ಜಿರಳೆಗೆ ಕೊನೆಗೂ ಪ್ರಧಾನ್‌ ಬಲಿ

KannadaprabhaNewsNetwork |  
Published : Jul 26, 2026, 01:15 AM ISTUpdated : Jul 26, 2026, 04:36 AM IST
Pradhan

ಸಾರಾಂಶ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಜಿರಳೆ ಪಕ್ಷದ ಯುವಕರು ಹಾಗೂ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ನಡೆಸಿದ ಹೋರಾಟಕ್ಕೆ ಶನಿವಾರ ಹಿಂದೆಂದೂ ಕಂಡು ಕೇಳರಿಯದ ಜಯ ಲಭಿಸಿದೆ.

ನವದೆಹಲಿ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಜಿರಳೆ ಪಕ್ಷದ ಯುವಕರು ಹಾಗೂ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ನಡೆಸಿದ ಹೋರಾಟಕ್ಕೆ ಶನಿವಾರ ಹಿಂದೆಂದೂ ಕಂಡು ಕೇಳರಿಯದ ಜಯ ಲಭಿಸಿದೆ. 36 ದಿನದ ಹೋರಾಟಕ್ಕೆ ಮಣಿದು ಕೊನೆಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಜನಾಕ್ರೋಶಕ್ಕೆ ಮಣಿದು ರಾಜೀನಾಮೆ ಸಲ್ಲಿಸಿದ ಮೋದಿ ಸರ್ಕಾರದ ಮೊದಲ ಮಂತ್ರಿ ಎಂಬ ಅಪಖ್ಯಾತಿಗೆ ಪಾತ್ರರಾಗಿದ್ದಾರೆ.

ಇದಲ್ಲದೆ, ನೀಟ್‌ ಅಕ್ರಮದಿಂದ ನೊಂದು ಸಾವಿಗೀಡಾದ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡಲು ಹೋರಾಟಕ್ಕಿಳಿದವರ ಮೇಲಿನ ಕೇಸ್‌ ವಾಪಸ್‌ ಪಡೆಯಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಹೀಗಾಗಿ ಹೋರಾಟಕ್ಕೆ ಅಂತ್ಯ ಹಾಡಲು ಜಿರಳೆ ಪಕ್ಷ ನಿರ್ಧರಿಸಿದೆ. ಇನ್ನು ಉಳಿದ ಶೈಕ್ಷಣಿಕ ಸುಧಾರಣೆಗಳ ಕುರಿತು ಚರ್ಚಿಸಲು 4 ವಾರಗಳ ಬಳಿಕ ಮತ್ತೊಮ್ಮೆ ಸಭೆ ನಡೆಯಲಿದೆ.

ಅದರ ಬೆನ್ನಲ್ಲೇ ನಾಗರಿಕ ವ್ಯವಹಾರ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಪ್ರಧಾನ್‌ ರಾಜೀನಾಮೆಯನ್ನು, ಹೋರಾಟದ ನೇತೃತ್ವ ವಹಿಸಿದ್ದ ಅಭಿಜಿತ್‌ ದೀಪ್ಕೆ, ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ ಹಾಗೂ ವಿಪಕ್ಷಗಳ ನಾಯಕರು ಸ್ವಾಗತಿಸಿದ್ದರೆ, ಆಡಳಿತಾರೂಢ ಬಿಜೆಪಿ ನಾಯಕರು ಶಿಕ್ಷಣ ಸಚಿವರಾಗಿ ಧರ್ಮೇಂದ್ರ ಪ್ರಧಾನ್‌ ಅವರು ಜಾರಿಗೊಳಿಸಿದ ಯೋಜನೆಗಳನ್ನು ಸ್ಮರಿಸಿ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಆದಾಗ್ಯೂ 12 ವರ್ಷದಲ್ಲಿ ಮೊದಲ ಬಾರಿ ಮೋದಿ ಸರ್ಕಾರವನ್ನು ನಡುಗಿಸಿದ ಜೆನ್‌ಝೀ ಹೋರಾಟಕ್ಕೆ ಜಯ ಸಿಕ್ಕಿದ್ದು ಹಾಗೂ ಸಿಎಎ, ರೈತ ಚಳವಳಿಗಳ ಮಣಿಸಿದ್ದ ಕೇಂದ್ರಕ್ಕೆ ಹಿನ್ನಡೆ ಆಗಿದ್ದು ದೇಶವ್ಯಾಪಿ ಚರ್ಚೆಗೆ ನಾಂದಿ ಹಾಡಿದೆ.

