ದಿಲ್ಲಿ ಗ್ಯಾಸ್‌ ಚೇಂಬರ್‌: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಮಾಲಿನ್ಯ ಮತ್ತಷ್ಟು ಗಂಭೀರ

KannadaprabhaNewsNetwork |  
Published : Nov 15, 2024, 12:35 AM ISTUpdated : Nov 15, 2024, 04:53 AM IST
ದೆಹಲಿ | Kannada Prabha

ಸಾರಾಂಶ

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ದೆಹಲಿಯಲ್ಲಿ ಮಾಲಿನ್ಯ ಮತ್ತಷ್ಟು ಗಂಭೀರವಾಗಿದ್ದು, ಗುರುವಾರದ ವಾಯುಗುಣಮಟ್ಟವು 428ಕ್ಕೆ ಕುಸಿದಿದೆ.

ನವದೆಹಲಿ: ಚಳಿಗಾಲ ಆರಂಭವಾಗುತ್ತಿದ್ದಂತೆಯೇ ದೆಹಲಿಯಲ್ಲಿ ಮಾಲಿನ್ಯ ಮತ್ತಷ್ಟು ಗಂಭೀರವಾಗಿದ್ದು, ಗುರುವಾರದ ವಾಯುಗುಣಮಟ್ಟವು 428ಕ್ಕೆ ಕುಸಿದಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ತುರ್ತುಕ್ರಮಗಳನ್ನು ಘೋಷಿಸಿರುವ ದೆಹಲಿಯ ಆಮ್‌ಆದ್ಮಿ ಸರ್ಕಾರ, ಆನ್‌ಲೈನ್‌ನಲ್ಲೇ ಶಾಲೆ, ಕಟ್ಟಡ ನಿರ್ಮಾಣ/ಧ್ವಂಸ ಚಟುವಟಿಕೆ, ಡೀಸೆಲ್‌ ವಾಹನಗಳ ಸಂಚಾರಕ್ಕೆ ಬ್ರೇಕ್‌ ಹಾಕಲು ನಿರ್ಧರಿಸಿದೆ.

 ಶುಕ್ರವಾರ ಬೆಳಗ್ಗೆಯಿಂದಲೇ ಈ ಎಲ್ಲಾ ನಿರ್ಬಂಧಗಳು ಜಾರಿಗೆ ಬರಲಿವೆ.ದೆಹಲಿ ಮಾತ್ರವಲ್ಲದೇ ನೆರೆಯ ಹರ್ಯಾಣ ಹಾಗೂ ಪಂಜಾಬ್‌ನಲ್ಲಿ ವಾಯುಗುಣಮಟ್ಟ ‘ಗಂಭೀರ’ ಗುಣಮಟ್ಟಕ್ಕೆ ಇಳಿದಿದ್ದು, ಚಂಡೀಗಢದಲ್ಲಿ ವಾಯುಗುಣಮಟ್ಟ 427ಕ್ಕೆ ಕುಸಿದಿದೆ. ದಿಲ್ಲಿಯಲ್ಲಿ ಗುರುವಾರ ಈ ಸೀಸನ್‌ನ ಅತಿ ಕನಿಷ್ಠ ತಾಪಮಾನ 16 ಡಿಗ್ರಿ ದಾಖಲಾಗಿದೆ. ಜೊತೆಗೆ ಅತಿಯಾದ ಹೊಗೆಮಾಲಿನ್ಯದಿಂದಾಗಿ ಗೋಚರತೆ ಶೂನ್ಯವಾಗಿದ್ದು, ನಗರವು ‘ಗ್ಯಾಸ್‌ ಚೇಂಬರ್’ ಆಗಿ ಪರಿವರ್ತನೆಯಾಗಿದೆ. ದಿಲ್ಲಿ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 300 ವಿಮಾನಗಳ ಹಾರಾಟ ವಿಳಂಬವಾಗಿದೆ.

ಈ ನಡುವೆ ದೆಹಲಿಯಲ್ಲಿ ಮಾಲಿನ್ಯ ತಡೆಗೆ ಕ್ರಮ ಜಾರಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ.18 ರಂದು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಸಮ್ಮತಿಸಿದೆ.

ಮಾಲಿನ್ಯ ತಡೆಗೆ 2 ಕ್ರಮಗಳ ಘೋಷಣೆ:

ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರ ಮಟ್ಟ ತಲುಪಿದ ಬೆನ್ನಲ್ಲೇ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ದೆಹಲಿ ಸರ್ಕಾರ, ‘ಜಿಆರ್‌ಎಪಿ-2’ ಹಾಗೂ ‘ಜಿಆರ್‌ಎಪಿ-3’ ಪ್ಲಾನ್‌ ಜಾರಿಗೆ ತರುವುದಾಗಿ ಘೋಷಿಸಿದೆ. ಶುಕ್ರವಾರ ಬೆಳಗ್ಗೆ 8ರಿಂದ ಇವು ಜಾರಿಗೆ ಬರಲಿವೆ.

