ಭಾರೀ ಶ್ರೀಮಂತರ ಪ್ರಮಾಣ ಏರಿಕೆ : ಬೆಂಗ್ಳೂರು ವಿಶ್ವ ನಂ.3

KannadaprabhaNewsNetwork |  
Published : May 29, 2025, 02:50 AM ISTUpdated : May 29, 2025, 04:24 AM IST
ಸಿರಿವಂತ ರಾಜಧಾನಿ | Kannada Prabha

ಸಾರಾಂಶ

ಕಳೆದೊಂದು ದಶಕದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಬೆಳವಣಿಗೆ ದಾಖಲಿಸಿರುವ ವಿಶ್ವದ ಟಾಪ್‌ 10 ಶ್ರೀಮಂತ ನಗರಗಳ ಪೈಕಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

ನವದೆಹಲಿ: ಕಳೆದೊಂದು ದಶಕದಲ್ಲಿ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಬೆಳವಣಿಗೆ ದಾಖಲಿಸಿರುವ ವಿಶ್ವದ ಟಾಪ್‌ 10 ಶ್ರೀಮಂತ ನಗರಗಳ ಪೈಕಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಇಲ್ಲಿ ಕಳೆದೊಂದು ದಶಕದಲ್ಲಿ ಕೋಟ್ಯಧಿಪತಿಗಳ ಬೆಳವಣಿಗೆ ಪ್ರಮಾಣ ಶೇ.120ರಷ್ಟಿದೆ. ವಿಶೇಷವೆಂದರೆ ಈ ರೀತಿ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ವಿಶ್ವದ 20 ಶ್ರೀಮಂತ ನಗರಗಳಲ್ಲಿ ಭಾರತದ ಮೂರು ನಗರಗಳು ಸ್ಥಾನಪಡೆದಿವೆ.

ವಿಶ್ವದಲ್ಲೇ ಅತಿ ಶೀಘ್ರವಾಗಿ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಬೆಳವಣಿಗೆ ದಾಖಲಿಸುತ್ತಿರುವ ಟಾಪ್‌ 10 ಶ್ರೀಮಂತ ನಗರಗಳ ಪಟ್ಟಿಯಲ್ಲಿ ಅಮೆರಿಕದ ಆರು ನಗರಗಳು ಸ್ಥಾನ ಪಡೆದಿವೆ. ಚೀನಾದ ಶೆನ್ಝೆನ್‌ ನಗರ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಕಳೆದೊಂದು ದಶಕದಲ್ಲಿ ಶೇ.142ರ ದರದಲ್ಲಿ ಕೋಟ್ಯಧಿಪತಿಗಳ ಬೆಳವಣಿಗೆಯಾಗುತ್ತಿದೆ. ಇನ್ನು ಎರಡನೇ ಸ್ಥಾನ ಅಮೆರಿಕದ ಸ್ಕಾಟ್‌ಡೆಲ್‌ ನಗರಕ್ಕೆ ದೊರಕಿದೆ. ಶೇ.125ರ ದರದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಇಲ್ಲಿ ಹೆಚ್ಚಳವಾಗುತ್ತಿದೆ. ಮೂರನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಶೇ.120ರ ದರದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಏರಿಕೆಯಾಗಿದೆ.

ಶೆನ್ಝೆನ್‌ ನಗರದಲ್ಲಿ 50,800, ಸ್ಕಾಟ್‌ಡೆಲ್‌ಲ್ಲಿ 14,800 ಮತ್ತು ಬೆಂಗಳೂರಿನಲ್ಲಿ 13600 ಕೋಟ್ಯಧಿಪತಿಗಳಿದ್ದಾರೆ. ಇನ್ನು 800 ಕೋಟಿಗಿಂತಲೂ ಹೆಚ್ಚಿನ ಆಸ್ತಿ ಹೊಂದಿರುವವರು ಶೆನ್ಝೆನ್‌ನಲ್ಲಿ 156, ಸ್ಕಾಟ್‌ಡೆಲ್‌ನಲ್ಲಿ 64 ಮತ್ತು ಬೆಂಗಳೂರಲ್ಲಿ 43 ಮಂದಿ ಇದ್ದಾರೆ. ಇನ್ನು 8500 ಕೋಟಿಗಿಂತಲೂ ಹೆಚ್ಚಿನ ಆಸ್ತಿ ಹೊಂದಿರುವವರು ಶೆನ್ಝೆನ್‌ ನಗರದಲ್ಲಿ 22, ಸ್ಕಾಟ್‌ಡೆಲ್‌ ನಗರದಲ್ಲಿ 5 ಮತ್ತು ಬೆಂಗಳೂರಿನಲ್ಲಿ 8 ಮಂದಿ ಇದ್ದಾರೆ.

