ಮಕ್ಕಳ ಮೊಬೈಲ್‌ ಬಳಕೆಗೆ ಲಗಾಮು : ಕಟ್ಟುನಿಟ್ಟಾಗಿ ನಿಯಮಾವಳಿ ಜಾರಿ ತರಲಿದೆ ಸರ್ಕಾರ

Published : Jan 11, 2025, 09:50 AM IST
Mobile phone addiction in children

ಸಾರಾಂಶ

ಮಕ್ಕಳನ್ನು ಮೊಬೈಲ್‌ ಗೀಳಿನಿಂದ ತಪ್ಪಿಸಲು ಗುಜರಾತ್‌ ಸರ್ಕಾರ ನಿಯಮಾವಳಿಯನ್ನು ಜಾರಿ ತರಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಅಹಮದಾಬಾದ್‌: ಮಕ್ಕಳನ್ನು ಮೊಬೈಲ್‌ ಗೀಳಿನಿಂದ ತಪ್ಪಿಸಲು ಗುಜರಾತ್‌ ಸರ್ಕಾರ ನಿಯಮಾವಳಿಯನ್ನು ಜಾರಿ ತರಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಶಿಕ್ಷಣ ಸಚಿವ ಪ್ರಫುಲ್‌ ಪನ್ಸೇರಿಯಾ ಮಾತನಾಡಿ, ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ, ಮೈದಾನ ಮತ್ತು ಓದಿನ ಕಡೆಗೆ ಸೆಳೆಯುವುದು ನಿಯಮಾವಳಿಯ ಉದ್ದೇಶವಾಗಿದೆ. ಇದಕ್ಕಾಗಿ ಪ್ರಾಥಮಿಕ ಶಾಲೆಗಳಲ್ಲಿ ಮೊಬೈಲ್‌ ಬಳಕೆಯನ್ನು ನಿಷೇಧಿಸಲು ಈ ಹಿಂದೆ ಜಾರಿ ತಂದಿದ್ದ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಲಿದ್ದೇವೆ. ಶಿಕ್ಷಕರು, ಪೋಷಕರು ಮತ್ತು ಮಕ್ಕಳಿಗೆ ಇದರ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.

ಇತ್ತೀಚೆಗೆ ಕೇಂದ್ರ ಸರ್ಕಾರವು ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಪೋಷಕರ ಅನುಮತಿ ಕಡ್ಡಾಯ ಮಾಡುವ ಕರಡನ್ನು ಕೇಂದ್ರ ಬಿಡುಗಡೆ ಮಾಡಿತ್ತು. ಕಳೆದ ವರ್ಷ ಆಸ್ಟ್ರೇಲಿಯಾ ಸರ್ಕಾರ 16 ವರ್ಷ ಕೆಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಿತ್ತು.

ವರ್ಷ ತುಂಬಿದ ಖುಷಿಯಲ್ಲಿ ಅದ್ಧೂರಿ ಕಾರ್ಯಕ್ರಮ

ಅಯೋಧ್ಯೆ : ಅಯೋಧ್ಯೆ ಹೆಸರು ಕೇಳಿದಾಗ ಮೊದಲು ನೆನಪಾಗುವುದು ರಘುಕುಲ ತಿಲಕ, ದಶರಥ ನಂದನ, ಮರ್ಯಾದಾ ಪುರುಷೋತ್ತಮ ಪ್ರಭು ರಾಮಚಂದ್ರನ ಜನ್ಮಸ್ಥಳ. ಕಳೆದ ಒಂದು ವರ್ಷದಿಂದ ಅಯೋಧ್ಯೆ ದೇಶದ ಗಮನ ಸೆಳೆಯುತ್ತಿದೆ. ಸಾಂಸ್ಕೃತಿಕ, ಆಧ್ಯಾತ್ಮಿಕತೆಯ ರಾಜಧಾನಿಯಂತಿರುವ ಉತ್ತರ ಪ್ರದೇಶದಲ್ಲಿ ಇದೀಗ ಅಯೋಧ್ಯೆಯೇ ದೇಶದ ಗಮನ ಸೆಳೆಯುತ್ತಿರುವುದು. ಅದಕ್ಕೆಲ್ಲ ಕಾರಣ ರಾಮಲಲ್ಲಾನ ಭವ್ಯ ಮಂದಿರ. ಭವ್ಯ ಮಂದಿರ ಆರಂಭವಾಗಿ ಇದೀಗ ಒಂದು ವರ್ಷ ತುಂಬಿದ್ದು ಅಲ್ಲಿ ಏನೆಲ್ಲಾ ಬೆಳವಣಿಗೆ ನಡೆಯುತ್ತಿದೆ ಎಂಬುದರ ಕುರಿತು ಒಂದು ನೋಟ ಇಲ್ಲಿದೆ.

