ವಿವಸ್ತ್ರಗೊಳಿಸಿ ಖಾಸಗಿ ಭಾಗಗಳಿಗೆ ವ್ಯಾಯಾಮಕ್ಕಾಗಿ ಬಳಸುವ ಡಂಬೆಲ್ಸ್‌ ನೇತುಹಾಕಿ ರ್‍ಯಾಗಿಂಗ್‌!

KannadaprabhaNewsNetwork | Updated : Feb 13 2025, 04:29 AM IST

ಸಾರಾಂಶ

ಕೇರಳದ ಕೊಟ್ಟಾಯಂನಲ್ಲಿರುವ ಸರ್ಕಾರಿ ನರ್ಸಿಂಗ್‌ ಕಾಲೇಜ್‌ನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಮೊದಲ ವರ್ಷದ ವಿದ್ಯಾರ್ಥಿಗಳ ಮೇಲೆ ರ್‍ಯಾಗಿಂಗ್‌ ಹೆಸರಲ್ಲಿ ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಅಮಾನವೀಯ ವರ್ತನೆ.

ಕೊಟ್ಟಾಯಂ: ವಿವಸ್ತ್ರಗೊಳಿಸಿ ಖಾಸಗಿ ಭಾಗಗಳಿಗೆ ವ್ಯಾಯಾಮಕ್ಕಾಗಿ ಬಳಸುವ ಡಂಬೆಲ್ಸ್‌ಗಳನ್ನು ನೇತುಹಾಕಿ ಹಿಂಸೆ ಕೊಡ್ತಾರೆ, ಕಂಪಾಸ್‌ ಬಾಕ್ಸ್‌ನ ಚೂಪಾದ ಕೈವಾರ (ಜ್ಯಾಮಿತಿ) ದಿಂದ ಚುಚ್ಚಿ ಗಾಯ ಮಾಡ್ತಾರೆ, ಪ್ರತಿ ಭಾನುವಾರ ಮದ್ಯ ಸೇವನೆಗೆ ಹಣಕೊಡದಿದ್ದರೆ ಮನಸೋ ಇಚ್ಛೆ ಹಲ್ಲೆ ಮಾಡ್ತಾರೆ...!

ಇದು ಯಾವುದೋ ಸಿನಿಮಾದಲ್ಲಿ ರೌಡಿಗಳು ಅಮಾಯಕರ ಮೇಲೆ ತೋರುವ ರಾಕ್ಷಸೀಯ ಕೃತ್ಯದ ದೃಶ್ಯವಲ್ಲ, ಬದಲಾಗಿ ಕೇರಳದ ಕೊಟ್ಟಾಯಂನಲ್ಲಿರುವ ಸರ್ಕಾರಿ ನರ್ಸಿಂಗ್‌ ಕಾಲೇಜ್‌ನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಮೊದಲ ವರ್ಷದ ವಿದ್ಯಾರ್ಥಿಗಳ ಮೇಲೆ ರ್‍ಯಾಗಿಂಗ್‌ ಹೆಸರಲ್ಲಿ ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಅಮಾನವೀಯ ವರ್ತನೆ.

ಹಿರಿಯ ವಿದ್ಯಾರ್ಥಿಗಳ ಈ ಮೃಗೀಯ ವರ್ತನೆ ವಿರುದ್ಧ ಮೂವರು ವಿದ್ಯಾರ್ಥಿಗಳು ಇದೀಗ ಠಾಣೆ ಮೆಟ್ಟಿಲೇರಿದ್ದು, ಅದರಂತೆ ಐವರು ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಆ್ಯಂಟಿ ರ್‍ಯಾಗಿಂಗ್‌ ಕಾಯ್ದೆಯಡಿ ಬಂಧಿಸಲಾಗಿದೆ.

