ಚೀನಿ ಆ್ಯಪ್‌ ಬಳಸಿ ದೇಶದ ಎಲೆಕ್ಟ್ರಿಕ್‌ ರಿಕ್ಷಾಗಳು ಹ್ಯಾಕ್‌ !- ನಡುರಸ್ತೆಯಲ್ಲೇ ನಿಲ್ಲುತ್ತಿವೆ ಇ-ರಿಕ್ಷಾ

KannadaprabhaNewsNetwork |  
Published : Jul 04, 2026, 01:45 AM ISTUpdated : Jul 04, 2026, 04:58 AM IST
E Rikshaw

ಸಾರಾಂಶ

ಚೀನಾ ಮೂಲದ ಮೊಬೈಲ್‌ ಆ್ಯಪ್‌ನೊಂದಿಗೆ ಸಂಪರ್ಕಿತ ಎಲೆಕ್ಟ್ರಿಕ್‌ ರಿಕ್ಷಾಗಳು ಮಾರ್ಗ ಮಧ್ಯದಲ್ಲೇ ದಿಢೀರ್‌ ಬಂದ್‌ ಆಗುತ್ತಿರುವ ಪ್ರಕರಣಗಳು ದೆಹಲಿ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಡೆದಿವೆ.

 ನವದೆಹಲಿ: ಚೀನಾ ಮೂಲದ ಮೊಬೈಲ್‌ ಆ್ಯಪ್‌ನೊಂದಿಗೆ ಸಂಪರ್ಕಿತ ಎಲೆಕ್ಟ್ರಿಕ್‌ ರಿಕ್ಷಾಗಳು ಮಾರ್ಗ ಮಧ್ಯದಲ್ಲೇ ದಿಢೀರ್‌ ಬಂದ್‌ ಆಗುತ್ತಿರುವ ಪ್ರಕರಣಗಳು ದೆಹಲಿ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಡೆದಿವೆ. ಇದನ್ನು ಹ್ಯಾಕಿಂಗ್‌ ರೀತಿಯ ದಾಳಿ ಎಂದು ಹೇಳಲಾಗಿದ್ದು, ಕೇಂದ್ರ ಸರ್ಕಾರವು 7 ಚೀನಾ ಮೂಲದ ಬ್ಯಾಟರಿ ಮ್ಯಾನೇಜ್‌ಮೆಂಟ್‌ ಆ್ಯಪ್‌ಗಳನ್ನು ಗೂಗಲ್‌ ಹಾಗೂ ಆ್ಯಪಲ್‌ ಪ್ಲೇಸ್ಟೋರ್‌ಗಳಿಂದ ತೆಗೆದುಹಾಕಲು ನಿರ್ದೇಶನ ನೀಡಿದೆ.

ಬ್ಯಾಟರಿ ಮ್ಯಾನೇಜ್‌ಮೆಂಟ್‌ ವ್ಯವಸ್ಥೆ (ಬಿಎಂಎಸ್) ಆ್ಯಪ್‌ ಬಳಸಿ ಇ-ರಿಕ್ಷಾಗಳ ಬ್ಯಾಟರಿ ಬಂದ್‌ ಮಾಡುವ ಕೃತ್ಯಗಳು ಇವಾಗಿವೆ. ಇದರ ಬೆನ್ನಲ್ಲೇ ರಿಕ್ಷಾ ಚಾಲಕರಲ್ಲಿ ಸೈಬರ್‌ ದಾಳಿಯ ಆತಂಕ ಮನೆ ಮಾಡಿದೆ. ಹೀಗಾಗಿ ಕೇಂದ್ರದ ಐಟಿ ಸಚಿವಾಲಯವು ಬಿಎಟಿ-ಬಿಎಂಎಸ್‌, ಲೂಸಿಗಿ, ಇಪೋಚ್‌-ಐ-ಅಯಾನ್‌ ಸೇರಿದಂತೆ 7 ಚೀನಾ ನಿರ್ಮಿತ ಬ್ಯಾಟರಿ ನಿರ್ವಹಣಾ ಆ್ಯಪ್‌ಗಳ ಮೇಲೆ ನಿರ್ಬಂಧ ಹೇರಿದೆ.

