ಎಮರ್ಜೆನ್ಸಿಗೆ 50 ವರ್ಷ ಹಿನ್ನೆಲೆ ಸಂಸತ್‌ ಅಧಿವೇಶನ : ಕೈ ಶಂಕೆ

KannadaprabhaNewsNetwork |  
Published : May 30, 2025, 12:03 AM ISTUpdated : May 30, 2025, 04:59 AM IST
ಜೈರಾಂ ರಮೇಶ್ | Kannada Prabha

ಸಾರಾಂಶ

1975ರಲ್ಲಿ ದೇಶದಲ್ಲಿ ಹೇರಲ್ಪಟ್ಟಿದ್ದ ತುರ್ತುಸ್ಥಿತಿಯ 50ನೇ ವಾರ್ಷಿಕೋತ್ಸವದ ಪ್ರಯುಕ್ತ ಜೂ.25-26ರಂದು ವಿಶೇಷ ಸಂಸತ್‌ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ಕಾಂಗ್ರೆಸ್‌ ಸಂಶಯ ವ್ಯಕ್ತಪಡಿಸಿದೆ.

ನವದೆಹಲಿ: 1975ರಲ್ಲಿ ದೇಶದಲ್ಲಿ ಹೇರಲ್ಪಟ್ಟಿದ್ದ ತುರ್ತುಸ್ಥಿತಿಯ 50ನೇ ವಾರ್ಷಿಕೋತ್ಸವದ ಪ್ರಯುಕ್ತ ಜೂ.25-26ರಂದು ವಿಶೇಷ ಸಂಸತ್‌ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ಕಾಂಗ್ರೆಸ್‌ ಸಂಶಯ ವ್ಯಕ್ತಪಡಿಸಿದೆ. ಅಲ್ಲದೆ, ‘ಇದು ನಿಜವಾದ ಮತ್ತು ತುರ್ತಾಗಿ ಪರಿಹಾರವಾಗಬೇಕಾಗಿರುವ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯುವ ಯತ್ನ’ ಎಂದು ಟೀಕಿಸಿದೆ.

ವಿಶೇಷ ಅಧಿವೇಶನದ ಬಗ್ಗೆ ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಕಡೆಯಿಂದ ಈವರೆಗೆ ಅಧಿಕೃತ ಘೋಷಣೆ/ ಪ್ರತಿಕ್ರಿಯೆ ಬಂದಿಲ್ಲ.

‘ಪಾಕಿಸ್ತಾನ ಮತ್ತು ಉಗ್ರರನ್ನು ಗುರಿಯಾಗಿಸಿಕೊಳ್ಳಬೇಕಾಗಿರುವ ಈ ಹೊತ್ತಿನಲ್ಲಿ ಬಿಜೆಪಿ ಕೇವಲ ಕಾಂಗ್ರೆಸ್‌ ಮೇಲೆ ದಾಳಿ ನಡೆಸುವ ಬಗ್ಗೆ ಆಸಕ್ತಿ ತೋರಿಸುತ್ತಿದೆ’ ಎಂದು ಆರೋಪಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಪಹಲ್ಗಾಂ ದಾಳಿಯ ಬಗ್ಗೆ ಚರ್ಚೆ ಮಾಡಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಕರೆಯಬೇಕು ಎಂದು ಕಾಂಗ್ರೆಸ್‌ ಏ.22ರ ರಾತ್ರಿಯಿಂದಲೇ ಆಗ್ರಹಿಸುತ್ತಿದೆ. ಉಗ್ರದಾಳಿ ಚರ್ಚೆಗೆ ವಿಶೇಷ ಅಧಿವೇಶನ ಕರೆದು ಒಮ್ಮತದ ನಿರ್ಣಯದ ಮೂಲಕ ದೇಶದ ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸುವಂತೆ ಲೋಕಸಭೆ ಮತ್ತು ರಾಜ್ಯಸಭೆಯ ವಿಪಕ್ಷ ನಾಯಕರು ಪತ್ರದ ಮುಖೇನವೂ ಮನವಿ ಮಾಡಿದ್ದರು. ಆದರೆ ಪ್ರಧಾನಿ ನಮ್ಮ ಆ ಸಲಹೆಯನ್ನೂ ಪರಿಗಣಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಮನ ತಿರುಗಿಸುವ ಯತ್ನ:

ಬಿಜೆಪಿ ಮೇಲೆ ಟೀಕಾಪ್ರಹಾರವನ್ನು ಮುಂದುವರೆಸಿದ ರಮೇಶ್‌, ‘ತುರ್ತುಸ್ಥಿತಿಯ 50ನೇ ವರ್ಷಾಚರಣೆಯು, ಪ್ರಸ್ತುತ ಇರುವ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆ ಕಡೆ ತಿರುಗಿಸುವ ಯತ್ನ. ಪ್ರಧಾನಿ ಮೋದಿ ಕಳೆದ 11 ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ಹೇರಿದ್ದಾರೆ. ಪಹಲ್ಗಾಂನಲ್ಲಿ ದಾಳಿ ಮಾಡಿದ ಉಗ್ರರು ಇನ್ನೂ ಯಾಕೆ ತಲೆಮರೆಸಿಕೊಂಡಿದ್ದಾರೆ? ಕನದವಿರಾಮದ ಮಧ್ಯಸ್ಥಿಕೆ ವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಏಕೆ ಅವಕಾಶ ಮಾಡಿಕೊಟ್ಟರು? 2020ರ ಜು.19ರಂದು (ಗಲ್ವಾನ್‌ ಸಂಘರ್ಷದ ಬಳಿಕ) ಚೀನಾಗೆ ಸಾರ್ವಜನಿಕವಾಗಿ ಕ್ಲೀನಚಿಟ್‌ ಹೇಗೆ ಕೊಡಲಾಯಿತು ಎಂಬ ಬಗ್ಗೆ ಉತ್ತರಿಸಲು ಮೋದಿ ನಿರಾಕರಿಸುತ್ತಿದ್ದಾರೆ. ಈಗಿನ ಸಮಸ್ಯೆಗಳನ್ನು ಬಿಟ್ಟು 50 ವರ್ಷ ಹಿಂದಿನದರ ಬಗ್ಗೆ ಚರ್ಚಿಸಲು ಬಯಸಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