‘ಜಿಆರ್‌ಎಪಿ-2’ ಪ್ರಕಾರ ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಕಲ್ಲಿದ್ದಲು, ಉರುವಲು ಹಾಗೂ ಡೀಸೆಲ್ ಜನರೇಟರ್ ಸೆಟ್‌ಗಳ ಬಳಕೆ ಮೇಲೆ ನಿರ್ಬಂಧ ಬೀಳಲಿದೆ.

‘ಜಿಆರ್‌ಎಪಿ-3’ ಪ್ರಕಾರ ಎನ್‌ಸಿಆರ್‌ ರಾಜ್ಯಗಳಿಂದ ಸಂಚರಿಸುವ ಎಲೆಕ್ಟ್ರಿಕ್‌, ಸಿಎನ್‌ಜಿ ಮತ್ತು ಬಿಎಸ್‌-6 ಡೀಸೆಲ್‌ ಬಸ್‌ ಹೊರತಾದ ಅಂತಾರಾಜ್ಯ ಬಸ್‌ಗಳು ದೆಹಲಿ ಪ್ರವೇಶ ಮಾಡದಂತೆ ಸ್ಥಗಿತ; ಕಟ್ಟಡ ನಿರ್ಮಾಣ ಮತ್ತು ಧ್ವಂಸ ಚಟುವಟಿಕೆಗಳಿಗೆ ಪೂರ್ತಿ ತಡೆ; ಎಲ್ಲಾ ರೀತಿಯ ಗಣಿಗಾರಿಕೆ ಚಟುವಟಿಕೆಗಳಿಗೆ ಬ್ರೇಕ್‌; 5ನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್‌ನಲ್ಲೇ ತರಗತಿ; ಪ್ರಮುಖ ರಸ್ತೆಗಳಲ್ಲಿ ನೀರು ಸಿಂಪಡಣೆ; ದೆಹಲಿ, ಗುರುಗ್ರಾಮ, ಫರೀದಾಬಾದ್‌, ಗಾಜಿಯಾಬಾದ್‌ ಮತ್ತು ಗೌತಮ ಬುದ್ಧ ನಗರ ಜಿಲ್ಲೆಗಳಲ್ಲಿ ಬಿಎಸ್‌- 3 ಪೆಟ್ರೋಲ್ ವಾಹನ ಮತ್ತು ಬಿಎಸ್‌-4 ಡೀಸೆಲ್‌ ವಾಹನಗಳ ಸಂಚಾರಕ್ಕೆ ನಿರ್ಬಂಧ ಜಾರಿಯಾಗಲಿದೆ.

ಗ್ಯಾಸ್‌ ಚೇಂಬರ್‌ಗೆ ಪ್ರವೇಶ- ಪ್ರಿಯಾಂಕಾ:

ಮತ್ತೊಂದೆಡೆ ಕೇರಳದ ವಯನಾಡ್‌ ಚುನಾವಣೆ ಮುಗಿಸಿ ದಿಲ್ಲಿಗೆ ವಾಪಸಾದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಮಾತನಾಡಿ, ‘ಸ್ವಚ್ಛ ವಾತಾವರಣ ಇದ್ದ ಕೇರಳದಿಂದ ದಿಲ್ಲಿಗೆ ಬರುತ್ತಿದ್ದಂತೆಯೇ ಗ್ಯಾಸ್‌ ಚೇಂಬರ್ ಪ್ರವೇಶಿಸಿದಂತಾಯಿತು’ ಎಂದು ಬೇಸರಿಸಿದ್ದಾರೆ. ವಯನಾಡ್‌ನಲ್ಲಿ ವಾಯುಗುಣಮಟ್ಟ ‘ಉತ್ತಮ ದರ್ಜೆ’ಯ 35 ಇತ್ತು ಎಂದಿದ್ದಾರೆ.

ವಾಯುಗುಣ ಹೀಗೆ ಅಳೆಯಿರಿ:

0 ಮತ್ತು 50 ರ ನಡುವಿನ ವಾಯುಗುಣಮಟ್ಟ (ಎಕ್ಯುಐ) ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತ್ಯಂತ ಕಳಪೆ, 401-450 ಗಂಭೀರ, ಮತ್ತು 450ಕ್ಕಿಂತ ಹೆಚ್ಚಿದ್ದರೆ ಅತಿ ಗಂಭೀರ (ಗಂಭೀರ+) ಎಂದು ಪರಿಗಣಿಸಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು