ತಿರುಚಲಾದ ಅಮಿತ್‌ ಶಾ ವಿಡಿಯೋ ಕೇಸ್‌: ತೆಲಂಗಾಣ ಸಿಎಂಗೆ ಸಂಕಷ್ಟ

KannadaprabhaNewsNetwork |  
Published : Apr 30, 2024, 02:10 AM ISTUpdated : Apr 30, 2024, 04:59 AM IST
ರೇವಂತ್‌ ರೆಡ್ಡಿ | Kannada Prabha

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ತಿರುಚಲಾದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡ ಪ್ರಕರಣ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರಿಗೆ ಸಂಕಷ್ಟ ಎದುರಾಗಿದೆ. ಮೇ 1ರ ಬುಧವಾರ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ರೇವಂತ ರೆಡ್ಡಿ ಅವರಿಗೆ ಸೂಚನೆ ನೀಡಿದ್ದಾರೆ.

  ನವದೆಹಲಿ :  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ತಿರುಚಲಾದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡ ಪ್ರಕರಣ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರಿಗೆ ಸಂಕಷ್ಟ ಎದುರಾಗಿದೆ. ಮೇ 1ರ ಬುಧವಾರ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ರೇವಂತ ರೆಡ್ಡಿ ಅವರಿಗೆ ಸೂಚನೆ ನೀಡಿದ್ದಾರೆ.

ಅಮಿತ್‌ ಶಾ ಅವರ ತಿರುಚಲಾದ ವಿಡಿಯೋವನ್ನು ಶೇರ್‌ ಮಾಡಲು ಬಳಸಲಾದ ಮೊಬೈಲ್‌ ಫೋನ್‌ ಅನ್ನು ಕೂಡ ವಿಚಾರಣೆಗೆ ತರುವಂತೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರೇವಂತ ರೆಡ್ಡಿ ಮಾತ್ರವಲ್ಲದೆ ಇನ್ನೂ ನಾಲ್ವರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಆ ಎಲ್ಲರೂ ತಿರುಚಲಾದ ವಿಡಿಯೋವನ್ನು ಶೇರ್ ಮಾಡಿದವರೇ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?:

ತೆಲಂಗಾಣದಲ್ಲಿ ಧರ್ಮಾಧಾರಿತವಾಗಿ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿಯನ್ನು ರದ್ದುಗೊಳಿಸಲಾಗುವುದು ಎಂದು ಅಮಿತ್‌ ಶಾ ಅವರು ಸಮಾವೇಶವೊಂದರಲ್ಲಿ ಹೇಳಿದ್ದರು. ಆದರೆ ಅದನ್ನು ತಿರುಚಿ, ಎಲ್ಲ ಮೀಸಲಾತಿಯನ್ನೂ ರದ್ದುಗೊಳಿಸಲಾಗುವುದು ಎಂಬರ್ಥ ಬರುವ ರೀತಿಯಲ್ಲಿ ವಿಡಿಯೋ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪಸರಿಸಲಾಗಿತ್ತು. ರೇವಂತ ರೆಡ್ಡಿ ಸೇರಿದಂತೆ ಹಲವರು ಅದನ್ನು ಹಂಚಿಕೊಂಡಿದ್ದರು.

ಈ ತಿರುಚಿದ ವಿಡಿಯೋ ಸಂಬಂಧ ಕೇಂದ್ರ ಗೃಹ ಸಚಿವಾಲಯದ ಅಧೀನದಡಿ ಬರುವ ಭಾರತೀಯ ಸೈಬರ್‌ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ದೂರು ನೀಡಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್‌ ಇಲಾಖೆ ವಿಶೇಷ ಘಟಕ ಎಫ್‌ಐಆರ್‌ ದಾಖಲು ಮಾಡಿಕೊಂಡಿತ್ತು. ಈ ಪ್ರಕರಣ ಸಂಬಂಧ ದೇಶಾದ್ಯಂತ ಕೆಲವು ವ್ಯಕ್ತಿಗಳನ್ನು ಬಂಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ತಿರುಚಲಾದ ವಿಡಿಯೋದ ಮೂಲ ಎಲ್ಲಿಂದ ಬಂತು ಎಂಬುದರ ಕುರಿತೂ ಮಾಹಿತಿ ನೀಡುವಂತೆ ಟ್ವೀಟರ್‌ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಿಗೂ ನೋಟಿಸ್‌ ಜಾರಿ ಮಾಡಲಾಗಿದೆ.

ತಿರುಚಿದ ವಿಡಿಯೋ: ಕಾಂಗ್ರೆಸ್‌ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ತಿರುಚಲಾದ ವಿಡಿಯೋವೊಂದನ್ನು ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡ ಪ್ರಕರಣ ಸಂಬಂಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ರಾಷ್ಟ್ರೀಯ ಮಾಧ್ಯಮ ವಿಭಾಗದ ಉಸ್ತುವಾರಿ ಅನಿಲ್ ಬಲೂನಿಯನ್ನು ಒಳಗೊಂಡ ಬಿಜೆಪಿ ನಿಯೋಗ ಈ ಕುರಿತು ದೂರು ನೀಡಿದೆ.ಇದರ ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಹಿಂಸಾಚಾರವನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಆರೋಪಿಸಿ ಬಿಜೆಪಿ ನಿಯೋಗವೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ದೂರು ನೀಡಿದೆ.

ಫೇಕ್‌ ವೀಡಿಯೋ ಹಂಚಿಕೆ: ಅಸ್ಸಾಂ ಕಾಂಗ್ರೆಸ್‌ ಪದಾಧಿಕಾರಿ ಬಂಧನ

ಗುವಾಹಟಿ: ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ನಕಲಿ ವೀಡಿಯೋ ಹಂಚಿಕೊಂಡ ಅಸ್ಸಾಂ ಕಾಂಗ್ರೆಸ್‌ ಪದಾಧಿಕಾರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಸೋಮವಾರ ತಿಳಿಸಿದರು.ಕಾಂಗ್ರೆಸ್‌ ಪಕ್ಷದ ವಾರ್‌ರೂಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೀತೋಮ್‌ ಸಿಂಗ್‌ ಬಂಧಿತ ವ್ಯಕ್ತಿ ಎಂಬುದು ತಿಳಿದುಬಂದಿದೆ. ಬಂಧಿತ ಆರೋಪಿ ರೀತೋಮ್ ಸಿಂಗ್‌ ಅವರಿಂದ ಎರಡು ಮೊಬೈಲ್‌ ಪೋನ್‌ಗಳನ್ನು ಹಾಗೂ ಒಂದು ಲ್ಯಾಪ್‌ಟಾಪ್‌ನ್ನು ಪೊಲೀಸರು ವಶಕ್ಕೆ ಪಡೆಸಿಕೊಂಡಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