ದಿಲ್ಲಿ 400 ಶಾಲೆ ಹುಸಿ ಬಾಂಬ್‌ ಕರೆಗೆ ಉಗ್ರ ಅಫ್ಜಲ್‌ ನಂಟು?

KannadaprabhaNewsNetwork |  
Published : Jan 15, 2025, 01:47 AM IST
ಅಫ್ಜಲ್‌ | Kannada Prabha

ಸಾರಾಂಶ

ನವದೆಹಲಿಯ 400ಕ್ಕೂ ಹೆಚ್ಚು ಶಾಲೆಗಳಿಗೆ ಕಳೆದ ಕೆಲ ತಿಂಗಳಿನಿಂದ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದ ಪ್ರಕರಣ ಬಾಲಕನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಾಥಮಿಕ ವಿಚಾರಣೆ ವೇಳೆ, ಆತನಗ್ರ ಅಫ್ಜಲ್‌ ಗುರುವನ್ನು ಬೆಂಬಲಿಸಿದ್ದ ಸರ್ಕಾರೇತರ ಸಂಸ್ಥೆಯೊಂದರ ಜೊತೆ ನಂಟು ಹೊಂದಿರುವ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ಪಿಟಿಐ ನವದೆಹಲಿ

ರಾಜಧಾನಿ ನವದೆಹಲಿಯ 400ಕ್ಕೂ ಹೆಚ್ಚು ಶಾಲೆಗಳಿಗೆ ಕಳೆದ ಕೆಲ ತಿಂಗಳಿನಿಂದ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಪಿಯುಸಿ ಓದುತ್ತಿರುವ ಬಾಲಕನನ್ನು ಇತ್ತೀಚಗೆ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಬಾಲಕನ ಪ್ರಾಥಮಿಕ ವಿಚಾರಣೆ ವೇಳೆ, ಆತನ ಪೋಷಕರು ಸಂಸತ್‌ ಮೇಲಿನ ದಾಳಿಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಉಗ್ರ ಅಫ್ಜಲ್‌ ಗುರುವನ್ನು ಬೆಂಬಲಿಸಿದ್ದ ಸರ್ಕಾರೇತರ ಸಂಸ್ಥೆಯೊಂದರ ಜೊತೆ ನಂಟು ಹೊಂದಿರುವ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ಜೊತೆಗೆ ಬಾಲಕನ ಕುಟುಂಬದ ನಂಟಿರುವ ಎನ್‌ಜಿಒ, ಪ್ರಮುಖ ರಾಜಕೀಯ ಪಕ್ಷವೊಂದನ್ನು ಬೆಂಬಲಿಸುತ್ತಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ಸ್ಫೋಟಕ ಮಾಹಿತಿ ನೀಡಿದ್ದಾರೆ. ಆದರೆ ಬಂಧಿತ ಬಾಲಕ, ಎನ್‌ಜಿಒ ಮತ್ತು ರಾಜಕೀಯ ಪಕ್ಷದ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಈ ನಡುವೆ ದಿಲ್ಲಿ ಪೊಲೀಸರ ಮಾಹಿತಿ ಬೆನ್ನಲ್ಲೇ ಪತ್ರಿಕಾಗೋ಼ಷ್ಠಿ ನಡೆಸಿದ ಬಿಜೆಪಿ ನಾಯಕರು, ದೆಹಲಿ ಸಿಎಂ ಆತಿಶಿಯ ಪೋಷಕರು ಈ ಹಿಂದೆ ಸೇವ್‌ ಅಫ್ಜಲ್‌ ಗುರು ಎಂಬ ಹೋರಾಟ ನಡೆಸಿದ್ದರು. ಹೀಗಾಗಿ ಅವರು ಮತ್ತು ಆಪ್‌, ವಿವಾದಿತ ಎನ್‌ಜಿಒ ಜೊತೆ ನಂಟು ಹೊಂದಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಹೇಳಿದೆ. ಇದಕ್ಕೆ ತಿರುಗೇಟು ನೀಡಿರುವ ಆಪ್‌, ಬಿಜೆಪಿ ವಿನಾಕಾರಣ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದೆ ಎಂದು ಕಿಡಿಕಾರಿದೆ.

400 ಶಾಲೆಗೆ ಬೆದರಿಕೆ:

ಕಳೆದ ಜ.8ರಂದು ದೆಹಲಿ ಕೆಲ ಶಾಲೆಗಳಿಗೆ ಇ ಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ ರವಾನಿಸಲಾಗಿತ್ತು. ಈ ಕುರಿತು ತನಿಖೆ ನಡೆಸಿದಾಗ ಪಿಯುಸಿ ಬಾಲಕನ ಸುಳಿವು ಸಿಕ್ಕಿದೆ. ಆತನ ಮನೆಗೆ ತೆರಳಿ ಪರಿಶೀಲಿಸಿದಾಗ ಕಳೆದ ಕೆಲ ತಿಂಗಳಿನಿಂದ ಆತ ತನ್ನ ಲ್ಯಾಪ್‌ಟಾಪ್‌ ಮೂಲಕ 400ಕ್ಕೂ ಹೆಚ್ಚು ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದು ಕಂಡುಬಂದಿದೆ. ಜೊತೆಗೆ ಆತ ವರ್ಚ್ಯುವಲ್‌ ಪ್ರೈವೇಟ್‌ ನೆಟ್‌ವರ್ಕ್‌ (ವಿಪಿಎನ್‌) ಬಳಸಿ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದು ಪತ್ತೆಯಾಗಿದೆ. ಹೀಗಾಗಿ ಪ್ರಕರಣವನ್ನು ಬೇಧಿಸುವುದು ಇದುವರೆಗೂ ಸಾಧ್ಯವಾಗಿರಲಿಲ್ಲ. ವಿಚಾರಣೆ ವೇಳೆ ಜನರಲ್ಲಿ ಆತಂಕ ಸೃಷ್ಟಿಸಲು ಆರೋಪಿ ಹುಸಿ ಬಾಂಬ್‌ ಕರೆ ಮಾಡುತ್ತಿದ್ದ ಎಂದು ಕಂಡುಬಂದಿದೆ.

ಅಫ್ಜಲ್‌ ಗುರು ನಂಟು:

ಬಾಲಕನ ಪೋಷಕರ ಹಿನ್ನೆಲೆ ಪರಿಶೀಲನೆ ವೇಳೆ ಸಂಸತ್‌ ಮೇಲಿನ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಉಗ್ರ ಅಫ್ಜಲ್‌ ಗುರು ರಕ್ಷಣೆಗೆ ಹೋರಾಟ ನಡೆಸಿದ್ದ ಸರ್ಕಾರೇತರ ಸಂಘಟನೆಯೊಂದರ ಜೊತೆ ಅವರು ನಂಟು ಹೊಂದಿದ್ದು ಕಂಡುಬಂದಿದೆ. ಜೊತೆಗೆ ಈ ಎನ್‌ಜಿಒ ಪ್ರಮುಖ ರಾಜಕೀಯ ಪಕ್ಷವೊಂದನ್ನು ಬಹಿರಂಗವಾಗಿ ಬೆಂಬಲಿಸಿದ್ದು ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹೀಗಾಗಿ ದೆಹಲಿ ಶಾಲೆಗೆ ಬೆದರಿಕೆ ಪ್ರಕರಣವನ್ನು ನಾನಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