ಆಗಿದ್ದೇನು?:

ಇ-ರಿಕ್ಷಾಗಳ ಬ್ಯಾಟರಿಯನ್ನು ಬ್ಲೂಟೂತ್‌ ಆಧರಿತ ಮೊಬೈಲ್‌ಗಳ ಮೂಲಕ ನಿರ್ವಹಣೆ ಮಾಡಲು ಅವಕಾಶವಿದೆ. ಆದರೆ ಸೂಕ್ತ ಸುರಕ್ಷತಾ ಸೌಲಭ್ಯಗಳ ಕೊರತೆಯಿಂದಾಗಿ ಅದೀಗ ದುರ್ಬಳಕೆ ಆಗುತ್ತಿದೆ. ಬ್ಲೂಟೂತ್‌ ವ್ಯಾಪ್ತಿಯಲ್ಲಿರುವ ಯಾರು ಬೇಕಿದ್ದರೂ ಈ ಆ್ಯಪ್‌ಗಳನ್ನು ದುರ್ಬಳಕೆ ಮಾಡಿಕೊಂಡು ನಿರ್ದಿಷ್ಟ ಇ-ರಿಕ್ಷಾ ವೇಗವಾಗಿ ಸಾಗುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ಸ್ಥಗಿತಗೊಳ್ಳುವಂತೆ ಮಾಡಬಹುದಾಗಿದೆ.

ಬ್ಯುಸಿ ರಸ್ತೆಗಳಲ್ಲಿ ಸಾಗುತ್ತಿರುವ ಹೊತ್ತಿನಲ್ಲೇ ಇ-ರಿಕ್ಷಾಗಳು ದಿಢೀರ್‌ ಆಗಿ ಬಂದ್‌ ಆಗುತ್ತಿವೆ. ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯೊಂದರಲ್ಲೇ ಕಳೆದೆರಡು ದಿನಗಳಲ್ಲಿ ಇಂಥ 30ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶದ ಉಜ್ಜಯಿನಿ ಹಾಗೂ ದಿಲ್ಲಿಯಲ್ಲೂ ಇಂಥ ಘಟನೆಗಳು ನಡೆದಿವೆ. ಉಜ್ಜಯಿನಿಯಲ್ಲಂತೂ ಕೆಲವು ಕಿಡಿಗೇಡಿಗಳು ಬ್ಯಾಟರಿಯನ್ನು ಆ್ಯಪ್‌ ಬಳಸಿ ಹ್ಯಾಕ್‌ ಮಾಡಿದ್ದಾರೆ. ಬಳಿಕ ಅವರೇ ಇ-ರಿಕ್ಷಾ ಚಾಲಕರ ಬಳಿ ಹೋಗಿ, ‘ರಿಪೇರಿ ಮಾಡಿಕೊಡುತ್ತೇವೆ’ ಎಂದು ಸುಳ್ಳು ಹೇಳಿ 200-300 ರು. ಪೀಕಿದ ಘಟನೆಗಳು ನಡೆದಿವೆ.

ಇದೀಗ ಸುರಕ್ಷತಾ ಕ್ರಮಗಳ ಕೊರತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 7 ಚೀನಾದ ಆ್ಯಪ್‌ಗಳನ್ನು ನಿರ್ಬಂಧಿಸಿದೆ.

ಇಂಥ ಘಟನೆಗಳ ಹಿನ್ನೆಲೆಯಲ್ಲಿ ಬಡ ಇ-ರಿಕ್ಷಾ ಚಾಲಕರಲ್ಲಿ ಆತಂಕ ಮನೆ ಮಾಡಿದೆ. ದೆಹಲಿ ಸರ್ಕಾರ ಕೂಡ ಸಾರಿಗೆ ಇಲಾಖೆಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದೆ.

ಸಮಸ್ಯೆ ಏನು?:

ವರದಿಗಳ ಪ್ರಕಾರ ಲಿಥಿಯಂ-ಇಯಾನ್‌ ಬ್ಯಾಟರಿಗಳು ಇ-ರಿಕ್ಷಾಗಳಿಗೆ ಬಳಕೆಯಾಗುತ್ತಿದ್ದು, ಇವುಗಳನ್ನು ಬ್ಲೂಟೂತ್‌ ಆಧರಿತ ಬ್ಯಾಟರಿ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಬಿಎಂಎಸ್‌) ಆ್ಯಪ್‌ ಜತೆಗೆ ಸಂಪರ್ಕಿಸಲಾಗುತ್ತದೆ. ಈ ಮೂಲಕ ಎಷ್ಟು ಬ್ಯಾಟರಿ ಖಾಲಿಯಾಗಿದೆ, ಅದರ ಸ್ಥಿತಿಗತಿ ಏನು ಎಂಬುದನ್ನು ಮೊಬೈಲ್‌ ಮೂಲಕವೇ ಪರಿಶೀಲಿಸಲು ಚಾಲಕರಿಗೆ ಅವಕಾಶ ಸಿಗುತ್ತದೆ. ಆದರೆ, ಕೆಲ ಬ್ಯಾಟರಿ ಸಿಸ್ಟಂಗಳು ಪಾಸ್‌ವರ್ಡ್‌ ಪ್ರೊಟೆಕ್ಷನ್ ಹೊಂದಿರುವುದಿಲ್ಲ. ಅಲ್ಲದೆ, ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಹೊಂದಿಲ್ಲ. ಡೀಲರ್‌ಗಳು ಕೂಡ ಈ ಬಗ್ಗೆ ಚಾಲಕರಲ್ಲಿ ಜಾಗೃತಿ ಮೂಡಿಸಿರುವುದಿಲ್ಲ. ಈ ಕಾರಣ ಬ್ಲೂಟೂತ್‌ ರೇಂಜ್‌ ವ್ಯಾಪ್ತಿಯಲ್ಲಿರುವ ಯಾರು ಬೇಕಾದರೂ ಆ ಆ್ಯಪ್‌ ಅನ್ನು ದುರ್ಬಳಕೆ ಮಾಡಿಕೊಂಡು ಬ್ಯಾಟರಿಯನ್ನು ಬಂದ್‌ ಮಾಡಬಹುದಾಗಿದೆ. ಇದರಿಂದ ಮಾರ್ಗ ಮಧ್ಯೆಯೇ ಇ-ರಿಕ್ಷಾ ಸ್ಥಗಿತಗೊಳ್ಳುವ ಆತಂಕ ಇರುತ್ತದೆ. ಆದರೆ ಹಳೆಯ ಲೆಡ್‌ ಆ್ಯಸಿಡ್‌ ಬ್ಯಾಟರಿ ಚಾಲಿತ ಇ-ರಿಕ್ಷಾಗಳಿಗೆ ಈ ಸಮಸ್ಯೆ ಇಲ್ಲ ಎಂದು ಹೇಳಲಾಗಿದೆ.

