ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಎಂ ಅಸೀಫ್ ತಮ್ಮ ದೇಶ ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಎಂದು ಒಪ್ಪಿಕೊಂಡಿದ್ದಾರೆ.
ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ಅಟ್ಟಹಾಸ ಬೆನ್ನಲ್ಲೇ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಎಂ ಅಸೀಫ್ ತಮ್ಮ ದೇಶ ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಎಂದು ಒಪ್ಪಿಕೊಂಡಿದ್ದಾರೆ. 3 ದಶಕಗಳಿಂದ ಅಮೆರಿಕ , ಬ್ರಿಟನ್ ಸೇರಿ ಪಾಶ್ಚಿಮಾತ್ಯ ದೇಶಗಳ ಪರ ನಾವು ಕೊಳಕು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಬ್ರಿಟಿಷ್ ಸುದ್ದಿ ವಾಹಿನಿಯೊಂದಿಗಿನ ಸಂದರ್ಶನವೊಂದರಲ್ಲಿ ಪಾಕ್ ಸಚಿವರಿಗೆ, ‘ ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲಿಸುವ, ತರಬೇತಿ ಮತ್ತು ಆರ್ಥಿಕ ನೆರವನ್ನು ನೀಡುವ ದೀರ್ಘ ಇತಿಹಾಸವನ್ನು ಹೊಂದಿದೆ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಾ’ಎಂದು ಸಂದರ್ಶಕರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಕ್ಷಣಾ ಸಚಿವ ಖ್ವಾಜಾ ‘ನಾವು ಕಳೆದ 3 ದಶಕಗಳಿಂದ ಪಾಶ್ಚಿಮಾತ್ಯ ದೇಶಗಳು, ಬ್ರಿಟನ್ ಮತ್ತು ಅಮೆರಿಕಕ್ಕಾಗಿ ಈ ಕೊಳಕು ಕೆಲಸವನ್ನು ಮಾಡುತ್ತಿದ್ದೇವೆ.’ ಎಂದು ಉತ್ತರಿಸಿದ್ದಾರೆ.
ಮುಂದುವರೆದಂತೆ ಇದು ತಪ್ಪು ಎಂದಿರುವ ಪಾಕ್ ಸಚಿವ ಖ್ವಾಜಾ ‘ಪಾಕಿಸ್ತಾನ ಇದರಿಂದ ಬಹಳಷ್ಟು ತೊಂದರೆ ಅನುಭವಿಸಿದೆ’ ಎಂದು ಹೇಳಿದರು.
ಪಹಲ್ಗಾಂ ದಾಳಿಕೋರರು ಸ್ವಾತಂತ್ರ್ಯ ಸೇನಾನಿಗಳು : ಪಾಕ್ ಉಪಪ್ರಧಾನಿ
ಇಸ್ಲಾಮಾಬಾದ್: ಪಹಲ್ಗಾಂ ಉಗ್ರ ದಾಳಿಗೆ ಪ್ರತ್ಯುತ್ತರವಾಗಿ ಭಾರತದ ರಾಜತಾಂತ್ರಿಕ ಛಡಿಯೇಟಿಗೆ ತತ್ತರಿಸಿದ ನಡುವೆಯೇ ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಖ್ ದರ್ ಪಹಲ್ಗಾಂ ದಾಳಿಕೋರರನ್ನು ‘ಸ್ವಾತಂತ್ರ್ಯ ಸೇನಾನಿಗಳು’ ಎಂದು ಕರೆದು ಉದ್ಧಟತನ ತೋರಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ದಾಳಿ ನಡೆಸಿದವರು ಸ್ವಾತಂತ್ರ್ಯ ಹೋರಾಟಗಾರರಿರಬಹುದು’ ಎಂದಿದ್ದಾರೆ. ಈ ಮೂಲಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಕುರಿತು ಬಹಿರಂಗವಾಗಿ ಒಪ್ಪಿಕೊಡಿದ್ದಾರೆ.