ಒಂದೇ ಕಡೆ ಇದ್ದಾರೆ:

ಹೆಚ್ಚಿನ ಸಂಪತ್ತು ಹೊಂದಿರುವ ವ್ಯಕ್ತಿಗಳು(ಎಚ್‌ಎನ್‌ಡಬ್ಲ್ಯುಐ)ಗಳು ಸದ್ಯ ವಿಶ್ವದ ಕೆಲವೇ ಕೆಲವು ನಗರಗಳಿಗೆ ಸೀಮಿತವಾಗಿದ್ದಾರೆ. ಮುಖ್ಯವಾಗಿ ನ್ಯೂಯಾರ್ಕ್‌, ಹಾಂಕ್‌ಕಾಂಗ್‌ನಲ್ಲಿ ಶ್ರೀಮಂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂಥ ನಗರಗಳಿಗೆ ವಲಸೆ ಹೋಗುವುದರಿಂದ ಉತ್ತಮ ಅವಕಾಶಗಳು ಮತ್ತು ಸಂಪತ್ತಿನ ವೃದ್ಧಿಯೂ ಆಗುತ್ತದೆ ಎಂಬುದು ಕೋಟ್ಯಧಿಪತಿಗಳ ನಂಬಿಕೆ.

ಸಂಶೋಧನಾ ಸಂಸ್ಥೆ ಹೆನ್ಲೆ ಆ್ಯಂಡ್‌ ಪಾರ್ಟ್‌ನರ್ಸ್‌ ಸಂಸ್ಥೆಯ ಪ್ರಕಾರ, ತಂತ್ರಜ್ಞಾನ ಮತ್ತು ಜನಸ್ನೇಹಿ ತೆರಿಗೆ ನೀತಿಗಳಿಂದಾಗಿ ಸಂಪತ್ತಿನ ಸೃಷ್ಟಿಯಾಗುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ಶ್ರೀಮಂತರನ್ನು ಹೊಂದಿರುವ ಶೆನ್ಝೆನ್‌, ಹಂಗ್ಝೋನಂಥ ನಗರಗಳು ಹೆಚ್ಚಿನ ಟೆಕ್ಕಿಗಳನ್ನು ಆಕರ್ಷಿಸಿದರೆ, ದುಬೈ, ಮಿಯಾಮಿ ಮತ್ತು ಸಿಂಗಾಪುರದಂಥ ನಗರಗಳು ಜನಸ್ನೇಹಿ ತೆರಿಗೆ ನೀತಿಗಳಿಂದಾಗಿ ಶ್ರೀಮಂತರನ್ನು ಸೆಳೆಯುತ್ತಿವೆ.

ಭಾರತದ ಶ್ರೀಮಂತ ನಗರಗಳು

ಕೋಟ್ಯಧಿಪತಿಗಳ ಪ್ರಮಾಣ ವೇಗವಾಗಿ ಹೆಚ್ಚುತ್ತಿರುವ ಭಾರತದ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ದೆಹಲಿ ಎರಡು ಮತ್ತು ಮುಂಬೈ ಮೂರನೇ ಸ್ಥಾನದಲ್ಲಿದೆ. ವಿಶ್ವದಲ್ಲೇ ಅತಿ ಹೆಚ್ಚು ವೇಗವಾಗಿ ಕೋಟ್ಯಧಿಪತಿಗಳ ಪ್ರಮಾಣ ಹೆಚ್ಚಾಗುತ್ತಿರುವ ಶ್ರೀಮಂತ ನಗರಗಳ ಟಾಪ್‌ 20 ಪಟ್ಟಿಯಲ್ಲಿ ದೆಹಲಿ 14 ಮತ್ತು ಮುಂಬೈ 18ನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ಕಳೆದೊಂದು ದಶಕದಲ್ಲಿ ಕೋಟ್ಯಧಿಪತಿಗಳ ಬೆಳವಣಿಗೆ ದರವು ಶೇ.82ರಷ್ಟಿದ್ದರೆ, ಮುಂಬೈನಲ್ಲಿ ಈ ಪ್ರಮಾಣ ಶೇ.69ರಷ್ಟಿದೆ.

ಬೆಂಗಳೂರಲ್ಲಿ 10 ವರ್ಷದಲ್ಲಿ ಶ್ರೀಮಂತರ ಸಂಖ್ಯೆ ದ್ವಿಗುಣ

ಬೆಂಗಳೂರಿನ ಕೋಟ್ಯಧಿಪತಿಗಳ ಬೆಳವಣಿಗೆ ದರ ಶೇ.120

ಟಾಪ್‌ 20 ನಗರಗಳ ಪೈಕಿ ಮುಂಬೈ, ನವದೆಹಲಿಗೂ ಸ್ಥಾನ

ಚೀನಾದ ಶೆನ್ಝೆನ್‌ ನಗರಕ್ಕೆ ಈ ಪಟ್ಟಿಯಲ್ಲಿ ಮೊದಲ ಸ್ಥಾನ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತಕ್ಕೀಗ ಮೆಕ್ಸಿಕೋ ಶೇ.50 ತೆರಿಗೆ ಹೊಡೆತ
ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