2023 ಜ.22ರಂದು ಭವ್ಯವಾದ ಮಂದಿರ ಉದ್ಘಾಟನೆಯಾಗಿತ್ತು. ಆದರೆ ಹಿಂದೂ ಪಂಚಾಂಗದ ಪ್ರಕಾರ ಈ ಸಂಭ್ರಮಕ್ಕೆ ಜ.11ರಂದು ವರ್ಷ ಪೂರ್ಣಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಜ.11ರಿಂದ 13ರವರೆಗೆ ಪ್ರತಿಷ್ಠಾ ವಾರ್ಷಿಕೋತ್ಸವ (ಪ್ರತಿಷ್ಠಾ ದ್ವಾದಶಿ) ಹಮ್ಮಿಕೊಳ್ಳಳಲಾಗಿದೆ. ಮೊದಲ ದಿನ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬಾಲ ರಾಮನಿಗೆ ಅಭಿಷೇಕ ನೆರವೇರಿಸಲಿದ್ದಾರೆ. ಮಂದಿರದ ಸಮೀಪವಿರುವ ಅಂಗದ ಟೀಲಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜತೆಗೆ, ಖ್ಯಾತ ಗಾಯಕರ ಭಕ್ತಿ ಗೀತೆಗಳೂ ಬಿಡುಗಡೆಗೊಳ್ಳಲಿವೆ. ದೇಶಾದ್ಯಂತವಿರುವ ಸಂತರು ಹಾಗೂ ಭಕ್ತರಿಗೆ ಟ್ರಸ್ಟ್‌ ಆಮಂತ್ರಣ ಕಳಿಸಿದೆ.

ಅಯೋಧ್ಯೆ ದೇಶದ ನಂ.1 ಪ್ರವಾಸಿ ತಾಣ

ಉದ್ಘಾಟನೆಗೊಂಡ ವರ್ಷದೊಳಗೇ ಅಯೋಧ್ಯೆ ರಾಮಮಂದಿರ ದೇಶದ ನಂ.1 ಪ್ರವಾಸಿ ತಾಣ ಅಥವಾ ಭಕ್ತಾದಿಗಳ ನೆಚ್ಚಿನ ಭೇಟಿಯ ತಾಣವಾಗಿ ಹೊರಹೊಮ್ಮಿದೆ. 2024ರ ಜನವರಿ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಉತ್ತರ ಪ್ರದೇಶಕ್ಕೆ ಸುಮಾರು 47 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಪೈಕಿ ಅಯೋಧ್ಯೆ ಒಂದಕ್ಕೇ 13.3 ಕೋಟಿ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಅದರಲ್ಲಿ 3,153 ವಿದೇಶಿಗರೂ ಕೂಡ ಸೇರಿದ್ದಾರೆ.ಮಂದಿರದಿಂದ ರಾಜ್ಯದ ಪ್ರವಾಸೋದ್ಯಮದ ನಕಾಶೆಯನ್ನೇ ಬದಲಿಸಿದೆ. ಹಬ್ಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ದೀಪಾವಳಿ ಸಂದರ್ಭದಲ್ಲಿ ಸರಯೂ ನದಿಯ ದಂಡೆಯ ಮೇಲೆ 22 ಲಕ್ಷ ಹಣತೆಗಳನ್ನು ಸರ್ಕಾರ ಬೆಳಗಿಸುವ ಮೂಲಕ ಗಿನ್ನೆಸ್‌ ದಾಖಲೆ ನಿರ್ಮಿಸಿತು. ರಾಮಮಂದಿರ ಸುರಕ್ಷತೆ ನಿರ್ವಹಣೆಗೆ ವಿಶ್ವದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪ್ರತಿಷ್ಠಿತ ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿಯನ್ನು ರಾಮಮಂದಿರ ಪಡೆದುಕೊಂಡಿದೆ.

ಈ ವರ್ಷ ಪೂರ್ಣವಾಗಲಿದೆ ಮಂದಿರ

ಹಾಲಿ ಉದ್ಘಾಟನೆಗೊಂಡಿರುವ ರಾಮಮಂದಿರ ಇನ್ನೂ ಪೂರ್ಣ ಪ್ರಮಾಣವಾಗಿದ್ದಲ್ಲ. ರಾಮಮಂದಿರ ಸಂಕೀರ್ಣದ ಒಟ್ಟು ವಿಸ್ತಾರ 72 ಎಕರೆ. ಈ ಪೈಕಿ ಮೊದಲಿಗೆ ನಿರ್ಮಾಣವಾಗಿದ್ದು ಅಂದಾಜು 3 ಎಕರೆ ಪ್ರದೇಶದಲ್ಲಿನ ರಾಮಮಂದಿರ ಮಾತ್ರ. ಇದನ್ನು 1800 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಲಾಗಿದೆ. ದೇಗುಲ 250 ಅಡಿ ಅಗಲ ಹಾಗೂ 161 ಅಡಿ ಎತ್ತರವಿದೆ. ಅಯೋಧ್ಯೆ ರಾಮ ಮಂದಿರದ ಮುಖ್ಯ ಆಲಯವೇ 2.67 ಎಕರೆ ಪ್ರದೇಶದಷ್ಟಿದೆ. ಭಕ್ತರು 32 ಮೆಟ್ಟಿಲುಗಳನ್ನು ಹತ್ತಿ ದೇಗುಲ ಪ್ರವೇಶ ಮಾಡಬೇಕಿದೆ. ನೆಲ ಮಟ್ಟದಿಂದ ಸಿಂಹ ದ್ವಾರವು 16.11 ಅಡಿ ಎತ್ತರದಲ್ಲಿದೆ. ಅಯೋಧ್ಯೆ ನಾಗರಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ. 5 ಮಂಟಪಗಳ ರಚನೆಯನ್ನು ಹೊಂದಿದ್ದು, ಗರ್ಭಗುಡಿಯ ಮೇಲೆ ಬೃಹತ್‌ಗೋಪುರವನ್ನು ನಿರ್ಮಿಸಲಾಗಿದೆ. 3 ಅಂತಸ್ತಿನಲ್ಲಿ ಭವ್ಯವಾಗಿ ತಲೆ ಎತ್ತಿದೆ. ದೇವಾಲಯದಲ್ಲಿ ಗರ್ಭಗುಡಿ, ಜಗುಲಿ ಅಥವಾ ಮಂಟಪ, ಶಿಖರ ಹಾಗೂ ಗರ್ಭಗುಡಿಯ ನೇರಕ್ಕೆ ದೇಗುಲದ ಎದುರಿನಲ್ಲಿ ದೇವರ ವಾಹನವಿದೆ.

