ಗುಜರಾತ್‌ನಲ್ಲಿ ವಾಯುಭಾರ ಕುಸಿತ - ಮಳೆಯ ಆರ್ಭಟ: ರಾಜ್ಯಕ್ಕೆ ಚಂಡಮಾರುತ ಅಸ್ನಾ ಆತಂಕ

KannadaprabhaNewsNetwork | Updated : Aug 31 2024, 04:55 AM IST

ಸಾರಾಂಶ

ಗುಜರಾತ್‌ನಲ್ಲಿ ಭಾರಿ ಮಳೆಗೆ ಕಾರಣವಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು, ರಾಜ್ಯಕ್ಕೆ ಮತ್ತಷ್ಟು ಮಳೆಯ ಆತಂಕ ಎದುರಾಗಿದೆ. ಈ ಚಂಡಮಾರುತಕ್ಕೆ ‘ಅಸ್ನಾ’ ಎಂದು ಹೆಸರಿಡಲಾಗಿದೆ. 1976ರ ಬಳಿಕ ಆಗಸ್ಟ್ ತಿಂಗಳಿನಲ್ಲಿ ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡ ಮೊದಲ ಚಂಡಮಾರುತ ಇದಾಗಿದೆ.

ನವದೆಹಲಿ: ಗುಜರಾತ್‌ನಲ್ಲಿ ಭಾರಿ ಮಳೆಗೆ ಕಾರಣವಾಗಿರರುವ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿರ್ವರ್ತನೆ ಆಗಿದೆ. ಹೀಗಾಗಿ ರಾಜ್ಯಕ್ಕೆ ಮತ್ತಷ್ಟು ಮಳೆಯ ಆತಂಕ ಸೃಷ್ಟಿಯಾಗಿದೆ. ಈ ಚಂಡಮಾರುತಕ್ಕೆ ‘ಅಸ್ನಾ’ ಎಂದು ಹೆಸರಿಡಲಾಗಿದೆ.

1976ರ ಬಳಿಕ ಅರಬ್ಬೀ ಸಮುದ್ರದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಕಾಣಿಸಿಕೊಂಡ ಮೊದಲ ಚಂಡಮಾರುತ ಇದಾಗಿದೆ.

‘ಕಛ್‌ ಕರಾವಳಿ ಮತ್ತು ಪಾಕಿಸ್ತಾನದ ಪ್ರದೇಶಗಳಲ್ಲಿ ಅಸ್ನಾ ಚಂಡಮಾರುತ ತೀವ್ರಗೊಂಡಿದೆ. ಆರಂಭದಲ್ಲಿ ಗಂಟೆಗೆ 6 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ. ಆದರೆ ಇದು ಭಾರತದ ಕರಾವಳಿಯಿಂದ ಆಚೆ ವಾಯವ್ಯ ದಿಕ್ಕಿನತ್ತ ಸಾಗುತ್ತಿದೆ. ಹೀಗಾಗಿ ಹೆಚ್ಚಿನ ಆತಂಕವಿಲ್ಲ’ ಎಂದು ಹವಾಮಾನ ಇಲಾಖೆ ಹೇಳಿದೆ.

ಪಾಕಿಸ್ತಾನ ಈ ಚಂಡಮಾರುತಕ್ಕೆ ಆಸ್ನಾ ಎಂದು ಹೆಸರು ನೀಡಿದೆ. 1891 ರಿಂದ 2023ರ ನಡುವೆ ಅರಬ್ಬೀ ಸಮುದ್ರದಲ್ಲಿ ಆಗಸ್ಟ್‌ ತಿಂಗಳಿನಲ್ಲಿ 3 ಚಂಡಮಾರುತಗಳು ಮಾತ್ರ ಸಂಭವಿಸಿವೆ. ಇದು 4ನೇಯದ್ದಾಗಿದೆ.

