ಆಂಧ್ರಪ್ರದೇಶ ಕರಾವಳಿಗಿಂದು ಅರ್ನಬ್‌ ಚಂಡಮಾರುತ ದಾಳಿ

Published : Oct 28, 2026, 10:44 AM IST
cyclone arnab

ಸಾರಾಂಶ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ತೀವ್ರ ಸ್ವರೂಪದ ‘ಅರ್ನಬ್‌’ (ಸಮುದ್ರ) ಚಂಡಮಾರುತ ಬುಧವಾರ ಆಂಧ್ರದ ವಿಶಾಖಪಟ್ಟಣ ಕರಾವಳಿಗೆ ಅಪ್ಪಳಿಸಲಿದ್ದು ಆಂಧ್ರ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಅಮರಾವತಿ/ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿರುವ ತೀವ್ರ ಸ್ವರೂಪದ ‘ಅರ್ನಬ್‌’ (ಸಮುದ್ರ) ಚಂಡಮಾರುತ ಬುಧವಾರ ಆಂಧ್ರದ ವಿಶಾಖಪಟ್ಟಣ ಕರಾವಳಿಗೆ ಅಪ್ಪಳಿಸಲಿದ್ದು ಆಂಧ್ರ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್‌ನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರದಲ್ಲಿ 89 ಸಾವಿರ ಮಂದಿಯನ್ನು ಈಗಾಗಲೇ ಸ್ಥಳಾಂತರಿಸಲಾಗಿದ್ದರೆ, ಒಡಿಶಾದಲ್ಲಿ 48 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗುತ್ತಿದೆ. ಆಂಧ್ರ ಮತ್ತು ಒಡಿಶಾದಲ್ಲಿ ಹಲವು ರೈಲುಗಳು ಹಾಗೂ ವಿಮಾನ ಸೇವೆ ವ್ಯತ್ಯಯಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಯಾನಂ ಸಮೀಪ ಗಂಟೆಗೆ 125-135 ಕಿ.ಮೀ. ವೇಗದೊಂದಿಗೆ ಚಂಡಮಾರುತ

ಹವಾಮಾನ ಇಲಾಖೆ ಪ್ರಕಾರ ಬಾಪಟ್ಲಾ ಮತ್ತು ವಿಶಾಖಪಟ್ಟಣದ ನಡುವಿನ ಯಾನಂ ಸಮೀಪ ಗಂಟೆಗೆ 125-135 ಕಿ.ಮೀ. ವೇಗದೊಂದಿಗೆ ಚಂಡಮಾರುತ ಅಪ್ಪಳಿಸುವ ನಿರೀಕ್ಷೆ ಇದೆ. ಚಂಡಮಾರುತ ಹಿನ್ನೆಲೆಯಲ್ಲಿ ಆಂಧ್ರದ ಶ್ರೀಕಾಕುಲಂ ಸೇರಿ 20 ಜಿಲ್ಲೆಗಳು ಹಾಗೂ ಒಡಿಶಾದ 8 ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ.

ಈಗಾಗಲೇ ರಾಜ್ಯದ 20 ಜಿಲ್ಲೆಗಳಲ್ಲಿ 2,131 ಚಂಡಮಾರುತ ಕೇಂದ್ರಗಳನ್ನು ತೆರೆಯಲಾಗಿದ್ದು, ಮೊಬೈಲ್‌ ಮೂಲಕ ಚಂಡಮಾರುತದ ಕುರಿತು ಮಾಹಿತಿ ವ್ಯವಸ್ಥೆ ಮಾಡಲಾಗಿದೆ. 30 ಸಾವಿರಕ್ಕೂ ಹೆಚ್ಚು ಮೀನುಗಾರಿಕಾ ಬೋಟ್‌ಗಳನ್ನು ಸುರಕ್ಷಿತಗೊಳಿಸಲಾಗಿದ್ದು, 1,087 ವೈದ್ಯಕೀಯ ತಂಡಗಳನ್ನು ಚಂಡಮಾರುತ ಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗಿದೆ.

8,281 ತುರ್ತು ಬೆಡ್‌ಗಳು, 1,274 ಆ್ಯಂಬುಲೆನ್ಸ್‌ಗಳನ್ನು ತುರ್ತು ಸಂದರ್ಭಕ್ಕಾಗಿ ಸಿದ್ಧವಾಗಿಟ್ಟುಕೊಳ್ಳಲಾಗಿದ್ದು, ಆಸ್ಪತ್ರೆಗಳಲ್ಲಿ ಹಾವು ಕಚ್ಚಿದಾಗ ನೀಡುವ 21,536 ಡೋಸ್‌ನಷ್ಟು ಔಷಧ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. 20 ಜಿಲ್ಲೆಗಳ 1,351 ಗರ್ಭಿಣಿಯರನ್ನು ಸುರಕ್ಷಿತವಾಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಕುಡಿವ ನೀರಿನ ಟ್ಯಾಂಕರ್‌ಗಳು, ಜನರೇಟರ್‌ಗಳ, ಆರ್‌ಒ ಪ್ಲಾಂಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಡಿಶಾದಲ್ಲೂ ಅಗತ್ಯ ಸಿದ್ಧತೆ:

ಚಂಡಮಾರುತದ ಪರಿಣಾಮ ಒಡಿಶಾದಲ್ಲೂ ಕಾಣಿಸಿಕೊಂಡಿದ್ದು, ಈಗಾಗಲೇ ಭಾರೀ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಒಡಿಶಾದ 8 ಜಿಲ್ಲೆಗಳಲ್ಲಿ ಈಗಾಗಲೇ ಶಾಲೆ-ಕಾಲೇಜುಗಳಿಗೆ ಮಂಗಳವಾರ-ಬುಧವಾರ ರಜೆ ಘೋಷಿಸಲಾಗಿದೆ. ಜಾರ್ಖಂಡ್‌ನಲ್ಲೂ ಭಾರೀ ಮಳೆಯ ನಿರೀಕ್ಷೆ ಇದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

4000 ಪರಿಹಾರ ಕೇಂದ್ರ ಸ್ಥಾಪನೆ

50 ರೈಲುಗಳ ಸಂಚಾರ ರದ್ದು

1087 ವೈದ್ಯಕೀಯ ತಂಡ ರಚನೆ

8281 ಎಮರ್ಜೆನ್ಸಿ ಬೆಡ್‌ ಮೀಸಲು

1273 ಆ್ಯಂಬುಲೆನ್ಸ್‌ ಸನ್ನದ್ಧ ಸ್ಥಿತಿಯಲ್

1351 ಗರ್ಭಿಣಿಯರು ಆಸ್ಪತ್ರೆಗೆ ರವಾನೆ

2.70 ಕೋಟಿ ಜನರಿಗೆ ಸೈಕ್ಲೋನ್‌ ಸಂದೇಶ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುರೋಪ್‌ನ 5 ದೇಶಗಳಲ್ಲಿ ವೀಕೆಂಡ್‌ ದಂಗೆ
ಇಂದು ರಾಗಾ ವಿರುದ್ಧದ ಮಾನನಷ್ಟ ದಾವೆ ತೀರ್ಪು