ಸಿಎಂ ಪದವಿಯಿಂದ ಕೇಜ್ರಿ ವಜಾ: ದಿಲ್ಲಿ ಹೈಕೋರ್ಟ್‌ ನಕಾರ

KannadaprabhaNewsNetwork | Updated : Mar 29 2024, 08:29 AM IST

ಸಾರಾಂಶ

ಮದ್ಯ ಲೈಸೆನ್ಸ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮುಖ್ಯಮಂತ್ರಿ ಪದವಿಯಿಂದ ವಜಾ ಮಾಡಲು ದೆಹಲಿ ಹೈಕೋರ್ಟ್‌ ನಿರಾಕರಿಸಿದೆ.

ನವದೆಹಲಿ: ಮದ್ಯ ಲೈಸೆನ್ಸ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮುಖ್ಯಮಂತ್ರಿ ಪದವಿಯಿಂದ ವಜಾ ಮಾಡಲು ದೆಹಲಿ ಹೈಕೋರ್ಟ್‌ ನಿರಾಕರಿಸಿದೆ. 

ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾ ಮನಮೋಹನ್‌ ನೇತೃತ್ವದ ಪೀಠ, ‘ಮುಖ್ಯಮಂತ್ರಿಯೊಬ್ಬರು ಬಂಧನ ಆಗಿರುವ ಸಮಯದಲ್ಲಿ ಅವರನ್ನು ವಜಾ ಮಾಡುವುದು ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ. 

ಆ ಕೆಲಸವನ್ನು ಸರ್ಕಾರದ ಇತರ ಅಂಗಗಳು ಮಾಡಬೇಕು. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಲಾಗಿದೆ’ ಎಂದು ತೀರ್ಪು ನೀಡಿದರು. 

ಅಲ್ಲದೆ ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರೆಯಲು ಕಾನೂನಿನ ತೊಡಕೆಲ್ಲಿದೆ ಎಂಬುದಾಗಿ ಅರ್ಜಿದಾರರನ್ನೇ ನ್ಯಾಯಾಲಯ ಪ್ರಶ್ನಿಸಿತು.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸಿಎಂ ಪದವಿಯಿಂದ ವಜಾ ಮಾಡಬೇಕು ಎಂದು ಸುರ್ಜಿತ್‌ ಸಿಂಗ್‌ ಯಾದವ್ ಎನ್ನುವವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ದಾಖಲಿಸಿದ್ದರು.

Share this article