ಗುಜರಾತ್‌ನಲ್ಲಿ ಇದುವರೆಗೆ ಮಳೆಯಿಂದ 26 ಮಂದಿ ಸಾವನ್ನಪ್ಪಿದ್ದು, 18 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

==

ಪ್ರವಾಹ ಕಾರಣ ಜನವಸತಿ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ

ವಡೋದರ: ಗುಜರಾತಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯ ಪರಿಣಾಮ ಜನವಸತಿ ಪ್ರದೇಶಗಳಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿ ಜನರಲ್ಲಿ ಅತಂಕ ಸೃಷ್ಟಿಸುತ್ತಿದೆ. ಸುಮಾರು 300 ಮೊಸಳೆಗಳಿಗೆ ಆವಾಸ ಸ್ಥಾನವಾಗಿರುವ ವಿಶ್ವಮಿತ್ರಿ ನದಿ ಪ್ರವಾಹದ ಪರಿಣಾಮ ಮೊಸಳೆಗಳು ಊರಿನಲ್ಲಿ ಕಾಣಿಸಿಕೊಳ್ಳುತ್ತಿದೆ.ಸುಮಾರು 10 ರಿಂದ 15 ಅಡಿ ಎತ್ತರದ ಮೊಸಳೆಗಳು ವಡೋದರದ ಪಾರ್ಕ್‌, ರಸ್ತೆಗಳು, ಮನೆಯ ಹೊರಗಡೆ, ಶಾಲಾ- ಕಾಲೇಜಿನ ಆವರಣದಲ್ಲಿ ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ಮನೆಯ ಮೇಲ್ಛಾವಣಿಯ ಮೇಲೆ ಸರೀಸೃಪಗಳ ಸಂಖ್ಯೆಯು ಹೆಚ್ಚಾಗಿದ್ದು, ಇಲ್ಲಿನ ನಿವಾಸಿಗಳಿಗೆ ಹೊಸ ಭೀತಿ ಶುರುವಾಗಿದೆ. ಕಳೆದ ಐದು ದಿನಗಳಲ್ಲಿ ಆರ್‌ಎಫ್‌ಒ ಅಧಿಕಾರಿಗಳು ಸುಮಾರು 10 ಮೊಸಳೆಗಳನ್ನು ರಕ್ಷಿಸಿದ್ದಾರೆ.

26 ಬಲಿ:

ವಾಯುಭಾರ ಕುಸಿತದಿಂದ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗುಜರಾತಿನಲ್ಲಿ ಇದುವರೆಗೆ 26 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಅನೇಕ ಕಡೆ 2ರಿಂದ 3 ಸೆಂ.ಮೀ. ಮಳೆ ಸುರಿದಿದೆ.

==

ವಾಯುಭಾರ ಕುಸಿತ: ಆಂಧ್ರ, ಒಡಿಶಾಗೆ ಭಾರಿ ಮಳೆ ಮುನ್ನೆಚ್ಚರಿಕೆ

ಅಮರಾವತಿ (ಆಂಧ್ರಪ್ರದೇಶ): ಉತ್ತರ ಬಂಗಾಳ ಕೊಲ್ಲಿಯಲ್ಲಿ ಗುರುವಾರ ವಾಯುಭಾರ ಕುಸಿತ ಆಗಿದೆ. ಹೀಗಾಗಿ ಆಂಧ್ರಪ್ರದೇಶ ಹಾಗೂ ಒಡಿಶಾದ ಅನೇಕ ಭಾಗಗಳಲ್ಲಿ 2 ದಿನ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಹೇಳಿದೆ.ವಾಯುಭಾರ ಕುಸಿತದ ಕಾರಣ ಮಾರುತಗಳು ಶುಕ್ರವಾರ ಬೆಳಿಗ್ಗೆ 5.30ಕ್ಕೆ ಆಂಧ್ರಪ್ರದೇಶ, ಒಡಿಶಾಗೆ ತಲುಪಿವೆ. ಆ.31 ಮತ್ತು ಸೆ.1 ರಂದು ಕೆಲವು ಸ್ಥಳಗಳಲ್ಲಿ ಗುಡುಗು, ಸಿಡಿಲು ಕಾಣಿಸಿಕೊಳ್ಳಲಿದ್ದು ಯಾನಂ, ಆದ್ರಪ್ರದೇಶದ ಉತ್ತರ ಕರಾವಳಿ, ದಕ್ಷಿಣ ಕರಾವಳಿ ಮತ್ತು ರಾಯಲಸೀಮೆ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ. ಈ ವೇಳೆ 30-40 ಕಿ.ಮೀ. ವೇಗದಲ್ಲಿ ಗಾಳಿ ಇರಲಿದೆ’ ಎಂದು ಐಎಂಡಿ ಹೇಳಿದೆ.

Share this article