ಪ್ರಧಾನ್ ರಾಜೀನಾಮೆ: ನೀಟ್‌ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಸಿಜೆಪಿ ಬಿಗಿಪಟ್ಟು ಹಿಡಿದಿತ್ತು. ಆದರೆ ಆರಂಭದಲ್ಲಿ ಈ ಬಗ್ಗೆ ಮೌನ ವಹಿಸಿದ್ದ ಕೇಂದ್ರ ಸರ್ಕಾರ, ಪ್ರತಿಭಟನೆ ತೀವ್ರವಾದ ಬೆನ್ನಲ್ಲೇ ಪರೀಕ್ಷಾ ಅಕ್ರಮ ತಡೆಗೆ ಹಲವು ಕಠಿಣ ಕ್ರಮದ ಭರವಸೆ ನೀಡಿತ್ತು. ಆದರೂ ವಿದ್ಯಾರ್ಥಿಗಳು ಪ್ರಧಾನ್‌ ರಾಜೀನಾಮೆ ಪಟ್ಟಿನಿಂದ ಹಿಂದೆ ಸರಿದಿರಲಿಲ್ಲ. ಹೀಗಾಗಿ ಅಂತಿಮವಾಗಿ ವಿದ್ಯಾರ್ಥಿಗಳ ಪಟ್ಟಿಗೆ ಮಣಿದ ಪ್ರಧಾನ್‌ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

‘ಜವಾಬ್ದಾರಿಯುತ ಸ್ಥಾನದಲ್ಲಿರುವವರು ವಿದ್ಯಾರ್ಥಿಗಳ ದಾರಿತಪ್ಪಿಲೆತ್ನಿಸಿದರು. ದೇಶವಿರೋಧಿಗಳು ವಿದ್ಯಾರ್ಥಿ ಪ್ರತಿಭಟನೆ ದುರ್ಬಳಕೆ ತಡೆಯಲು ರಾಜೀನಾಮೆ ನೀಡಿದ್ದೇನೆ’ ಎಂದು ಪ್ರಧಾನ್‌ ಘೋಷಿಸಿದ್ದಾರೆ.

ಸಂಧಾನ ಸಭೆ:

ಈ ಬೆನ್ನಲ್ಲೇ, ಸರ್ಕಾರ ಮತ್ತು ಸಿಜೆಪಿ ನಡುವೆ 3ನೇ ಸುತ್ತಿನ ಸಭೆ ನಡೆದಿದ್ದು, ಅದರಲ್ಲಿ ಉಳಿದ 2 ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ಸಿಜೆಪಿ ಪ್ರತಿಭಟನೆ ಹಿಂಪಡೆದಿದೆ. ಶೈಕ್ಷಣಿಕ ಸುಧಾರಣೆಗಳ ಕುರಿತು ಚರ್ಚಿಸಲು 4 ವಾರಗಳ ಬಳಿಕ ಮತ್ತೊಮ್ಮೆ ಸಭೆ ನಡೆಯಲಿದೆ. ಸಂಭ್ರಮಾಚರಣೆ:ಪ್ರಧಾನ್ ರಾಜೀನಾಮೆ ನೀಡಿದ ನಂತರ ಜಂತರ್ ಮಂತರ್‌ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಪ್ರತಿಭಟನಾ ಸ್ಥಳದಾದ್ಯಂತ ‘ಹಮ್ ಜೀತ್ ಗಯೇ’ (ನಾವು ಗೆದ್ದಿದ್ದೇವೆ) ಎಂಬ ಘೋಷಣೆಗಳು ಮೊಳಗಿದವು. 

- 36 ದಿನಗಳ ಜಿರಳೆ ಪಾರ್ಟಿ ಹೋರಾಟ ಯಶಸ್ವಿ

- ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ- ಪ್ರಧಾನ್‌ರ ಸ್ಥಾನಕ್ಕೆ ಕನ್ನಡಿಗ ಪ್ರಲ್ಹಾದ್‌ ಜೋಶಿ

- 4 ವಾರಗಳ ಬಳಿಕ ಸರ್ಕಾರದ ಜತೆ ಮತ್ತೆ ಸಭೆ

- ಪ್ರಧಾನ್‌ ರಾಜೀನಾಮೆಗೆ ವಿದ್ಯಾರ್ಥಿಗಳ ಸಂಭ್ರಮ

- ಪ್ರಧಾನ್ ಕಾಣಿಕೆ ಸ್ಮರಿಸಿದ ಬಿಜೆಪಿ ನಾಯಕರು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದೇಶದಲ್ಲೀಗ ರಾಷ್ಟ್ರೀಯತೆ ಹೆಸರಲ್ಲಿ ಬಹುಸಂಖ್ಯಾತರ ರಾಜಕೀಯ: ಅನ್ಸಾರಿ ಕಿಡಿ
ಚು.ಆಯುಕ್ತ, ಜೈಶಂಕರ್‌,ಸೂದ್‌ಗೆ SIR ನೋಟಿಸ್‌- ದಾಖಲೇಲಿ ಗೊಂದಲ ಕಾರಣ ನೋಟಿಸ್‌