ಜನ ಹೇಳಿದರೆ ಚನ್ನಪಟ್ಟಣದಲ್ಲಿ ಸ್ಪರ್ಧಿಸದೇ ದಾರಿಯಿಲ್ಲ: ಡಿಕೆಶಿ

KannadaprabhaNewsNetwork |  
Published : Jun 20, 2024, 01:01 AM ISTUpdated : Jun 20, 2024, 04:40 AM IST
DK Shivakumar

ಸಾರಾಂಶ

ನಾನು ಚನ್ನಪಟ್ಟಣದ ಋಣ ತೀರಿಸಬೇಕಿದೆ ಎಂದು ಡಿಸಿಎಂ ಹೇಳಿಕೆ ನೀಡಿದ್ದು, ಇದೇ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸುವ ಸುಳಿವು ಪರೋಕ್ಷವಾಗಿ ನೀಡಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣದ ಕೆಂಗಲ್‌ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಡಿ.ಕೆ.ಶಿವಕುಮಾರ್‌ ಮಾತನಾಡಿ ಋಣ ತೀರಿಸುವ ಹೇಳಿಕೆ ನೀಡಿದರು.

 ಬೆಂಗಳೂರು :  ಚನ್ನಪಟ್ಟಣ ಕ್ಷೇತ್ರದ ಮತದಾರರು ಒಲವು ತೋರಿದರೆ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಬಿಟ್ಟು ಬೇರೆ ವಿಧಿಯಿಲ್ಲ ಎಂಜು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸ್ಪರ್ಧೆ ಕುರಿತು ನಿರ್ಧಾರ ಮಾಡಲು ಕ್ಷೇತ್ರದ ರಾಜಕೀಯ ಸ್ಥಿತಿಗತಿ ಅರಿಯಲು ಬುಧವಾರ ಬುಧವಾರ ಟೆಂಪಲ್‌ ರನ್‌ ನಡೆಸಿದ ಶಿವಕುಮಾರ್‌ ಅವರು ಚನ್ನಪಟ್ಟಣಕ್ಕೆ ತೆರಳುವ ಮುನ್ನ ಈ ಹೇಳಿಕೆ ನೀಡಿದರು. ತನ್ಮೂಲಕ ಚನ್ನಪಟ್ಟಣ ಉಪಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಚಿಂತನೆ ಹೊಂದಿರುವುದು ಸತ್ಯ ಎಂದು ಪರೋಕ್ಷವಾಗಿ ತಿಳಿಸಿದರು.

ಚನ್ನಪಟ್ಟಣದ ಜನ ನನ್ನ ಮೇಲೆ ಒಲವು ತೋರಿದರೆ, ಪಕ್ಷ ತೀರ್ಮಾನಿಸಿದರೆ ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ. ಚನ್ನಪಟ್ಟಣ ನನ್ನ ಹೃದಯದಲ್ಲಿದೆ. ಈ ಹಿಂದೆ ಚನ್ನಪಟ್ಟಣ ಸಾತನೂರು ವಿಧಾನಸಭಾ ಕ್ಷೇತ್ರದ ಭಾಗವಾಗಿತ್ತು. ನನಗೆ ರಾಜಕೀಯ ನೆಲೆ ನೀಡಿದಂತಹ ಕ್ಷೇತ್ರ ಅದು. ಅಲ್ಲದೆ, ಲೋಕಸಭಾ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಮತ ನೀಡಿ ಕ್ಷೇತ್ರದ ಮತದಾರರು ಬೆಂಬಲ ನೀಡಿದ್ದಾರೆ. ಈಗ ನಾನು ಅವರ ಋಣ ತೀರಿಸಬೇಕಿದೆ ಎಂದರು.

ಕನಕಪುರವನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದೇನೋ, ಚನ್ನಪಟ್ಟಣವನ್ನು ಅದಕ್ಕಿಂತ ಹೆಚ್ಚಿನ ಅಭಿವೃದ್ಧಿ ಮಾಡಲು ಅವಕಾಶವಿದೆ. ನನಗೆ ಚನ್ನಪಟ್ಟಣದ ಮೇಲೆ ವಿಶೇಷ ಕಾಳಜಿಯಿದೆ. ಚನ್ನಪಟ್ಟಣ ಅಭಿವೃದ್ಧಿ ಹಾಗೂ ಕ್ಷೇತ್ರದ ಬದಲಾವಣೆಗೆ ನಾನು ಬದ್ಧನಾಗಿದ್ದೇನೆ. ಹೀಗಾಗಿಯೇ ಕ್ಷೇತ್ರ ವ್ಯಾಪ್ತಿಯ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದೇನೆ. ಕ್ಷೇತ್ರದ ಮತದಾರರು ಹಾಗೂ ನಾಯಕರ ಜತೆ ಚರ್ಚಿಸಿ, ಅವರು ಏನು ಹೇಳುತ್ತಾರೋ ಅದರಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

ಸಹೋದರ ಡಿ.ಕೆ. ಸುರೇಶ್‌ ಸ್ಪರ್ಧೆ ಕುರಿತ ಪ್ರಶ್ನೆಗೆ ಉತ್ತರಿಸಿ, ಆ ವಿಚಾರವಾಗಿ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಉಪ ಚುನಾವಣೆಯಲ್ಲಿ ನನಗೆ ಮತ ನೀಡಿ ಎಂದು ಮತದಾರರಿಗೆ ಮನವಿ ಮಾಡುತ್ತೇನೆ. ಪಕ್ಷ ಮತ್ತು ಮತದಾರರು ಏನು ಹೇಳುತ್ತಾರೋ ಅದನ್ನು ಕೇಳುತ್ತೇನೆ ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