ಚುನಾವಣಾ ಸೋಲಿಗೆ ಲಾಲು ಕುಟುಂಬವೇ ಛಿದ್ರ : ಚಪ್ಪಲಿಯಿಂದ ಹಲ್ಲೆ

KannadaprabhaNewsNetwork |  
Published : Nov 17, 2025, 01:02 AM ISTUpdated : Nov 17, 2025, 04:44 AM IST
Lalu

ಸಾರಾಂಶ

ಬಿಹಾರ  ಚುನಾವಣೆಯಲ್ಲಿ ಆರ್‌ಜೆಡಿ ಕಂಡ ಹೀನಾಯ ಸೋಲು, ಪಕ್ಷದ ಸ್ಥಾಪಕ ಲಾಲು ಪ್ರಸಾದ್ ಯಾದವ್‌ ಕುಟುಂಬವನ್ನೇ ಛಿದ್ರ ಮಾಡಿದೆ.   ಕುಟುಂಬದಲ್ಲಿ ಲಾಲು ಪುತ್ರ ಹಾಗೂ ಸಿಎಂ ಅಭ್ಯರ್ಥಿಯಾಗಿದ್ದ ತೇಜಸ್ವಿ ಯಾದವ್ ಹಾಗೂ ಅವರ ಅಕ್ಕ ರೋಹಿಣಿ ಆಚಾರ್ಯ ನಡುವೆ ಮನೆಯಲ್ಲಿ ಭಾರಿ ಜಗಳ ನಡೆದಿದೆ.

 ಪಟನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಕಂಡ ಹೀನಾಯ ಸೋಲು, ಪಕ್ಷದ ಸ್ಥಾಪಕ ಲಾಲು ಪ್ರಸಾದ್ ಯಾದವ್‌ ಕುಟುಂಬವನ್ನೇ ಛಿದ್ರ ಮಾಡಿದೆ. ಸೋಲಿಗೆ ಯಾರು ಕಾರಣ ಎಂಬ ಬಗ್ಗೆ ಕುಟುಂಬದಲ್ಲಿ ಲಾಲು ಪುತ್ರ ಹಾಗೂ ಸಿಎಂ ಅಭ್ಯರ್ಥಿಯಾಗಿದ್ದ ತೇಜಸ್ವಿ ಯಾದವ್ ಹಾಗೂ ಅವರ ಅಕ್ಕ ರೋಹಿಣಿ ಆಚಾರ್ಯ ನಡುವೆ ಮನೆಯಲ್ಲಿ ಭಾರಿ ಜಗಳ ನಡೆದಿದೆ.

 ಈ ವೇಳೆ ರೋಹಿಣಿ ಮೇಲೆ ತೇಜಸ್ವಿ ಚಪ್ಪಲಿ ತೂರಿದರು ಎನ್ನಲಾಗಿದೆ. ಇದರ ಬೆನ್ನಲ್ಲೇ ರೋಹಿಣಿ ಮನೆ ಬಿಟ್ಟು ಸಿಂಗಾಪುರಕ್ಕೆ ಹಾರಿದ್ದಾರೆ. ಲಾಲು ಅವರ ಇತರ 3 ಪುತ್ರಿಯರು ಕೂಡ ಪಟನಾ ಬಿಟ್ಟು ದೆಹಲಿಗೆ ತೆರಳಿದ್ದಾರೆ.

ಕೆಲವು ತಿಂಗಳ ಹಿಂದೆ ಅನೈತಿಕ ಸಂಬಂಧ ಆರೋಪ ಹೊರಿಸಿ ಪುತ್ರ ತೇಜ್‌ಪ್ರತಾಪ್‌ ಯಾದವ್‌ರನ್ನು ಲಾಲು ಹೊರಹಾಕಿದ್ದರು. ಈಗ ರೋಹಿಣಿ ಸೇರಿ 4 ಪುತ್ರಿಯರೂ ಮನೆಯಿಂದ ಹೊರಹೋಗುವ ಮೂಲಕ ಲಾಲು ಕುಟುಂಬ ಸಂಪೂರ್ಣ ಛಿದ್ರವಾದಂತಾಗಿದೆ. ಲಾಲುಗೆ ಇಬ್ಬರು ಪುತ್ರರು ಹಾಗೂ 7 ಪುತ್ರಿಯರಿದ್ದಾರೆ.