ಏನಿದು ಸಮಸ್ಯೆ?- ಇ-ರಿಕ್ಷಾಗಳಿಗೆ ಲೀಥಿಯಂ ಬ್ಯಾಟರಿ ಬಳಸಲಾಗುತ್ತದೆ. ಬ್ಯಾಟರಿಯ ಮಟ್ಟ ತಿಳಿಯಲು ಬ್ಯಾಟರಿ ಮ್ಯಾನೇಜ್‌ಮೆಂಟ್‌ ಸಿಸ್ಟಂ ಆ್ಯಪ್‌ ಬಳಸಲಾಗುತ್ತದೆ- ಇವು ಚೀನಿ ಕಂಪನಿಗಳು ಅಭಿವೃದ್ಧಿಪಡಿಸಿದ ಆ್ಯಪ್‌ಗಳು. ಬ್ಲೂಟೂತ್‌ ನೆರವಿಂದ ರಿಕ್ಷಾದಲ್ಲಿನ ಬ್ಯಾಟರಿ ಜತೆ ಚಾಲಕರು ಸಂಪರ್ಕ ಸಾಧಿಸಬಹುದು- ಆದರೆ ಈ ಆ್ಯಪ್‌ಗಳು ಸುರಕ್ಷತಾ ಕ್ರಮಗಳನ್ನು ಹೊಂದಿಲ್ಲ. ಹೀಗಾಗಿ ಬ್ಲೂಟೂತ್‌ ಸಹಾಯದಿಂದ ಯಾರು ಬೇಕಾದರೂ ಆ್ಯಪ್‌ ಹ್ಯಾಕ್‌ ಮಾಡಬಹುದು--ಹ್ಯಾಕ್‌ ಮಾಡಿ ಸುಲಿಗೆ- ಬ್ಲೂ ಟೂತ್‌ ಸಹಾಯದಿಂದ ಇ-ರಿಕ್ಷಾಗಳನ್ನು ಹ್ಯಾಕ್‌ ಮಾಡಿದರೆ, ಓಡುತ್ತಿರುವ ರಿಕ್ಷಾವನ್ನು ಎಲ್ಲಿ ಬೇಕಾದರೂ ನಿಲ್ಲಿಸಬಹುದು- ಏನಾಯಿತು ಎಂದು ಚಾಲಕರಿಗೆ ಗೊತ್ತಾಗುವುದಿಲ್ಲ. ಡೀಲರ್‌ಗಳು ಕೂಡ ಚಾಲಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುತ್ತಿಲ್ಲ- ಹ್ಯಾಕ್‌ ಮಾಡಿದ ವ್ಯಕ್ತಿಗಳು ರಿಕ್ಷಾ ಚಾಲಕರ ಬಳಿ ಬಂದು ಸಮಸ್ಯೆ ಸರಿಪಡಿಸುವುದಾಗಿ ನಂಬಿಸಿ ಹಣ ಕೀಳುತ್ತಿರುವ ಪ್ರಕರಣ ಪತ್ತೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೆಳಹಂತದ ರಾಜ್ಯಗಳ ಹಕ್ಕನ್ನು ರಕ್ಷಿಸಿ: ವಿಜಯ್‌
ಭಾಗವತ್‌ ಕೆನಡಾ ಭೇಟಿಗೆ ಅಲ್ಲಿನ 100 ಸಂಘಟನೆಗಳ ಭಾರಿ ಬೆಂಬಲ