ಇಡೀ ಸಂಕೀರ್ಣವನ್ನು ಹಲವು ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ಶ್ರೀರಾಮ ಕುಂಡ ಯಜ್ಞಶಾಲೆ, ಪೂಜಾ ಕೈಂಕರ‍್ಯಕ್ಕೆ ಕರ್ಮ ಕ್ಷೇತ್ರ, ರಾಮಾಂಗಣ ಚಿತ್ರಮಂದಿರ, ಬೃಹತ್‌ ಹನುಮ ಪ್ರತಿಮೆ, ವಸ್ತು ಸಂಗ್ರಹಾಲಯ, ರಾಮಾಯಣ ಗ್ರಂಥಾಲಯ, ಸಪ್ತಋುಷಿಗಳ 7 ದೇವಾಲಯ, ಸೀತೆ, ವಾಲ್ಮೀಕಿ ಸೇರಿ ಅನೇಕ ದೇವಸ್ಥಾನ , ಶ್ರೀರಾಮನ ಪತ್ನಿ, ಸೀತಾ ಮಾತೆಗಾಗಿ ರಾಮ ಪುಷ್ಕರಣಿ, ಸಭಾಂಗಣ ಮತ್ತು ಕಲ್ಯಾಣ ಮಂಟಪ,ಪಶುವೈದ್ಯಕೀಯ ಸೌಲಭ್ಯ, ಲವಕುಶ ಮೈದಾನ, ಲಕ್ಷ್ಮಣ ವಾಟಿಕಾ ಕಾರಂಜಿ ಸೇರಿದಂತೆ ಇನ್ನು ಹಲವು ಯೋಜನೆಗಳ ಕಾಯಕಲ್ಪ ಪ್ರಗತಿಯಲ್ಲಿದೆ. ಅದೆಲ್ಲವೂ ಪೂರ್ಣಗೊಂಡು ವರ್ಷದ ಅಂತ್ಯಕ್ಕೆ ಹೊಸ ರೂಪ ಸಿಗಲಿದೆ.

ಮಂದಿರದಿಂದ ಬದಲಾಯ್ತು ಅಯೋಧ್ಯೆ ನಗರಿ

ರಾಮಮಂದಿರ ಉದ್ಘಾಟನೆ ಬಳಿಕ ಕೇವಲ ಮಂದಿರದ ಚಿತ್ರಣ ಮಾತ್ರ ಬದಲಾಗಿಲ್ಲ. ಬದಲಾಗಿ ಸುತ್ತ ಮುತ್ತಲಿನ ಊರಿಗೂ ಹೊಸ ಕಳೆ ಬಂದಿದೆ. ಇಡೀ ಅಯೋಧ್ಯೆ ನಗರಿಗೆ ಹೊಸ ರೂಪವನ್ನು ನೀಡಲಾಗಿದೆ. ಸರಯೂ ನದಿಯಿಂದ ರಾಮ ಮಂದಿರ ಸಂಪರ್ಕಿಸಲು 13 ಕಿ.ಮೀನಷ್ಟು ಉದ್ದ ರಾಮಪಥ ನಿರ್ಮಾಣವಾಗಿದೆ. ಹೊಸ ರೂಪ ನೀಡಲಾಗಿದೆ. ಇದಕ್ಕಾಗಿ 50 ಸಾವಿರ ಕೋಟಿ ರು. ವೆಚ್ಚ ಮಾಡಲಾಗಿತ್ತು. ಅಯೋಧ್ಯೆಯಲ್ಲಿ ಸುಸಜ್ಜಿತ ರೈಲು ನಿಲ್ದಾಣ, ಅತ್ಯಾಧುನಿಕ ವಿಮಾನ ನಿಲ್ದಾಣ, ಅಗಲವಾದ ರಸ್ತೆಗಳನ್ನು ನಿರ್ಮಿಸಲಾಗಿದೆ. ಒಟ್ಟಿನಲ್ಲಿ ಅಯೋಧ್ಯೆಯೇ ಹೊಸತನದಿಂದ ಕಂಗೊಳಿಸುತ್ತಿದೆ.

