ಕಳವಳಕಾರಿ ಹಂತಕ್ಕೆ ದಿಲ್ಲಿ ಹವೆ: ಕಠಿಣ ನಿಯಮ ಜಾರಿ

KannadaprabhaNewsNetwork |  
Published : Dec 14, 2025, 03:00 AM IST
ದಿಲ್ಲಿ | Kannada Prabha

ಸಾರಾಂಶ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕಳವಳಕಾರಿ ಮಟ್ಟಕ್ಕೆ ಕುಸಿದಿರುವ ಕಾರಣ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ (ಜಿಆರ್‌ಎಪಿ) 4ನೇ ಹಂತದ ಅಡಿಯಲ್ಲಿ ಮಾಲಿನ್ಯ ತಡೆ ನಿರ್ಬಂಧಗಳನ್ನು ಶನಿವಾರ ಜಾರಿಗೊಳಿಸಲಾಗಿದೆ. ಇದರನ್ವಯ ಅನಗತ್ಯ ಕಟ್ಟಡ ನಿರ್ಮಾಣ, ಕಲ್ಲು ಕ್ವಾರಿ, ಗಣಿಗಾರಿಕೆ, ಹಳೆಯ ಡೀಸೆಲ್‌ ವಾಹನಗಳ ಚಾಲನೆ ಸೇರಿ ಹಲವು ಚಟುವಟಿಕೆಗಳಿಗೆ ನಿಷೇಧ ಬಿದ್ದಿದೆ.

-430ರ ಗಡಿ ದಾಟಿದ ವಾಯುಗುಣಮಟ್ಟ ಸೂಚ್ಯಂಕ

-ಕಟ್ಟಡ ನಿರ್ಮಾಣ, ಗಣಿಗಾರಿಕೆ, ಕಲ್ಲು ಕ್ವಾರಿ ನಿಷೇಧ

-ಹಳೆಯ ಡೀಸೆಲ್‌ ಚಾಲಿತ ಗಾಡಿಗಳಿಗೆ ಪ್ರವೇಶ ಬಂದ್‌

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕಳವಳಕಾರಿ ಮಟ್ಟಕ್ಕೆ ಕುಸಿದಿರುವ ಕಾರಣ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ (ಜಿಆರ್‌ಎಪಿ) 4ನೇ ಹಂತದ ಅಡಿಯಲ್ಲಿ ಮಾಲಿನ್ಯ ತಡೆ ನಿರ್ಬಂಧಗಳನ್ನು ಶನಿವಾರ ಜಾರಿಗೊಳಿಸಲಾಗಿದೆ. ಇದರನ್ವಯ ಅನಗತ್ಯ ಕಟ್ಟಡ ನಿರ್ಮಾಣ, ಕಲ್ಲು ಕ್ವಾರಿ, ಗಣಿಗಾರಿಕೆ, ಹಳೆಯ ಡೀಸೆಲ್‌ ವಾಹನಗಳ ಚಾಲನೆ ಸೇರಿ ಹಲವು ಚಟುವಟಿಕೆಗಳಿಗೆ ನಿಷೇಧ ಬಿದ್ದಿದೆ.

ಶನಿವಾರ ದೆಹಲಿಯಲ್ಲಿ ಸರಾಸರಿ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) 431 ಅಂಕ ದಾಖಲಾಯಿತು. ಇದು ‘ಗಂಭೀರ’ ವಿಭಾಗದಲ್ಲಿ ಬರುತ್ತದೆ. ವಾಜಿರ್‌ಪುರ (445) ಅತಿ ಹೆಚ್ಚು ವಾಯುಮಾಲಿನ್ಯ ಸೂಚ್ಯಂಕವನ್ನು ದಾಖಲಿಸಿದ್ದು, ನಂತರ ವಿವೇಕ್ ವಿಹಾರ್ (444) ಮತ್ತು ಜಹಾಂಗೀರ್‌ಪುರಿ (442) ದಾಖಲಾಗಿವೆ. ಆನಂದ್ ವಿಹಾರ್ (439), ಅಶೋಕ್ ವಿಹಾರ್ (437) ಮತ್ತು ರೋಹಿಣಿ (437) ಕೂಡ ತೀವ್ರ ವಾಯುಮಾಲಿನ್ಯವನ್ನು ವರದಿ ಮಾಡಿವೆ. ದಟ್ಟವಾದ ವಿಷಕಾರಿ ಹೊಗೆ ನಗರವನ್ನು ಆವರಿಸಿದ್ದು, ಸ್ಪಷ್ಟವಾದ ಗೋಚರತೆಯೇ ಇಲ್ಲದಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ಎಕ್ಯುಐ 0-50ರ ವರೆಗೆ ಉತ್ತಮ, 51-100 ಸಮಾಧಾನಕರ, 101-200 ಮಧ್ಯಮ, 201-300 ಕಳಪೆ, 301-400 ತೀರಾ ಕಳಪೆ, 401-500 ಗಂಭೀರ ಎಂದು ಗುರುತಿಸಲಾಗಿದೆ. ದೆಹಲಿ ಈಗ ಅಂತಿಮ ಹಂತದಲ್ಲಿದೆ.

ಯಾವುದಕ್ಕೆಲ್ಲ ನಿರ್ಬಂಧ?: ಹೊಸ ನಿಯಮಗಳ ಪ್ರಕಾರ, ಅನಗತ್ಯ ಕಟ್ಟಡಗಳ ನಿರ್ಮಾಣ-ನೆಲಸಮ, ಕಲ್ಲು ಕ್ವಾರಿ, ಗಣಿಗಾರಿಕೆ ಮೊದಲಾದ ಕೆಲಸಗಳನ್ನು ನಿಷೇಧಿಸಲಾಗಿದೆ. ಹಳೆಯ ಡೀಸೆಲ್‌ ಚಾಲಿತ ಸರಕು ವಾಹನಗಳು ದೆಹಲಿ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಕೆಲವೇ ದಿನ ಶಾಲೆಗೆ ಬರುವಂತೆ ಸೂಚಿಸಲಾಗಿದೆ. ಶೇ.50ರಷ್ಟು ಉದ್ಯೋಗಿಗಳು ಮಾತ್ರ ಕಚೇರಿಗಳಿಗೆ ಬರುವಂತೆ, ಉಳಿದವರು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