ಕನ್ನಡಪ್ರಭ ವಾರ್ತೆ, ಬೆಂಗಳೂರು
ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬದಲಾವಣೆ ಸಂದರ್ಭದಲ್ಲಿ ತಮ್ಮನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಿಗಣಿಸಬೇಕು ಎಂದು ಪ್ರಬಲ ಹಕ್ಕೊತ್ತಾಯವನ್ನು ಸತೀಶ್ ಜಾರಕಿಹೊಳಿ ಅವರು ಹೈಕಮಾಂಡ್ ಮುಂದೆ ಮಂಡಿಸಿದ್ದಾರೆ. ಅಲ್ಲದೆ, ಪಕ್ಷದ 50ಕ್ಕೂ ಹೆಚ್ಚು ಶಾಸಕರು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ತಮ್ಮ ಮೇಲೆ ಒತ್ತಡ ನಿರ್ಮಾಣ ಮಾಡುತ್ತಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬದಲಾವಣೆ ವೇಳೆ ತಮಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವಂತೆ ಹೈಕಮಾಂಡ್ ಅನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ತಡರಾತ್ರಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ ಸತೀಶ್ ಜಾರಕಿಹೊಳಿ ಅವರು ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತಮ್ಮನ್ನು ಪರಿಗಣಿಸುವಂತೆ ಹೇಳಿದರು ಎಂದು ತಿಳಿದು ಬಂದಿದೆ.ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹೊಸಬರನ್ನು ತರುವ ನಿರ್ಧಾರವನ್ನು ಹೈಕಮಾಂಡ್ ಮಾಡುವ ಸಂದರ್ಭದಲ್ಲಿ ಈ ಹುದ್ದೆಗೆ ತಮ್ಮನ್ನು ಏಕೆ ಪರಿಗಣಿಸಬೇಕು ಎಂದು ವಿಸ್ತೃತವಾಗಿ ಸುರ್ಜೇವಾಲಾ ಅವರಿಗೆ ಸತೀಶ್ ವಿವರಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಇದಾದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದರು. ಈ ವೇಳೆಗೆ ತಡರಾತ್ರಿಯಾಗಿತ್ತು. ಇದಾದ ನಂತರ ಸತೀಶ್ ಜಾರಕಿಹೊಳಿ ಅವರು ಪ್ರತ್ಯೇಕವಾಗಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಈ ವೇಳೆ ಕೆಪಿಸಿಸಿ ಹುದ್ದೆಗೆ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಕಾಂಗ್ರೆಸ್‌ನ ವಿವಿಧ ಬಣಗಳು ಮುಖ್ಯಮಂತ್ರಿ ಹುದ್ದೆ ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದಂತೆ ಮೇಲಾಟ ನಡೆಸುತ್ತಿದ್ದರೂ ದೆಹಲಿ ಚುನಾವಣೆಯ ಬ್ಯುಸಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಬಜೆಟ್ ಮುಗಿಯುವವರೆಗೂ ಇಂತಹ ಯಾವುದೇ ಬೆಳವಣಿಗೆ ಬಗ್ಗೆ ಚಿಂತಿಸುವ ಮನಸ್ಥಿತಿ ಹೊಂದಿಲ್ಲ ಎನ್ನಲಾಗಿದೆ.
ರಾಜ್ಯದಲ್ಲಿ ನಾಯಕ ಸಮುದಾಯದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ತಾವು ವಹಿಸಿದ ಪಾತ್ರ, ಪಕ್ಷ ಸಂಘಟನೆಯಲ್ಲಿ ತಮ್ಮ ಕೊಡುಗೆ ಹಾಗೂ ತಮಗಿರುವ ಶಾಸಕರ ಬೆಂಬಲದ ವಿವರವನ್ನು ಇದೇ ವೇಳೆ ಸುರ್ಜೇವಾಲಾ ಅವರಿಗೆ ನೀಡಿರುವ ಸತೀಶ್ ಜಾರಕಿಹೊಳಿ ಅವರು ಪಕ್ಷದ ಅಧ್ಯಕ್ಷ ಹುದ್ದೆಯನ್ನು ನೀಡಿದರೆ ಪಕ್ಷ ಸಂಘಟನೆಯನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಹೋಗುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.