ಕನ್ನಡಿಗನ ಕೈಯಲ್ಲಿ ಅರಳಿದ ರಾಮಲಲ್ಲಾ

ಅಯೋಧ್ಯೆ ರಾಮಮಂದಿರದ ಮುಖ್ಯ ವಿಗ್ರಹವನ್ನು ಕೆತ್ತಿದ್ದು ಮೈಸೂರಿನ ಅರುಣ್‌ ಯೋಗಿರಾಜ್‌. ವಿಗ್ರಹ ಕೆತ್ತುವಿಕೆಗೆ ಮೂರು ಜನರನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ ಕನ್ನಡಿಗರಾದ ಅರುಣ್‌ ಯೋಗಿರಾಜ್‌, ಉತ್ತರ ಕನ್ನಡದ ಹೊನ್ನಾವರದ ಇಡಗುಂಜಿಯ ಗಣೇಶ್‌ ಭಟ್‌ ಮತ್ತು ರಾಜಸ್ಥಾನದ ಇನ್ನೊಬ್ಬ ಶಿಲ್ಪಿ. ಈ ಪೈಕಿ ಅಂತಿಮವಾಗಿ ಅರುಣ್‌ ಕೆತ್ತಿದ ವಿಗ್ರಹ ಆಯ್ಕೆಯಾಗಿತ್ತು. ಇದು, 51 ಇಂಚುಗಳ ಎತ್ತರವನ್ನು ಹೊಂದಿದೆ. ಭಗವಾನ್ ಶ್ರೀರಾಮನು ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ 5 ವರ್ಷದ ಮಗುವಿನ ರೂಪದಲ್ಲಿದೆ

500 ವರ್ಷಗಳ ಕಾಯುವಿಕೆ ಅಂತ್ಯ

ರಾಮಜನ್ಮಭೂಮಿ ಹೋರಾಟದ ಇತಿಹಾಸ ಆರಂಭವಾಗುವುದೇ ಮೊಘಲ್‌ ದೊರೆ ಬಾಬರ್‌ ಕಾಲದಲ್ಲಿ. 1528ರಲ್ಲಿ ಮಂದಿರ ಧ್ವಂಸಗೊಳಿಸಿ ಬಾಬರಿ ಮಸೀದಿ ನಿರ್ಮಿಸಿದ. 1858ರಲ್ಲಿ ನಿರ್ಮೋಹಿ ಅಖಾಡದ ರಘುಬರ್‌ ದಾಸ್‌ ಮೊದಲ ಬಾರಿಗೆ ಕೋರ್ಟ್‌ ಮೆಟ್ಟಿಲೇರಿದರು. ಈ ಕುರಿತು ಸುದೀರ್ಘ ವಿಚಾರಣೆ ನಡೆದು ವಿವಾದಿತ ಬಾಬ್ರಿ ಮಸೀದಿ ಸ್ಥಳ ರಾಮಲಲ್ಲಾಗೆ ಸೇರಿದ ಜಾಗ ಎಂದು 2019ರ ನ.9ರಂದು ಅಂದಿನ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಚಾರಿತ್ರಿಕ ತೀರ್ಪು ನೀಡಿತ್ತು. ಬಳಿಕ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ 2020ರ ಆಗಸ್ಟ್‌ 5ರಂದು ಶಿಲಾನ್ಯಾಸ ನೆರವೇರಿಸಿದ್ದರು. ಮೂರೂವರೆ ವರ್ಷಗಳ ಕಾಲ ಕಾಮಗಾರಿ ಸಾಗಿ, ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ನೆರವೇರಿತ್ತು. ಸುಮಾರು 1,800 ಕೋಟಿ ರು.ವೆಚ್ಚದಲ್ಲಿ ಮಂದಿರ ತಲೆ ಎತ್ತಿ ನಿಂತಿತು.

