ಸಂಶೋಧನಾ ವರದಿ: ನಾಯಿ ನೆಕ್ಕುವುದು ಮಾರಣಾಂತಿಕ!

KannadaprabhaNewsNetwork | Updated : Mar 10 2024, 10:06 AM IST

ಸಾರಾಂಶ

ನಾಯಿಯಿಂದ ತಮ್ಮ ತುಟಿ, ಕೆನ್ನೆ ಮೊದಲಾದ ಭಾಗಗಳಿಗೆ ನೆಕ್ಕಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ನೆಕ್ಕುವಿಕೆ ಮಾರಣಾಂತಿಕವಾಗುವ ಸಂಭವ ಇದೆ ಎಂಬುದಾಗಿ ಸಂಶೋಧನಾ ವರದಿಯೊಂದು ಉಲ್ಲೇಖಿಸಿದೆ.

ನವದೆಹಲಿ: ನಾಯಿ ಮಾಲೀಕರು ತಮ್ಮ ಮುದ್ದುನಾಯಿಯ ಜೊತೆ ತಮ್ಮ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಲು ನಾಯಿಯಿಂದ ತಮ್ಮ ತುಟಿ, ಕೆನ್ನೆ ಮೊದಲಾದ ಭಾಗಗಳಿಗೆ ನೆಕ್ಕಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ನೆಕ್ಕುವಿಕೆ ಮಾರಣಾಂತಿಕವಾಗುವ ಸಂಭವ ಇದೆ ಎಂಬುದಾಗಿ ಸಂಶೋಧನಾ ವರದಿಯೊಂದು ಉಲ್ಲೇಖಿಸಿದೆ.

ನಾಟಿಂಗ್‌ಹ್ಯಾಮ್‌ ಟ್ರೆಂಟ್‌ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಉಪನ್ಯಾಸಕಿಯಾಗಿರುವ ಜಾಕ್ವೆಲಿನ್‌ ನಡೆಸಿರುವ ಸಂಶೋಧನೆಯಲ್ಲಿ ನಾಯಿ ನೆಕ್ಕುವಿಕೆಯಿಂದ ಮನುಷ್ಯರಲ್ಲಿ ಮಾರಣಾಂತಿಕ ಕಾಯಿಲೆಗಳು ಹೆಚ್ಚುವ ಸಂಭವವಿದೆ ಎಂದು ತಿಳಿಸಿದ್ದಾರೆ.

ಪ್ರಮುಖವಾಗಿ ತುಟಿಯ ಬಳಿ ನೆಕ್ಕುವುದರಿಂದ ಒಂಭತ್ತು ತಿಂಗಳಿಗಿಂತ ಹೆಚ್ಚು ಕಾಲ ಬಾಯಿಯಲ್ಲಿ ಬ್ಯಾಕ್ಟೀರಿಯಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದು ಮನುಜರನ್ನು ಮೃತ್ಯು ಕೂಪಕ್ಕೆ ತಳ್ಳುವ ಸಾಮರ್ಥ್ಯವುಳ್ಳದ್ದಾಗಿದೆ. 

ಅಲ್ಲದೆ ನಾಯಿಯ ಜೊಲ್ಲಿನಲ್ಲಿರುವ ಬ್ಯಾಕ್ಟೀರಿಯಾದಿಂದಾಗಿ ಮೆದುಳಿನಲ್ಲಿ ಪೊರೆಯುರಿತ ಕಾಣಿಸಿಕೊಳ್ಳುತ್ತದೆ. ಚಿಕ್ಕ ಮಕ್ಕಳು, ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ನಾಯಿ ನೆಕ್ಕಿದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಕೆಲವೊಮ್ಮೆ ಕಡಿಮೆ ಇರುವ ಕಾರಣ ಪ್ರಾಣಿಗಳಿಂದ ಮಾನವರಿಗೆ ವರ್ಗಾವಣೆಯಾಗುವ ಝೂನೋಟಿಕ್‌ ಸೋಂಕು ತಗುಲಿ ಸಾವನ್ನಪ್ಪುವ ಸಂಭವನೀಯತೆ ಹೆಚ್ಚು ಎಂದು ವರದಿಯಲ್ಲಿ ತಿಳಿಸಿದೆ.

ಇದರ ನಡುವೆ ಕೆಲವೊಮ್ಮೆ ಪ್ರಾಣಿಗಳ ಜೊಲ್ಲಿನಿಂದ ಗಾಯಗಳನ್ನು ವಾಸಿ ಮಾಡಬಹುದು ಎಂಬ ಮಿಥ್ಯವನ್ನು ಎಲ್ಲೆಡೆ ನಂಬಲಾಗಿದ್ದು, ಅದಕ್ಕೆ ಇನ್ನೂ ವೈಜ್ಞಾನಿಕವಾಗಿ ಸಾಕ್ಷ್ಯಾಧಾರ ದೊರಕಿಲ್ಲ ಎಂದೂ ವರದಿ ಉಲ್ಲೇಖಿಸಿದೆ.

Share this article