;Resize=(412,232))
ನವದೆಹಲಿ: ನೀಟ್ ಅಕ್ರಮದ ಕಾರಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕಾರಣರಾದ ಕಾಕ್ರೋಚ್ ಪಕ್ಷದ ನಾಯಕರು ಭಾನುವಾರ, ಸಂಭ್ರಮದ ಪಾರ್ಟಿ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ನಾಯಕರು ಸೇರಿ ಹಲವರು ಇದಕ್ಕೆ ಆಕ್ಷೇಪಿಸಿದ್ದಾರೆ.‘ನೀಟ್ ಪರೀಕ್ಷೆ ರದ್ದತಿಗೆ ನೊಂದು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದರು. ಅವರಿಗೋಸ್ಕರ ನಾವು ಪ್ರತಿಭಟನೆ ನಡೆಸಿದೆವು ಎಂದು ಕಾಕ್ರೋಚ್ ಪಾರ್ಟಿ ಹೇಳುತ್ತದೆ. ಇಂಥ ಸಾವಿನ ಶೋಕದಲ್ಲೂ ಈ ಪಾರ್ಟಿ ಸರಿಯೇ’ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿ ಪಕ್ಷದ ನಾಯಕರಾದ ಸೌರವ್ ದಾಸ್ ಸೇರಿ ಅನೇಕರು ನರ್ತಿಸುವ ಭಂಗಿಯಲ್ಲಿ ಕಾಣಿಸುತ್ತಾರೆ.
ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ಮಾತನಾಡಿ, ’ಪಂಚತಾರಾ ಹೋಟೆಲ್‌ನಲ್ಲಿ ನಡೆದ ಪಾರ್ಟಿ, ಕಾಕ್ರೋಚ್ ಪಕ್ಷದ ದ್ವಂದ್ವ ಪ್ರದರ್ಶಿಸುತ್ತದೆ’ ಎಂದಿದ್ದಾರೆ.
ಆದರೆ ಕಾಕ್ರೋಚ್ ಪಕ್ಷವು, ‘ಈ ಸಭೆಯು ಸುಮಾರು 150-200 ಸ್ವಯಂಸೇವಕರಿಗೆ ಧನ್ಯವಾದ ಹೇಳುವ ಸಭೆಯಾಗಿತ್ತು. ನಾಯಕರು ಪ್ರತಿಭಟನಾಕಾರರಿಗೆ ಈಗಲೂ ಸಹಾಯ ಮಾಡುತ್ತಿದ್ದಾರೆ. ಜವಾಬ್ದಾರಿಯಿಂದ ನಾವು ಹಿಂದೆ ಸರಿದಿಲ್ಲ’ ಎಂದಿದ್ದಾರೆ. ಅಲ್ಲದೆ, ’ಇದು ಜೆನ್‌ಝೀಗಳ ಭಾಷೆ. ಅಂಕಲ್-ಆಂಟಿಗಳು ಬೇಕೆಂದರೆ ದೂರಬಹುದು’ ಎಂದೂ ಬಿಜೆಪಿಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ನವದೆಹಲಿ: ದೆಹಲಿಯಲ್ಲಿ ಜಿರಳೆ ಪಕ್ಷ ನಡೆಸಿದ ಸಂಸತ್ ಚಲೋ ಮೆರವಣಿಗೆ ವೇಳೆ 2,873 ಜನರು ಕ್ರಿಮಿನಲ್ ಹಿನ್ನೆಲೆಯವರು ಎಂದು ಪೊಲೀಸರು ಸಿಸಿಟೀವಿ ಮುಖಾಂತರ ಪತ್ತೆ ಮಾಡಿದ್ದಾರೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಸಿಸಿಟಿವಿಯಲ್ಲಿ ಪೊಲೀಸರ ಮೇಲೆ ದಾಳಿ ಮಾಡುತ್ತಿರುವುದು ಮತ್ತು ವಾಹನಗಳನ್ನು ಹಾನಿಗೊಳಿಸುತ್ತಿರುವುದು ಕಂಡುಬಂದ 2,873 ಮಂದಿಯನ್ನು ಪರಿಶೀಲಿಸಲಾಗಿದೆ. ಇವರಲ್ಲಿ 989 ಮಂದಿ ಗಂಭೀರ ಅಪರಾಧಗಳಲ್ಲಿ ಪೂರ್ವಾಪರಾಧ ಇತಿಹಾಸ ಹೊಂದಿದ್ದಾರೆ. 101 ಕೊಲೆ ಆರೋಪಿಗಳು, 284 ಮಂದಿ ಡಕಾಯಿತಿ ಮತ್ತು ದರೋಡೆ ಪ್ರಕರಣಗಳಲ್ಲಿ ಬುಕ್ ಆದವರು ಹಾಗೂ 92 ಮಂದಿ ಲೈಂಗಿಕ ದೌರ್ಜನ್ಯದ ಆರೋಪಿಗಳಿದ್ದಾರೆ.
ಇದಲ್ಲದೆ, ಸ್ನ್ಯಾಚಿಂಗ್ ಪ್ರಕರಣಗಳಲ್ಲಿ 135, ಶಸ್ತ್ರಾಸ್ತ್ರ ಕಾಯಿದೆಯಡಿ 229, ಎನ್‌ಡಿಪಿಎಸ್ ಕಾಯಿದೆಯಡಿ 67 ಮತ್ತು ಅಪಹರಣ ಪ್ರಕರಣಗಳಲ್ಲಿ ಇರುವ 19 ಮಂದಿ ಆರೋಪಿಗಳಿದ್ದಾರೆ.
ಕೊಲೆ ಆರೋಪಿಗಳ 101 ಮಂದಿಯಲ್ಲಿ 42 ಮಂದಿ ಎರಡು ಅಥವಾ ಹೆಚ್ಚು ಪ್ರಕರಣಗಳಲ್ಲಿ ಬುಕ್ ಆಗಿದ್ದು, 12 ಮಂದಿ ಕನಿಷ್ಠ 10 ಪ್ರಕರಣಗಳ ಇತಿಹಾಸ ಹೊಂದಿದ್ದಾರೆ. ಡಕಾಯಿತಿ ಮತ್ತು ದರೋಡೆ ಪ್ರಕರಣಗಳ 284 ಮಂದಿಯಲ್ಲಿ 155 ಮಂದಿ ಬಹು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, 31 ಮಂದಿ 10 ಅಥವಾ ಹೆಚ್ಚು ಪ್ರಕರಣಗಳಲ್ಲಿ ಬುಕ್ ಆಗಿದ್ದಾರೆ.