ಹಿಂದೂಗಳನ್ನು ವಿಭಜಿಸಲು ಕಾಂಗ್ರೆಸ್‌ ಸಂಚು: ಮೋದಿ - ಕಾಂಗ್ರೆಸ್‌ ಪಾಲಿಗೆ ಮುಸ್ಲಿಮರು ವೋಟ್‌ಬ್ಯಾಂಕ್‌

Published : Oct 10, 2024, 06:10 AM IST
narendra modi

ಸಾರಾಂಶ

’ಕಾಂಗ್ರೆಸ್‌ ಹಿಂದೂಗಳನ್ನು ವಿಭಜಿಸಲು ಬಯಸಿದ್ದು, ಸಮಾಜದಲ್ಲಿ ವಿಷ ತುಂಬುತ್ತಿದೆ. ಅದು ಮುಸ್ಲಿಮರನ್ನು ಮತ ಬ್ಯಾಂಕ್‌ನಂತೆ ನೋಡುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

 ಮುಂಬೈ: ’ಕಾಂಗ್ರೆಸ್‌ ಹಿಂದೂಗಳನ್ನು ವಿಭಜಿಸಲು ಬಯಸಿದ್ದು, ಸಮಾಜದಲ್ಲಿ ವಿಷ ತುಂಬುತ್ತಿದೆ. ಅದು ಮುಸ್ಲಿಮರನ್ನು ಮತ ಬ್ಯಾಂಕ್‌ನಂತೆ ನೋಡುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ಮಹಾರಾಷ್ಟ್ರದಲ್ಲಿ 7,600 ಕೋಟಿ ಮೌಲ್ಯದ ಯೋಜನೆಗಳಿಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ ಮೋದಿ, ಹರ್ಯಾಣದಲ್ಲಿ ಬಿಜೆಪಿಗೆ ಆದ ಗೆಲುವನ್ನು ಉಲ್ಲೇಖಿಸಿ ‘ಹಿಂದುಳಿದ ವರ್ಗದವರು ಹಾಗೂ ದಲಿತರು ಬಿಜೆಪಿಯೊಂದಿಗಿದ್ದಾರೆ. ಜನರ ದಾರಿ ತಪ್ಪಿಸಲು ನೋಡುತ್ತಿದ್ದ ಕಾಂಗ್ರೆಸ್‌ನ ಎಲ್ಲಾ ಕುತಂತ್ರಗಳು ಸೋತಿವೆ. ಇದು ದೇಶವಾಸಿಗಳ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದರು.

‘ಕಾಂಗ್ರೆಸ್‌ ದಲಿತರ ಮೀಸಲಾತಿಯನ್ನು ತನ್ನ ವೋಟ್‌ಬ್ಯಾಂಕ್‌ಗೆ ಕೊಡುತ್ತದೆ ಎಂದು ಅವರು ಅರಿತಿದ್ದಾರೆ. ಅದು ರೈತರ ದಾರಿ ತಪ್ಪಿಸಲು ನೋಡಿತಾದರೂ, ಅವರಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದ್ದು ಯಾರೆಂದು ತಿಳಿದಿದ್ದಾರೆ. ಈ ಮೂಲಕ ತಾವು ನಗರ ನಕ್ಸಲರ ಗುರಿಯಾಗುವುದಿಲ್ಲ ಎಂಬುದನ್ನು ತೋರಿಸಿದ್ದಾರೆ’ ಎಂದು ಮೋದಿ ಹೇಳಿದರು.

ಕಾಂಗ್ರೆಸ್‌ ಬೇಜವಾಬ್ದಾರಿಯುತ ಪಕ್ಷ ಎಂದಿರುವ ಪ್ರಧಾನಿ, ‘ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ’ ಎನ್ನುತ್ತಾ, ಮುಂದಿನ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಸರ್ಕಾರವನ್ನೇ ಗೆಲ್ಲಿಸಲು ಕರೆ ನೀಡಿದರು.

ಈ ವೇಳೆ ಮಹಾರಾಷ್ಟ್ರದ ಅಭಿವೃದ್ಧಿಯ ಕುರಿತು ಮಾತನಾಡುತ್ತಾ, ‘ಇಂದು ರಾಜ್ಯಕ್ಕೆ 10 ವೈದ್ಯಕೀಯ ಕಾಲೇಜುಗಳು ಲಭಿಸಲಿವೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉನ್ನತೀಕರಿಸಿ, ಮೆಟ್ರೋ ವಿಸ್ತರಿಸಲಾಗುತ್ತಿದೆ. ಅತಿದೊಡ್ಡ ಬಂದರಾದ ವಧವನ್‌ಗೆ ಅಡಿಪಾಯ ಹಾಕಲಾಗಿದೆ. ಮರಾಠಿಗೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತಿದೆ’ ಎಂದರು.

ಕಾಂಗ್ರೆಸ್‌ ಕಿಡಿ:  ಸರ್ಕಾರಿ ವೇದಿಕೆಯನ್ನು ರಾಜಕೀಯ ಭಾಷಣಕ್ಕೆ ಪ್ರಧಾನಿ ಬಳಸಿಕೊಂಡಿದ್ದಾರೆ ಎಂದು ಮೋದಿ ಮಾಡಿದ ಟೀಕೆಗೆ ಕಾಂಗ್ರೆಸ್ ವಕ್ತಾರ ಪವನ್‌ ಖೇರಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತದ ನಂ.1 ಶ್ರೀಮಂತೆ ಸೇರಿ 3 ಪಕ್ಷೇತರರ ಬೆಂಬಲ ಬಿಜೆಪಿಗೆ

ನವದೆಹಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ, ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ದೇಶದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ ಸೇರಿ ಮೂವರು ಬಿಜೆಪಿಗೆ ಬೆಂಬಲ ಪ್ರಕಟಿಸಿದ್ದಾರೆ.

ದೇವೆಂದರ್‌ ಕಾಡ್ಯನ್‌, ರಾಜೇಶ್‌ ಜೂನ್‌ ಬಿಜೆಪಿ ಟಿಕೆಟ್‌ ವಂಚಿತರಾದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಗಳನ್ನೇ ಸೋಲಿಸಿದ್ದರು. ಇದೀಗ ಅವರು ಹರ್ಯಾಣ ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಮೋಹನ್‌ ಲಾಲ್‌ ಬಡೋಲಿ, ಹರ್ಯಾಣ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಇನ್ನು ಬಿಜೆಪಿ ಟಿಕೆಟ್‌ ವಂಚಿತರಾದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಕಂಡ ದೇಶದ ನಂ.1ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ ಕೂಡಾ ಬಿಜೆಪಿಗೆ ಬೆಂಬಲ ಪ್ರಕಟಿಸಿದ್ದಾರೆ ಎಂದು ಬಿಜೆಪಿಗರು ಹೇಳಿಕೊಂಡಿದ್ದಾರೆ.

ಇದು ಖಚಿತವಾದರೆ ವಿಧಾನಸಭೆಯಲ್ಲಿ ಬಿಜೆಪಿ ಬಲ 48ರಿಂದ 51ಕ್ಕೆ ಏರಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