ವಾರದಲ್ಲಿ 90 ಗಂಟೆ ದುಡಿತದಿಂದ ರಾಷ್ಟ್ರನಿರ್ಮಾಣ: ಎಲ್&ಟಿ

ಮುಂಬೈ:‘ನೀವು ಜಗತ್ತಿನಲ್ಲೇ ಉನ್ನತ ಸ್ಥಾನಕ್ಕೇರಬೇಕಾದ ವಾರದಲ್ಲಿ 90 ತಾಸು ದುಡಿಯಬೇಕು’ ಎಂಬ ಹೇಳಿಕೆ ನೀಡುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿರುವ ಎಲ್&ಟಿ ಕಂಪನಿ ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಹೇಳಿಕೆಯನ್ನು ಕಂಪನಿ ಸಮರ್ಥಿಸಿದೆ. ‘ರಾಷ್ಟ್ರ ನಿರ್ಮಾಣಕ್ಕೆ ಇದು ನೆರವಾಗಲಿದೆ’ ಎಂದು ಎಲ್&ಟಿ ಹೇಳಿಕೊಂಡಿದೆ.

ಶುಕ್ರವಾರ ಪ್ರತಿಕ್ರಿಯಿಸಿರುವ ಎಲ್‌&ಟಿ ‘ರಾಷ್ಟ್ರ ನಿರ್ಮಾಣವು ಇದರ ತಿರುಳಾಗಿದೆ. 8 ದಶಕಗಳಿಂದ ನಾವು ಭಾರತದ ಮೂಲ ಸೌಕರ್ಯ, ಕೈಗಾರಿಕೆಗಳು, ತಾಂತ್ರಿಕ ಸಾಮರ್ಥ್ಯಗಳನ್ನು ರೂಪಿಸುತ್ತಿದ್ದೇವೆ. ಇದು ಭಾರತದ ದಶಕ ಎಂದು ನಾವು ನಂಬುತ್ತೇವೆ. ಪ್ರಗತಿ ಹೆಚ್ಚಿಸಲು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ನಮ್ಮ ದೃಷ್ಟಿಯನ್ನು ಸಾಕಾರಗೊಳಿಸಲು ಸಾಮೂಹಿಕ ಸಮರ್ಪಣೆ ಮತ್ತು ಪ್ರಯತ್ನವನ್ನು ಬೇಡುವ ಸಮಯವಿದು. ಅಧ್ಯಕ್ಷರ ಹೇಳಿಕೆಗಳು ದೊಡ್ಡ ಮಹಾತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತವೆ’ ಎಂದು ಎಲ್&ಟಿ ವಕ್ತಾರರು ಹೇಳಿದ್ದಾರೆ.

ಆಘಾತಕಾರಿ ಹೇಳಿಕೆ: ದೀಪಿಕಾ ಪಡುಕೋಣೆ ಆಕ್ರೋಶ

ಎಲ್&ಟಿ ಮುಖ್ಯಸ್ಥ ಸುಬ್ರಹ್ಮಣ್ಯನ್‌ ಹೇಳಿಕೆಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ. ‘ಇಂತಹ ಉನ್ನತ ಹುದ್ದೆಯಲ್ಲಿರುವವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಆಘಾತಕಾರಿ’ ಎಂದು ನಟಿ ದೀಪಿಕಾ ಪಡುಕೋಣೆ ಖಂಡಿಸಿದ್ದಾರೆ.

ಅಲ್ಲದೆ ಎಲ್‌&ಟಿ ಸಮರ್ಥನೆಯನ್ನು ಕೂಡ, ಕಂಪನಿ ಹೇಳಿಕೆಯ ಸ್ಕ್ರೀನ್‌ಶಾಟ್‌ ಹಂಚಿಕೊಂಡರುವ ಟೀಕಿಸಿರುವ ನಟಿ, ‘ಎಲ್‌&ಟಿ ಇದನ್ನು (ಕೆಲಸದ ವಿಷಯ) ಮತ್ತಷ್ಟು ಹದೆಗೆಡಿಸಿದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಯುಜಿಸಿ ಗದ್ದಲ : ಸಂಯಮದ ನಡೆ ಅಗತ್ಯ
ಯುಜಿಸಿಗೆ ವಿವಾದದ ಬಿಸಿ ! ಏನಿದು ಯುಜಿಸಿ ಹೊತ್ತಿಸಿದ ವಿವಾದದ ಕಿಚ್ಚು