1994ರ ಒಪ್ಪಂದ ನವೀಕರಿಸಿ:

‘ಭಾರತ ಮತ್ತು ಪಾಕಿಸ್ತಾನಗಳೆರಡೂ ಅಣುಶಕ್ತ ರಾಷ್ಟ್ರಗಳಾಗಿರುವ ಮತ್ತು ಚೀನಾದೊಂದಿಗೂ ಪಾಕ್‌ ಸಂಬಂಧ ಸುಧಾರಿಸುತ್ತಿರುವ ಈ ಹೊತ್ತಿನಲ್ಲಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ಖಾಲಿ ಮಾಡುವಂತೆ ಪಾಕಿಸ್ತಾನಕ್ಕೆ ನಿರ್ದೇಶಿಸುವ 1994ರ ನಿರ್ಣಯವನ್ನು ನವೀಕರಿಸಿ ಮರುಜಾರಿಗೊಳಿಸುವ ಸಂಬಂಧವೂ ವಿಶೇಷ ಅಧಿವೇಶನ ಕರೆಯಬೇಕು’ ಎಂದು ರಮೇಶ್‌ ಆಗ್ರಹಿಸಿದ್ದಾರೆ.

ಉಗ್ರರ ಜೊತೆ ಸಂಸದರ ಹೋಲಿಸಿ ಕಾಂಗ್ರೆಸ್‌ನ ಜೈರಾಂ ಹೊಸ ವಿವಾದ

ನವದೆಹಲಿ: ಪಾಕಿಸ್ತಾನದ ಉಗ್ರ ಮುಖವಾಡ ಬಯಲು ಮಾಡಲು ವಿದೇಶಕ್ಕೆ ತೆರಳಿರುವ ಸರ್ವಪಕ್ಷ ನಿಯೋಗವನ್ನು ಉಗ್ರರಿಗೆ ಹೋಲಿಸುವ ಮೂಲಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ವಿವಾದ ಸೃಷ್ಟಿಸಿದ್ದಾರೆ.ಗುರುವಾರ ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜೈರಾಂ, ‘ಪಹಲ್ಗಾಂ ದಾಳಿ ನಡೆಸಿದ ಉಗ್ರರು ಇನ್ನೂ ಅಲ್ಲಿ ಇಲ್ಲಿ ತಿರುಗಾಡುತ್ತಿದ್ದಾರೆ. ಅದೇ ರೀತಿ ನಮ್ಮ ಸಂಸದರೂ (ಸರ್ವಪಕ್ಷ ನಿಯೋಗದ ಸದಸ್ಯರು) ಸುತ್ತಾಡುತ್ತಿದ್ದಾರೆ. ಬಿಜೆಪಿಯ ದಾಳಿ ಉಗ್ರರ ಮೇಲಿರಬೇಕಿತ್ತು. ಆದರೆ ಅವರು ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಮೇಲೆ ಪ್ರತಿದಿನ ಕ್ಷಿಪಣಿ ಉಡಾಯಿಸುತ್ತಿದ್ದಾರೆ’ ಎಂದಿದ್ದಾರೆ.

ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ‘ರಾಜತಾಂತ್ರಿಕ ದಾಳಿಯಿಂದ ಪಾಕಿಸ್ತಾನ ಮೂಲೆಗುಂಪಾಗುತ್ತಿರುವಾಗ, ಕಾಂಗ್ರೆಸ್ ಮತ್ತೊಮ್ಮೆ ಪಾಕ್ ಪರವಾಗಿ ಮಾತನಾಡಲು ಮುಂದಾಗಿದೆ. ಜೈರಾಂ ಹೇಳಿಕೆ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ರಾಜತಾಂತ್ರಿಕ ದಾಳಿಗೆ ಮಾಡಿದ ಅವಮಾನ. ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಕಿಡಿ ಕಾರಿದ್ದಾರೆ.

PREV
Read more Articles on

Recommended Stories

ಲಡ್ಕಿ ಬಹಿನ್‌’ ಯೋಜನೆಯಡಿ 14,000 ಪುರುಷರ ನೋಂದಣಿ!
ಉಗ್ರರಿಗೆ ಸುರಕ್ಷಿತ ನೆಲೆ ಇಲ್ಲ ಎಂಬುದು ಸಿಂದೂರದಿಂದ ಸಾಬೀತು: ಮೋದಿ