ಮೂರು ತಿಂಗಳಿಂದ ಚಿತ್ರಹಿಂಸೆ: ಕಾಲೇಜಿನ ಜೂನಿಯರ್‌ಗಳನ್ನು ವಿವಸ್ತ್ರಗೊಳಿಸಿ ಅವರ ಖಾಸಗಿ ಅಂಗಗಳಿಗೆ ಡಂಬೆಲ್ಸ್‌ಗಳನ್ನು ನೇತುಹಾಕಿ ವಿಕೃತ ಆನಂದಪಡುವ ಹಿರಿಯ ವಿದ್ಯಾರ್ಥಿಗಳು ಕೈವಾರದಂಥ ಚೂಪಾದ ವಸ್ತುಗಳಿಂದ ಚುಚ್ಚಿ ಹಿಂಸೆ ನೀಡಲಾಗುತ್ತಿತ್ತು. ಈ ವೇಳೆ ಗಾಯಗಳಾದರೆ ಅದಕ್ಕೆ ಮುಲಾಮು ಹಚ್ಚಲಾಗುತ್ತಿತ್ತು. ಒಂದು ವೇಳೆ ಈ ಸಂದರ್ಭದಲ್ಲಿ ನೋವಿನಿಂದ ಕೂಗಿದರೆ ಆ ಮುಲಾಮು ಅನ್ನು ಮುಖ, ತಲೆ, ಬಾಯಿಗೆ ಹಾಕಲಾಗುತ್ತಿತ್ತು.

ವಿವಸ್ತ್ರಗೊಳಿಸಿ ಹಿಂಸೆ ನೀಡುವ ದೃಶ್ಯಗಳನ್ನು ವಿದ್ಯಾರ್ಥಿಗಳು ಚಿತ್ರೀಕರಣ ಕೂಡ ಮಾಡಿಕೊಳ್ಳುತ್ತಿದ್ದರು. ರ್‍ಯಾಗಿಂಗ್ ವಿಚಾರ ಯಾರ ಮುಂದೆಯಾದರೂ ಬಾಯ್ಬಿಟ್ಟರೆ ಅದನ್ನು ವೈರಲ್‌ ಮಾಡುವ, ಅವರ ಶೈಕ್ಷಣಿಕ ಭವಿಷ್ಯವನ್ನೇ ಹಾಳು ಮಾಡುವ ಬೆದರಿಕೆಯನ್ನು ಹಾಕುತ್ತಿದ್ದರು.

ಹಣ ವಸೂಲಿ: ಹಿರಿಯ ವಿದ್ಯಾರ್ಥಿಗಳ ಆಟಾಟೋಪ ಚಿತ್ರಹಿಂಸೆಗಷ್ಟೇ ನಿಲ್ಲದೆ, ಕಿರಿಯ ವಿದ್ಯಾರ್ಥಿಗಳಿಂದ ಭಾನುವಾರ ಮದ್ಯ ಸೇವಿಸಲು ಬಲವಂತವಾಗಿ ಹಣವನ್ನೂ ವಸೂಲಿ ಮಾಡಲಾಗುತ್ತಿತ್ತು. ಹಣ ಕೊಡಲು ನಿರಾಕರಿಸಿದರೆ ಅವರಿಗೆ ಮನಸೋ ಇಚ್ಛೆ ಹಲ್ಲೆ ನಡೆಸಲಾಗುತ್ತಿತ್ತು. ಹಿರಿಯ ವಿದ್ಯಾರ್ಥಿಗಳಿಗೆ ಹಣಕೊಡಲಾಗದ ವಿದ್ಯಾರ್ಥಿಯೊಬ್ಬ ತಾನು ಅನುಭವಿಸುತ್ತಿರುವ ಚಿತ್ರಹಿಂಸೆಯನ್ನು ತಂದೆಯ ಮುಂದೆ ಹೇಳಿಕೊಂಡಿದ್ದು, ಪೋಷಕರ ಸೂಚನೆ ಮೇರೆಗೆ ಇದೀಗ ಪೊಲೀಸರಿಗೆ ದೂರು ನೀಡಲಾಗಿದೆ.

ಇತ್ತೀಚೆಗೆ 15 ವರ್ಷದ ಬಾಲಕನೊಬ್ಬ ಕೊಚ್ಚಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಸಹಪಾಠಿಗಳ ಕಿರುಕುಳವೇ ಕಾರಣ ಎಂದು ಆತನ ತಾಯಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿರುವುದು ತೀವ್ರ ಆಕ್ರೋಶ, ಆತಂಕಕ್ಕೆ ಕಾರಣವಾಗಿದೆ.

Share this article