ಕೆಲವು ದೇಶಗಳು ಯಶಸ್ವಿಯಾಗುವುದೇಕೆ, ಮತ್ತೆ ಕೆಲವು ದೇಶಗಳು ವಿಫಲವಾಗುವುದೇಕೆ ಎಂಬ ಕುರಿತು ಸಂಶೋಧನೆ ನಡೆಸಿದ ಅಮೆರಿಕದ ಮೂವರಿಗೆ ಈ ವರ್ಷದ ಅರ್ಥಶಾಸ್ತ್ರ ನೊಬೆಲ್ ಲಭಿಸಿದೆ.
ಸ್ಟಾಕ್‌ಹೋಮ್: ಕೆಲವು ದೇಶಗಳು ಯಶಸ್ವಿಯಾಗುವುದೇಕೆ, ಮತ್ತೆ ಕೆಲವು ದೇಶಗಳು ವಿಫಲವಾಗುವುದೇಕೆ ಎಂಬ ಕುರಿತು ಸಂಶೋಧನೆ ನಡೆಸಿದ ಅಮೆರಿಕದ ಮೂವರಿಗೆ ಈ ವರ್ಷದ ಅರ್ಥಶಾಸ್ತ್ರ ನೊಬೆಲ್ ಲಭಿಸಿದೆ.
ಅಮೆರಿಕದ ಮಸಾಚ್ಯುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಶೋಧಕರಾಗಿರುವ ಡ್ಯಾರನ್ ಅಸೆಮೊಗ್ಲು, ಸೈಮನ್ ಜಾನ್ಸನ್ ಹಾಗೂ ಶಿಕಾಗೋ ವಿಶ್ವವಿದ್ಯಾಲಯದ ಜೇಮ್ಸ್ ಎ. ರಾಬಿನ್ಸನ್ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.
ಒಂದು ದೇಶದ ಅಭ್ಯುದಯಕ್ಕೆ ಸಾಮಾಜಿಕ ಸಂಸ್ಥೆಗಳ ಮಹತ್ವ ಎಷ್ಟು ಎಂಬುದನ್ನು ಈ ಮೂವರೂ ತೋರಿಸಿಕೊಟ್ಟಿದ್ದಾರೆ. ಕಳಪೆ ಕಾನೂನು ಹೊಂದಿರುವ ಹಾಗೂ ಜನರನ್ನು ಶೋಷಿಸುವ ದೇಶಗಳು ಬದಲಾವಣೆ ಅಥವಾ ಉತ್ತಮ ಜೀವನಕ್ಕೆ ಪರಿವರ್ತನೆಯನ್ನು ಸೃಷ್ಟಿಸುವುದಿಲ್ಲ. ಅದು ಹೇಗೆ ಎಂಬುದನ್ನು ಈ ಮೂವರೂ ತೋರಿಸಿಕೊಟ್ಟಿದ್ದಾರೆ ಎಂದು ನೊಬೆಲ್ ಸಮಿತಿ ಸೋಮವಾರ ತಿಳಿಸಿದೆ.
ಈ ಪ್ರಶಸ್ತಿ ಘೋಷಣೆಯೊಂದಿಗೆ ಈ ವರ್ಷದ ನೊಬೆಲ್ ಪ್ರಶಸ್ತಿಗಳ ಘೋಷಣೆ ಮುಕ್ತಾಯಗೊಂಡಂತೆ ಆಗಿದೆ. ವೈದ್ಯಕೀಯ, ಭೌತ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ನೊಬೆಲ್ ಪ್ರಶಸ್ತಿಗಳನ್ನು ಈ ಮೊದಲು ಪ್ರಕಟಿಸಲಾಗಿತ್ತು.