ಈ ಘಟನೆ ಬಗ್ಗೆ ತೇಜ್‌ಪ್ರತಾಪ್ ಕಿಡಿಕಾರಿದ್ದು, ‘ಸೋದರಿಯ ಅವಮಾನ ಸಹಿಸಲ್ಲ, ನನ್ನ ತಂದೆ ಒಪ್ಪಿದರೆ ಕುಟುಂಬ ಒಡೆದ ದ್ರೋಹಿಗಳ ಸಮಾಧಿ ಮಾಡುವೆ’ ಎಂದು ಗುಡುಗಿದ್ದಾರೆ.

ಆಗಿದ್ದೇನು?:

ಈ ಜಗಳ ಆರಂಭವಾಗಿದ್ದು ತೇಜಸ್ವಿ ಆಪ್ತರಾದ ಸಂಜಯ ಯಾದವ್‌ ಹಾಗೂ ರಮೀಜ್‌ ಎಂಬುವರ ಕಾರಣದಿಂದ. ರಮೀಜ್‌ ಉತ್ತರ ಪ್ರದೇಶದವರಾಗಿದ್ದು, ತೇಜಸ್ವಿ ಪ್ರಚಾರದ ವಾರ್ ರೂಂ ನೋಡಿಕೊಳ್ಳುತ್ತಿದ್ದರು. ಇನ್ನು ಸಂಜಯ ಯಾದವ್‌ ಆರ್‌ಜೆಡಿ ಸಂಸದರಾಗಿದ್ದು, ಮೂಲತಃ ಹರ್ಯಾಣದವರು. ಇವರು ತೇಜಸ್ವಿ ಪರಮಾಪ್ತರು.

ಶನಿವಾರ ಮನೆಯಲ್ಲಿ ರೋಹಿಣಿ ಅವರು ಲಾಲು ಸಮ್ಮುಖದಲ್ಲೇ ಸೋಲಿನ ವಿಷಯ ಪ್ರಸ್ತಾಪಿಸಿ, ‘ಸೋಲಿಗೆ ರಮೀಜ್‌ ಹಾಗೂ ಸಂಜಯ್‌ ಅವರೇ ಕಾರಣ’ ಎಂದು ಆರೋಪಿಸಿದರು. ಇದು ಘೋರ ಜಗಳಕ್ಕೆ ಕಾರಣವಾಯಿತು ಎಂದು ಮೂಲಗಳು ಹೇಳಿವೆ.

‘ಆಗ ಕ್ರುದ್ಧರಾದ ತೇಜಸ್ವಿ, ‘ತುಮ್ಹಾರೆ ಕಾರಣ್ ಹಂ ಚುನಾವ್ ಹಾರ್ ಗಯೇ . ತುಮ್ಹಾರಾ ಹಾಯ್‌ ಲಗ್ ಗಯಾ ಹಮ್ ಲೋಗೋ ಕೋ (ನಿನ್ನಿಂದಾಗಿ ನಾವು ಚುನಾವಣೆಯಲ್ಲಿ ಸೋತಿದ್ದೇವೆ. ನಿನ್ನಿಂದಾಗಿ ನಾವು ಶಾಪಗ್ರಸ್ತರಾಗಿದ್ದೇವೆ)’ ಎಂದು ಅಕ್ಕನಿಗೆ ತಿರುಗೇಟು ನೀಡಿದರು. ಇದೇ ಸಿಟ್ಟಿನ ಭರದಲ್ಲಿ ಕೋಪದಿಂದ ಆಕೆಯ ಮೇಲೆ ಚಪ್ಪಲಿ ಎಸೆದು ನಿಂದಿಸಿದರು’ ಎಂದು ಅವು ತಿಳಿಸಿವೆ.

ಆಗ ಮಧ್ಯಪ್ರವೇಶಿಸಿದ ತೇಜಸ್ವಿಯ ಇನ್ನೊಬ್ಬ ಅಕ್ಕ ಮಿಸಾಭಾರತಿ ಪರಿಸ್ಥಿತಿ ತಿಳಿಗೊಳಿಸಿದರು. ಎಲ್ಲವೂ ಲಾಲು ಸಮ್ಮುಖದಲ್ಲೇ ನಡೆದರೂ ಅವರು ಸುಮ್ಮನೇ ಇದ್ದರು ಎಂದು ಗೊತ್ತಾಗಿದೆ. ಇದಾದ ಬಳಿಕ ಮನೆ ಬಿಟ್ಟು ದಿಲ್ಲಿ ಮೂಲಕ ರೋಹಿಣಿ ಸಿಂಗಾಪುರಕ್ಕೆ ತೆರಳಿದ್ದಾರೆ.

