ ಇಮಾಂ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯ ಕರೆ ಮೇರೆಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು ಎಂದರು.
ಇನ್ನು ಉತ್ತರ ಪ್ರದೇಶದ ಸಂಭಲ್ ಸೇರಿ ಬಹುತೇಕ ಎಲ್ಲಾ ಕಡೆಗಳಲ್ಲಿಯೂ ಯಾವುದೇ ತೊಂದರೆಯಾಗದೇ ಶಾಂತಿಯುತ ಪ್ರಾರ್ಥನೆ ನಡೆಯಿತು.
ಇನ್ನು ಡಾ। ಅಂಬೇಡ್ಕರ್ ಜಯಂತಿಗೆ ದೇಶಾದ್ಯಂತ ಸರ್ಕಾರಿ ರಜೆ
ನವದೆಹಲಿ: ಸಂವಿಧಾನ ಶಿಲ್ಪಿ ಡಾ। ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾದ ಏ.14ರನ್ನು ದೇಶಾದ್ಯಂತ ಸರ್ಕಾರಿ ರಜೆಯನ್ನಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.ಕೇಂದ್ರ ಸಾಂಸ್ಕೃತಿಕ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಈ ಘೋಷಣೆ ಮಾಡಿ. ‘ಸಂವಿಧಾನ ಶಿಲ್ಪಿ, ಸಮಾಜದಲ್ಲಿ ಸಮಾನತೆಯ ಹೊಸ ಯುಗ ಸ್ಥಾಪಿಸಿದ್ದ ಡಾ। ಅಂಬೇಡ್ಕರ್ ಅವರ ಜಯಂತಿಯನ್ನು ಇನ್ನು ಮುಂದೆ ಸಾರ್ವಜನಿಕ ರಜೆಯನ್ನಾಗಿ ಘೋಷಿಸಲಾಗಿದೆ. ಈ ನಿರ್ಧಾರ ತೆಗೆದುಕೊಂಡು ಅಂಬೇಡ್ಕರ್ ಅವರ ಪರಮ ಭಕ್ತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭಾವನೆಗೆ ಗೌರವ ಸೂಚಿಸಿದ್ದಾರೆ’ ಎಂದು ಹೇಳಿದ್ದಾರೆ.
ಕರ್ನಾಟಕ ಸೇರಿ ಕೆಲವು ಕಡೆ ಅಂಬೇಡ್ಕರ್ ಜಯಂತಿ ಈಗಾಗಲೇ ರಾಜ್ಯ ಮಟ್ಟದಲ್ಲಿ ಸರ್ಕಾರಿ ದಿನವಾಗಿದೆ. ಆದರೆ ದೇಶಾದ್ಯಂತ ಇದಕ್ಕೆ ರಜೆ ಇರಲಿಲ್ಲ.
ಎಟಿಎಂ ಹಣ ವಿತ್ ಡ್ರಾ ಶುಲ್ಕ ಮೇ 1ರಿಂದ 2 ರು. ಹೆಚ್ಚಳ
ಮುಂಬೈ: ನಿಗದಿತ ಮಿತಿಗಿಂತ ಹೆಚ್ಚಿಗೆ ಎಟಿಎಂನಿಂದ ಹಣ ಡ್ರಾ ಮಾಡಿದರೆ ಅದರ ಮೇಲಿನ ಶುಲ್ಕವನ್ನು ಪ್ರತಿ ವಹಿವಾಟಿಗೆ 2 ರು. ಹೆಚ್ಚಳಕ್ಕೆ ಆರ್‌ಬಿಐ ನಿರ್ಧರಿಸಿದ್ದು, ಈ ನಿಯಮ ಮೇ.1ರಿಂದ ಜಾರಿಗೆ ಬರಲಿದೆ. ಹೊಸ ನಿಯಮದ ಪ್ರಕಾರ ಗ್ರಾಹಕರಿಗೆ ಈ ಮುಂಚಿನ 21 ರು. ಬದಲು 23 ರು. ಹೊರೆ ಬೀಳಲಿದೆ.
ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ಎಟಿಎಂನಿಂದ ಪ್ರತಿ ತಿಂಗಳು 5 ಉಚಿತ (ಹಣಕಾಸು ಮತ್ತು ಹಣಕಾಸೇತರ) ವಹಿವಾಟುಗಳನ್ನು ನಡೆಸಬಹುದು. ಆದರೆ ಇತರ ಬ್ಯಾಂಕ್ ಎಟಿಎಂಗಳಿಂದ ಮೆಟ್ರೋ ಕೇಂದ್ರಗಳಲ್ಲಿ ಉಚಿತವಾಗಿ 3 ವಹಿವಾಟು ಮತ್ತು ಮೆಟ್ರೋ ಅಲ್ಲದ ಕೇಂದ್ರಗಳಲ್ಲಿ 5 ವಹಿವಾಟು ನಡೆಸಬಹುದು.‘ಉಚಿತ ವಹಿವಾಟುಗಳನ್ನು ಹೊರತುಪಡಿಸಿ, ಪ್ರತಿ ವಹಿವಾಟಿಗೆ ಗ್ರಾಹಕರಿಗೆ 21 ರು. ಬದಲಾಗಿ ಗರಿಷ್ಠ 23 ರು. ಶುಲ್ಕ ವಿಧಿಸಲಾಗುತ್ತದೆ. ಮೇ1ರಿಂದ ಈ ನಿಯಮ ಜಾರಿಗೆ ಬರಲಿದೆ’ ಎಂದು ಅರ್‌ಬಿಐ ಹೇಳಿದೆ.