ಇಸ್ರೇಲ್ ದಾಳಿಗೆ ಹಮಾಸ್ ನಾಯಕ ಸಿನ್ವಾರ್‌ ಬಲಿ : ನೆತನ್ಯಾಹು

KannadaprabhaNewsNetwork |  
Published : May 29, 2025, 02:22 AM ISTUpdated : May 29, 2025, 04:27 AM IST
ಸಿನ್ವರ್‌ | Kannada Prabha

ಸಾರಾಂಶ

ಇತ್ತೀಚೆಗೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಸಂಘಟನೆಯ ನಾಯಕ, ಇಸ್ರೇಲ್ - ಹಮಾಸ್‌ ಯುದ್ಧದ ಸೂತ್ರಧಾರಿ ಯಾಹ್ಯಾ ಸಹೋದರ ಮೊಹಮ್ಮದ್‌ ಸಿನ್ವಾರ್‌ರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ.

ದೇರ್‌- ಅಲ್- ಬಲಾಹ್‌ : ಇತ್ತೀಚೆಗೆ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಸಂಘಟನೆಯ ನಾಯಕ, ಇಸ್ರೇಲ್ - ಹಮಾಸ್‌ ಯುದ್ಧದ ಸೂತ್ರಧಾರಿ ಯಾಹ್ಯಾ ಸಹೋದರ ಮೊಹಮ್ಮದ್‌ ಸಿನ್ವಾರ್‌ರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ. 

ಗಾಜಾ ಮೇಲೆ ಇಸ್ರೇಲ್ ನಡೆಸಿದ ವೇಳೆ ಬಲಿಯಾದ ಹಮಾಸ್‌ ನಾಯಕರ ಪಟ್ಟಿ ಬಿಡುಗಡೆ ಮಾಡಿದ ನೆತನ್ಯಾಹು ಸಿನ್ವಾರ್ ಕೂಡ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಮೊಹಮ್ಮದ್ ಸಹೋದರ ಯಾಹ್ಯಾ ಹಮಾಸ್- ಇಸ್ರೇಲ್ ಯುದ್ಧದ ಸೂತ್ರಧಾರಿಗಳಲ್ಲಿ ಒಬ್ಬನಾಗಿದ್ದು, ಕಳೆದ ವರ್ಷ ಇಸ್ರೇಲ್ ಪಡೆಗಳಿಂದ ಹತನಾಗಿದ್ದನು.

ಮೊದಲ ಬಾರಿ ಗಡಿ ದಾಟಿ ದಾಳಿ: ತರೂರ್‌ ಹೇಳಿಕೆಗೆ ಕೈ ಕೆಂಡವಿದೇಶದಲ್ಲಿ ಸರ್ಕಾರ, ಮೋದಿ ಹೊಗಳಿದ್ದಕ್ಕೆ ಆಕ್ರೋಶ

ನವದೆಹಲಿ: 2016ರಲ್ಲಿ ಅಂದಿನ ಕೇಂದ್ರ ಸರ್ಕಾರ, ಇತಿಹಾಸದಲ್ಲೇ ಮೊದಲ ಬಾರಿಗೆ ಗಡಿದಾಟಿ ಹೋಗಿ ಪಾಕಿಸ್ತಾನದ ಮೇಲೆ ದಾಳಿ ನಡೆಸಿತ್ತು ಎಂದು ವಿದೇಶಗಳಲ್ಲಿ ಪಕ್ಷದ ನಾಯಕ ಶಶಿ ತರೂರ್‌ ಆಡಿದ ಮಾತಿಗೆ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ.

 ತರೂರ್ ಬಿಜೆಪಿಯ ಸೂಪರ್ ವಕ್ತಾರ ಎಂದು ಪಕ್ಷದ ನಾಯಕರು ಕಿಡಿ ಕಾರಿದ್ದಾರೆ.ಸರ್ವಪಕ್ಷ ನಿಯೋಗದ ನಾಯಕರಾಗಿ ಪನಾಮಗೆ ತೆರಳಿದ್ದ ತರೂರ್‌ ಅಲ್ಲಿ ಮೋದಿ ಸರ್ಕಾರವನ್ನು ಹಾಡಿ ಹೊಗಳಿದ್ದರು. ‘ 2016ರ ಸರ್ಜಿಕಲ್ ಸ್ಟ್ರೈಕ್‌ಗೂ ಮುಂಚೆ ಭಾರತ ಎಂದಿಗೂ ಎಲ್‌ಒಸಿ ಅಂತಾರಾಷ್ಟ್ರೀಯ ಗಡಿ ದಾಟಿರಲಿಲ್ಲ’ ಎಂದಿದ್ದರು. ವಿದೇಶಿ ನೆಲದಲ್ಲಿ ತಮ್ಮ ಪಕ್ಷದ ಸಂಸದರ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ತಂದೊಡ್ಡಿದೆ.

ಕಾಂಗ್ರೆಸ್‌ ನಾಯಕ ಉದಿತ್ ರಾಜ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ‘ಪ್ರೀತಿಯ ಶಶಿ ತರೂರ್‌, ಪ್ರಧಾನಿ ಮೋದಿ ನಿಮ್ಮನ್ನು ಬಿಜೆಪಿಯ ಸೂಪರ್ ವಕ್ತಾರರೆಂದು ಘೋಷಿಸಬೇಕೆಂದು ಒತ್ತಾಯಿಸುತ್ತೇನೆ. ಭಾರತಕ್ಕೆ ಬರುವ ಮೊದಲು ನಿಮ್ಮನ್ನು ವಿದೇಶಾಂಗ ಸಚಿವ ಎಂದೂ ಸಹ ಘೋಷಿಸಬೇಕು. ಪ್ರಧಾನಿ ಮೋದಿ ಅವರಿಗಿಂತ ಮೊದಲು ಭಾರತ ಎಂದಿಗೂ ಎಲ್‌ಒಸಿ, ಅಂತಾರಾಷ್ಟ್ರೀಯ ಗಡಿಯನ್ನು ದಾಟಿಲ್ಲ ಎನ್ನುವ ಮೂಲಕ ನೀವು ಕಾಂಗ್ರೆಸ್‌ನ ಸುವರ್ಣ ಇತಿಹಾಸ ಹೇಗೆ ಅವಮಾನಿಸುತ್ತೀರಿ? ನಿಮಗೆ ಇಷ್ಟೊಂದು ಸಹಾಯ ಮಾಡಿದ ಪಕ್ಷಕ್ಕೆ ನೀವು ಇಷ್ಟೊಂದು ಅಪ್ರಾಮಾಣಿಕರಾಗಿರಲು ಹೇಗೆ ಸಾಧ್ಯ ’ ಎಂದು ತರೂರ್‌ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಯುಪಿಎಸ್‌ಸಿ ಹೊಸ ಪೋರ್ಟಲ್‌ ಆರಂಭ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಆನ್‌ಲೈನ್‌ನಲ್ಲಿ ನೋಂದಣಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಹೊಸ ಅರ್ಜಿ ಪೋರ್ಟಲ್ ಅನ್ನು ಅನಾವರಣಗೊಳಿಸಿದೆ. ಎಲ್ಲಾ ಅರ್ಜಿದಾರರು https://upsconline.nic.in ವೆಬ್‌ಸೈಟ್ ಬಳಸಿಕೊಂಡು ಹೊಸ ಪೋರ್ಟಲ್‌ನಲ್ಲಿ ಅರ್ಜಿ ಭರ್ತಿ ಮಾಡಿ ತಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಆಯೋಗ ತಿಳಿಸಿದೆ. ‘ಹಳೆಯ ಒನ್ ಟೈಮ್ ನೋಂದಣಿ (ಒಟಿಆರ್) ಮಾಡ್ಯೂಲ್ ಇನ್ನು ಮುಂದೆ ಅನ್ವಯಿಸುವುದಿಲ್ಲ. ಹೊಸ ಅರ್ಜಿ ಪೋರ್ಟಲ್ ಮೇ 28ರಿಂದ ಪ್ರಾರಂಭವಾಗಿದೆ. ಆಯೋಗವು ನಡೆಸುವ ವಿವಿಧ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವಾಗ ಸಮಯವನ್ನು ಉಳಿಸಲು ಮತ್ತು ಕೊನೆಯ ಕ್ಷಣದ ಗಡಿಬಿಡಿಯನ್ನು ತಪ್ಪಿಸಲು ಈ ಪೋರ್ಟಲ್ ಸಹಾಯ ಮಾಡುತ್ತದೆ’ ಎಂದು ಹೇಳಿದೆ.

ನ್ಯಾ। ವರ್ಮಾ ಕಪಾಟಿನಲ್ಲಿ 1.5 ಅಡಿ ಎತ್ತರ ನೋಟು ಪತ್ತೆನೋಟಿನ ಬಗ್ಗೆ ನ್ಯಾ. ವರ್ಮಾ ಸ್ಪಷ್ಟನೆ ನೀಡಿಲ್ಲ: ವರದಿ

ನವದೆಹಲಿ: ದೆಹಲಿ ಹೈಕೋರ್ಟ್‌ನ ನ್ಯಾಯಧೀಶರಾಗಿದ್ದ ನ್ಯಾ. ಯಶವಂತ್‌ ವರ್ಮಾ ಮನೆಯಲ್ಲಿ ನಗದು ಪತ್ತೆಯಾಗಿದ್ದು ನಿಜ. ಸ್ಟೋರ್‌ರೂಂನಲ್ಲಿದ್ದ ಕಪಾಟಿನಲ್ಲಿ 1.5 ಅಡಿಯಷ್ಟು ಎತ್ತರದ ನೋಟಿನ ಕಂತೆ ಇದ್ದು, ಆ ಜಾಗದಲ್ಲಿ ಸುಟ್ಟು ಹೋದ ನಗದು ಪತ್ತೆಯಾಗಿತ್ತು ಎಂದು ಸುಪ್ರೀಂ ಕೋರ್ಟ್‌ ರಚಿಸಿದ್ದ ಸಮಿತಿಯ ವರದಿ ಹೇಳಿದೆ. ಜೊತೆಗೆ ನ್ಯಾ. ವರ್ಮಾ ವಾಗ್ದಂಡನೆಗೆ ಶಿಫಾರಸು ಮಾಡಲಾಗಿದೆ ಎಂದು ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಮಾ.14ರಂದು ಬೆಂಕಿ ಹೊತ್ತಿಕೊಂಡ ದಿನ ಮನೆಯಲ್ಲಿ ನ್ಯಾ।ವರ್ಮಾ ಅವರು ಇರಲಿಲ್ಲ. ಅಂದು ವರ್ಮಾ ಹೊರತು ಮಿಕ್ಕೆಲ್ಲರೂ ಮನೆಯಲ್ಲಿದ್ದರು. ಸ್ಟೋರ್‌ರೂಂಗೆ ಮನೆಯವರನ್ನು ಹೊರತುಪಡಿಸಿ ಮಿಕ್ಕಾರಿಗೂ ಪ್ರವೇಶವಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿನ ಕುರಿತು ವರ್ಮಾ ಯಾವುದೇ ಸ್ಪಷ್ಟನೆ ನೀಡಿಲ್ಲ. ತಮ್ಮ ಮೇಲೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಸೆಬಿ ಮಾಜಿ ಮುಖ್ಯಸ್ಥೆ ಬುಚ್‌ಗೆ ಲೋಕಪಾಲ ಕ್ಲೀನ್‌ ಚಿಟ್‌

ನವದೆಹಲಿ: ಅದಾನಿ ಸಮೂಹದ ವಿರುದ್ಧ ಕೇಳಿಬಂದ ಅಕ್ರಮದ ಆರೋಪದ ಪ್ರಕರಣದಲ್ಲಿ ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿಯ ಮಾಜಿ ಮುಖ್ಯಸ್ಥೆ ಮಾಧವಿ ಬುಚ್‌ ಅವರ ಪಾಲೂ ಇದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ದೂರನ್ನು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಲೋಕಪಾಲ ವಜಾಗೊಳಿಸಿದೆ. 

ಜತೆಗೆ, ಸಲ್ಲಿಕೆಯಾಗಿದ್ದ ದೂರುಗಳನ್ನು ಆಧಾರರಹಿತ ಊಹೆಗಳು ಎಂದು ಕರೆದಿದೆ.‘ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸೇರಿದಂತೆ ಉಳಿದವರು ಸಲ್ಲಿಸಿದ ದೂರು, ಅದಾನಿ ಸಮೂಹದ ಅಕ್ರಮ ಬಯಲು ಮಾಡಲು ಶಾರ್ಟ್‌ ಸೆಲ್ಲರ್‌ ಕಂಪನಿ (ಹಿಂಡನ್‌ಬರ್ಗ್‌) ತಯಾರಿಸಿದ್ದ ವರದಿಯ ಆಧಾರದಲ್ಲಿವೆ. ಆದಕಾರಣ ಇದನ್ನು ವಜಾಗೊಳಿಸಲಾಗುತ್ತಿದೆ’ ಎಂದು ಲೋಕಪಾಲ ಅಧ್ಯಕ್ಷರ ನೇತೃತ್ವದ 6 ಸದಸ್ಯರ ಪೀಠ ಹೇಳಿದೆ.

2014ರ ಆ.10ರಂದು ಹಿಂಡನ್‌ಬರ್ಗ್‌ ಪ್ರಕಟಿಸಿದ್ದ ವರದಿಯಲ್ಲಿ, ಅದಾನಿ ಸಮೂಹದ ಅಕ್ರಮ ಹಣ ವರ್ಗಾವಣೆಯಲ್ಲಿ ಬುಚ್‌ ಹಾಗೂ ಅವರ ಪತಿಯ ಪಾಲೂ ಇತ್ತು ಎಂದು ಆರೋಪಿಸಿತ್ತು.

ರಾಜ್ಯಸಭೆಗೆ ನಟ ಕಮಲ್ ಹಾಸನ್ ಸ್ಪರ್ಧೆ ಸನ್ನಿಹಿತ?

ಚೆನ್ನೈ: ಜೂ.19 ರಂದು ತಮಿಳುನಾಡಿನ ರಾಜ್ಯಸಭೆಯ 6 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 1 ಸ್ಥಾನವನ್ನು ಕಮಲ್‌ ಹಾಸನ್‌ ಅವರನ್ನು ಮಕ್ಕಳ್‌ ನೀಧಿ ಮಯ್ಯಂ ಪಕ್ಷಕ್ಕೆ ಬಿಟ್ಟುಕೊಡಲು ಆಡಳಿತಾರೂಢ ಡಿಎಂಕೆ ನಿರ್ಧರಿಸಿದೆ. 

ಇದರೊಂದಿಗೆ ಕಮಲ್‌ ಹಾಸನ್‌ ರಾಜ್ಯ ಪ್ರವೇಶ ಮಾಡುವುದು ಬಹುತೇಕ ಖಚಿತವಾದಂತೆ ಆಗಿದೆ. ಈ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಮಲ್ ಹಾಸನ್ ಪಕ್ಷ ಮತ್ತು ಡಿಎಂಕೆ ಒಪ್ಪಂದವನ್ನು ಮಾಡಿಕೊಂಡಿತ್ತು. ಅಲ್ಲದೇ ಕಮಲ್ ಡಿಎಂಕೆ ಪರ ವ್ಯಾಪಕ ಪ್ರಚಾರವನ್ನು ಕೂಡ ಮಾಡಿದ್ದರು. ಇದರ ಭಾಗವಾಗಿಯೇ ಒಂದು ಕ್ಞೇತ್ರ ಎಂಎನ್‌ಎಂಗೆ ಬಿಟ್ಟು ಕೊಡುವ ಮೂಲಕ ಡಿಎಂಕೆ ಕಮಲ್ ಹಾಸನ್ ಸಂಸತ್ ಹಾದಿ ಸುಗಮ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತಕ್ಕೀಗ ಮೆಕ್ಸಿಕೋ ಶೇ.50 ತೆರಿಗೆ ಹೊಡೆತ
ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