ಇತರ 3 ಪುತ್ರಿಯರೂ ದಿಲ್ಲಿಗೆ:

ಈ ನಡುವೆ, ಲಾಲು ಅವರ ಇತರ 3 ಹೆಣ್ಣುಮಕ್ಕಳಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಅವರು ತಮ್ಮ ಮಕ್ಕಳೊಂದಿಗೆ ಕುಟುಂಬದ ಪಟನಾ ನಿವಾಸವನ್ನು ತೊರೆದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಇದು ಬಿಹಾರದ ಅತ್ಯಂತ ಪ್ರಭಾವಶಾಲಿ ರಾಜಕೀಯ ಕುಟುಂಬದೊಳಗೆ ಹೆಚ್ಚುತ್ತಿರುವ ಬಿರುಕಿನ ಸೂಚನೆಯಾಗಿದೆ.

ನನ್ನ ಮೇಲೆ ನಿಂದನೆ, ಚಪ್ಪಲಿ ಏಟು:

ಇದಕ್ಕೆ ಪೂರಕವಾಗಿ ಸ್ಫೋಟಕ ಟ್ವೀಟ್ ಮಾಡಿರುವ ರೋಹಿಣಿ, ‘ನಿನ್ನೆ, ಒಬ್ಬ ಮಗಳು, ಸಹೋದರಿ, ವಿವಾಹಿತ ಮಹಿಳೆ ಮತ್ತು ತಾಯಿಯನ್ನು ಅವಮಾನಿಸಲಾಯಿತು. ಅವಳನ್ನು ಕೆಟ್ಟದಾಗಿ ನಿಂದಿಸಲಾಯಿತು ಮತ್ತು ಚಪ್ಪಲಿ ಎಸೆಯಲಾಯಿತು. ಆದರೆ ನಾನು ನನ್ನ ಸ್ವಾಭಿಮಾನದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ, ನಾನು ಸತ್ಯ ಬಿಟ್ಟುಕೊಡಲಿಲ್ಲ ಮತ್ತು ಈ ಕಾರಣದಿಂದಾಗಿ, ನಾನು ಈ ಅವಮಾನ ಸಹಿಸಿಕೊಳ್ಳಬೇಕಾಯಿತು’ ಎಂದು ಹಿಂದಿಯಲ್ಲಿ ಬರೆದಿದ್ದಾರೆ.

ಕೊಳಕು ಕಿಡ್ನಿ ಎಂದು ಮೂದಲಿಕೆ:

ಇದಲ್ಲದೆ, ‘ಚುನಾವಣಾ ಟಿಕೆಟ್‌ಗಾಗಿ ತಂದೆಗೆ ಕೊಳಕು (ದೋಷಪೂರಿತ) ಮೂತ್ರಪಿಂಡವನ್ನು ನೀನು ದಾನ ಮಾಡಿದೆ ಎಂದು ಕುಟುಂಬಸ್ಥರು ನನ್ನನ್ನು ದೂಷಿಸಿದರು’ ಎಂದು ಬೇಸರ ಹೊರಹಾಕಿದ್ದಾರೆ. ಲಾಲುಗೆ 2022ರಲ್ಲಿ ಮೂತ್ರಪಿಂಡ ವೈಫಲ್ಯವಾದಾಗ 1 ಕಿಡ್ನಿಯನ್ನು ರೋಹಿಣಿ ದಾನ ಮಾಡಿದ್ದರು. ನಂತರ 2024ರ ಲೋಕಸಭಾ ಚುನಾವಣೆಯಲ್ಲಿ ಸಾರಣ್‌ನಿಂದ ರೋಹಿಣಿ ಸ್ಪರ್ಧಿಸಿದ್ದರು ಎಂಬುದು ಇಲ್ಲಿ ಗಮನಾರ್ಹ. ಆದರೆ ಅವರು ಸೋತಿದ್ದರು.

ತೇಜಸ್ವಿ ಆಪ್ತರ ಮೇಲೆ ಗರಂ:

ನಂತರ ಪಟನಾದಿಂದ ನಿರ್ಗಮಿಸುವ ವೇಳೆ ರೋಹಿಣಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ ‘ತೇಜಸ್ವಿಯವರ ಆಪ್ತರನ್ನು ಪ್ರಶ್ನಿಸುವವರನ್ನು ಮನೆಯಿಂದ ಹೊರಗೆ ಹಾಕಲಾಗುತ್ತದೆ’ ಎಂ ದು ಕಿಡಿಕಾರಿದರು. ಇದಕ್ಕೂ ಮುನ್ನ ಶನಿವಾರ ಟ್ವೀಟ್‌ ಮಾಡಿದ್ದ ರೋಹಿಣಿ, ‘ನಾನು ಕುಟುಂಬ ಹಾಗೂ ರಾಜಕೀಯ ತ್ಯಜಿಸುತ್ತಿದ್ದೇನೆ. ಇದಕ್ಕೆ ತೇಜಸ್ವಿ ಆಪ್ತರಾದ ಸಂಜಯ ಯಾದವ್‌ ಹಾಗೂ ರಮೀಜ್‌ ಕಾರಣ’ ಎಂದು ಹೇಳಿದ್ದರು.

