ಬೆಂಗಳೂರು: ಡಿ.30ರಂದು ಇಸ್ರೋ ಹಾರಿಬಿಟ್ಟಿದ್ದ ಸ್ಪೇಡೆಕ್ಸ್ ನೌಕೆಯಲ್ಲಿ ಅಳವಡಿಸಿದ್ದ ಉಪಕರಣದಲ್ಲಿ ಇಡಲಾಗಿದ್ದ ಅಲಸಂದೆ ಕಾಳುಗಳು ಮೊಳಕೆಯೊಡೆದು ಕುತೂಹಲ ಕೆರಳಿಸಿದ ಬೆನ್ನಲ್ಲೇ, ಅದರಲ್ಲಿ ಇದೀಗ ಎಲೆಗಳು ಕಾಣಿಸಿಕೊಂಡಿದೆ. ಇದು ಬಾಹ್ಯಾಕಾಶ ಆಧಾರಿತ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲು ಎಂದು ಇಸ್ರೋ ಹೇಳಿದೆ.
‘ಈ ಸಾಧನೆಯು ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸುವ ಇಸ್ರೋದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಭವಿಷ್ಯದ ಸುದೀರ್ಘ ಯೋಜನೆಗಳಿಗೆ ಸಹಕಾರ ನೀಡುತ್ತದೆ. ಸಸ್ಯಗಳು ಸೂಕ್ಷ್ಮ ಗುರುತ್ವಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂದು ಅರ್ಥೈಸಲು, ಆಹಾರ ಉತ್ಪಾದಿಸುವ, ಗಗನಯಾತ್ರಿಗಳಿಗೆ ಗಾಳಿ ಮತ್ತು ನೀರನ್ನು ಪುನರ್ ಉತ್ಪಾದಿಸುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ನಿರ್ಣಾಯಕವಾಗಿದೆ. ಈ ಪ್ರಯೋಗದ ಯಶಸ್ಸು ಬಾಹ್ಯಾಕಾಶದಲ್ಲಿ ಸುಸ್ಥಿರ ಮಾನವ, ಉಪಸ್ಥಿತಿಯತ್ತ ಭರವಸೆಯ ಹೆಜ್ಜೆಯನ್ನು ಸೂಚಿಸುತ್ತದೆ’ ಎಂದು ಇಸ್ರೋ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.
ಇಂದಿನ ಇಸ್ರೋ ಸ್ಪೇಡೆಕ್ಸ್ ಡಾಕಿಂಗ್ ನಾಡಿದ್ದಿಗೆ ಮುಂದೂಡಿಕೆ
ಬೆಂಗಳೂರು : ಜ.6ರಂದು ಬಾಹ್ಯಾಕಾಶದಲ್ಲಿ ನಡೆಸಲು ಉದ್ದೇಶಿಸಿದ್ದ ಸ್ಪೇಡೆಕ್ಸ್ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಪ್ರಕ್ರಿಯೆಯನ್ನು ಜ.9ಕ್ಕೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ.ಈ ಎರಡೂ ಪ್ರಕ್ರಿಯೆ ಮುಂದುವರೆಸಲು, ಭೂಮಿಯಲ್ಲಿನ ಉಪಕರಣಗಳ ಮೂಲಕ ಇನ್ನಷ್ಟು ದೃಢೀಕರಣ ಅನಿವಾರ್ಯ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಿದ್ದ ಪ್ರಯೋಗವನ್ನು ಗುರುವಾರಕ್ಕೆ ಮುಂದೂಡಲಾಗಿದೆ ಎಂದು ಇಸ್ರೋ ಹೇಳಿದೆ.
ಡಿ.30ರಂದು ಇಸ್ರೋ, ಸ್ಪೇಡೆಕ್ಸ್ 1 ಮತ್ತು ಸ್ಪೇಡೆಕ್ಸ್ 2 ಎಂಬ ಎರಡು ನೌಕೆಗಳನ್ನು ಹಾರಿಬಿಟ್ಟಿತ್ತು. ಸದ್ಯ ಆಗಸದಲ್ಲಿ ಸಂಚರಿಸುತ್ತಿರುವ ಈ ನೌಕೆಗಳನ್ನು ಪರಸ್ಪರ ಜೋಡಿಸುವ (ಡಾಕಿಂಗ್) ಮತ್ತು ಪ್ರತ್ಯೇಕಿಸುವ (ಅನ್‌ಡಾಕಿಂಗ್) ಪ್ರಯೋಗದ ಮೂಲಕ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಸ್ಥಾಪನೆಯ ತನ್ನ ಗುರಿಯತ್ತ ಬುಧವಾರ ಇನ್ನೊಂದು ಮಹತ್ವದ ಹೆಜ್ಜೆ ಇಡಲು ಇಸ್ರೋ ಸಜ್ಜಾಗಿತ್ತು. ಆದರೆ ಇದೀಗ ಈ ಪ್ರಯೋಗವನ್ನು 2 ದಿನ ಮುಂದೂಡಲಾಗಿದೆ.ಡಾಕಿಂಗ್‌ನಲ್ಲಿ ಯಶ ಕಂಡರೆ ಅಮೆರಿಕ, ರಷ್ಯಾ ಹಾಗೂ ಚೀನಾ ಬಳಿಕ ವಿಶ್ವದ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.