ನವದೆಹಲಿ: ದೆಹಲಿ ಮೆಟ್ರೋ ರೈಲಿನ ಒಳಗೆ ಯುವತಿಯರಿಬ್ಬರು ಓಕುಳಿಯಾಡುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ದೆಹಲಿ ಮೆಟ್ರೋ ರೈಲು ನಿಗಮ ನಿಯಮಿತ (ಡಿಎಂಆರ್‌ಸಿಎಲ್) ಪ್ರತಿಕ್ರಿಯಿಸಿದ್ದು, ಇದು ಡೀಪ್ ಫೇಕ್ ವಿಡಿಯೋ ಇದ್ದಂತಿದೆ.
ಹೀಗಾಗಿ ವಿಡಿಯೋ ಅಸಲಿಯತ್ತನ್ನು ಪರಿಶೀಲನೆ ಮಾಡುತ್ತಿರುವುದಾಗಿ ತಿಳಿಸಿದೆ. ಅಲ್ಲದೆ, ಮತ್ತೆ ಇಂಥ ಪ್ರಸಂಗಗಳು ಮೆಟ್ರೋದಲ್ಲಿ ನಡೆದರೆ ಕೂಡಲೇ ತನ್ನ ಗಮನಕ್ಕೆ ತರಲು ಪ್ರಯಾಣಿಕರಿಗೆ ಕೋರಿದೆ.
‘ಇತ್ತೀಚಿನ ದಿನಗಳಲ್ಲಿ ಡೀಪ್‌ಫೇಕ್ ಹಾವಳಿ ಹೆಚ್ಚಿದ್ದು, ಮೆಟ್ರೋ ರೈಲಿನ ಒಳಗೆ ಓಕುಳಿ ಆಡುತ್ತಿರುವಂತೆ ಕೃತಕವಾಗಿ ದೃಶ್ಯಾವಳಿ ಸೃಷ್ಟಿಸಿರುವ ಸಾಧ್ಯತೆಯಿದೆ.
ಈ ಕುರಿತು ತನಿಖೆಯನ್ನು ಆರಂಭಿಸಿದ್ದು, ಸಾರ್ವಜನಿಕರಿಗೆ ಇಂತಹ ರೀಲ್ಸ್‌ಗಳನ್ನು ಮಾಡಬೇಡಿ ಎಂದು ಮನವಿ ಮಾಡುತ್ತೇವೆ ಮತ್ತು ಮಾಡುತ್ತಿರುವುದು ಕಂಡುಬಂದಲ್ಲಿ ನಮಗೆ ತಿಳಿಸಬೇಕು’ ಎಂದು ಡಿಎಂಆರ್‌ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.