ತಮ್ಮ ಸೋದರ ತೇಜ್‌ಪ್ರತಾಪ್‌ ಯಾದವ್‌ ಅವರನ್ನು ಮನೆಯಿಂದ ಹೊರದಬ್ಬಿದ್ದನ್ನು ರೋಹಿಣಿ ವಿರೋಧಿಸಿದ್ದರು. ಹೀಗಾಗಿ ಅವರ ಮೇಲೆ ತೇಜಸ್ವಿಗೆ ಕೋಪವಿದೆ ಎನ್ನಲಾಗಿದೆ.

ಕೆಟ್ಟದಾಗಿ ನಿಂದಿಸಿ ಚಪ್ಪಲಿ ಎಸೆದರು

ನಿನ್ನೆ, ಒಬ್ಬ ಮಗಳು, ಸಹೋದರಿ, ವಿವಾಹಿತ ಮಹಿಳೆ ಮತ್ತು ತಾಯಿಯನ್ನು ಅವಮಾನಿಸಲಾಯಿತು. ನನ್ನ ಮೇಲೆ ಕೆಟ್ಟ ನಿಂದನೆಗಳನ್ನು ಹೊರಿಸಲಾಯಿತು ಮತ್ತು ಚಪ್ಪಲಿ ಎಸೆಯಲಾಯಿತು.ಚುನಾವಣಾ ಟಿಕೆಟ್‌ಗಾಗಿ ತಂದೆಗೆ ಕೊಳಕು ದೋಷಪೂರಿತ ಮೂತ್ರಪಿಂಡವನ್ನು ನೀನು ದಾನ ಮಾಡಿದೆ ಎಂದು ಕುಟುಂಬಸ್ಥರು ನನ್ನನ್ನು ದೂಷಿಸಿದರು.

- ರೋಹಿಣಿ ಆಚಾರ್ಯ, ಲಾಲು ಪುತ್ರಿ

-ಇತ್ತೀಚಿನ ಚುನಾವಣೆಯಲ್ಲಿ ಆರ್‌ಜೆಡಿಗೆ ಹೀನಾಯ ಸೋಲು. ಈ ಬಗ್ಗೆ ಲಾಲು, ರಾಬ್ಡಿ ಸಮ್ಮುಖದಲ್ಲಿ ಕುಟುಂಬ ಕಲಹ

ಸೋಲಿಗೆ ತೇಜಸ್ವಿ ಆಪ್ತ ಸಂಜಯ್‌, ರಮೀಜ್‌ ಕಾರಣ ಎಂದು ಅವರ ಸಮ್ಮುಖದಲ್ಲೇ ರೋಹಿಣಿ ಆಚಾರ್ಯ ಆರೋಪ

ಇದಕ್ಕೆ ಸಿಟ್ಟಿಗೆದ್ದ ತೇಜಸ್ವಿ ಯಾದವ್‌. ತಂದೆ, ತಾಯಿ ಸಮ್ಮುಖದಲ್ಲೇ ರೋಹಿಣಿ ಮೇಲೆ ಚಪ್ಪಲಿ ಎಸೆದು ಆಕ್ರೋಶ

ಇದರಿಂದ ಕೋಪಗೊಂಡು ಸಿಂಗಾಪುರಕ್ಕೆ ತೆರಳಿದ ರೋಹಿಣಿ. ಇತರೆ ಮೂವರು ಹೆಣ್ಣುಮಕ್ಕಳು ದೆಹಲಿಗೆ

ಈ ಹಿಂದೆ ರಾಜಕೀಯ ಮತ್ತು ಕೌಟುಂಬಿಕ ಕಾರಣಕ್ಕೆ ಪುತ್ರ ತೇಜ್‌ ಪ್ರತಾಪ್‌ರನ್ನು ಮನೆಯಿಂದ ಹೊರಹಾಕಿದ್ದ ಲಾಲು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಂಗಾಳಕೊಲ್ಲೀಲಿ ವಾಯುಭಾರ ಕುಸಿತ : ಭಾರೀ ಮಳೆ ಎಚ್ಚರಿಕೆ
ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು