‘ಏಕ್‌ ಹೈ ತೊ ಸೇಫ್‌ ಹೈ’ ಇಂದು ದೇಶದ ಮಹಾ ಮಂತ್ರವಾಗಿದೆ : ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork |  
Published : Nov 24, 2024, 01:45 AM ISTUpdated : Nov 24, 2024, 04:53 AM IST
ಮೋದಿ | Kannada Prabha

ಸಾರಾಂಶ

‘ನಾವು ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ (ಏಕ್‌ ಹೈ ತೊ ಸೇಫ್‌ ಹೈ) ಎಂಬುದು ಇಂದು ದೇಶದ ಮಹಾಮಂತ್ರವಾಗಿದೆ. ಹರ್ಯಾಣದ ಬಳಿಕ ಮಹಾರಾಷ್ಟ್ರ ಇದನ್ನು ಸಾಬೀತುಪಡಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ನವದೆಹಲಿ : ‘ನಾವು ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ (ಏಕ್‌ ಹೈ ತೊ ಸೇಫ್‌ ಹೈ) ಎಂಬುದು ಇಂದು ದೇಶದ ಮಹಾಮಂತ್ರವಾಗಿದೆ. ಹರ್ಯಾಣದ ಬಳಿಕ ಮಹಾರಾಷ್ಟ್ರ ಇದನ್ನು ಸಾಬೀತುಪಡಿಸಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನೊಳಗೊಂಡ ಮಹಾಯುತಿ ಕೂಟ ಜಯಭೇರಿ ಬಾರಿಸಿದ ಬೆನ್ನಲ್ಲೇ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಕಳೆದ 50 ವರ್ಷಗಳಲ್ಲಿ ಚುನಾವಣಾ ಪೂರ್ವ ಮೈತ್ರಿ ಇದೇ ಮೊದಲ ಬಾರಿ ಇಂತಹ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಎಲ್ಲಾ ದಾಖಲೆಗಳನ್ನು ಮುರಿದಿದೆ. ಬಿಜೆಪಿಗೆ ಸತತ 3ನೇ ಬಾರಿ ಜನಾದೇಶ ನೀಡಿದ 6ನೇ ರಾಜ್ಯ ಮಹಾರಾಷ್ಟ್ರವಾಗಿದೆ. ಇಂದು ರಾಜ್ಯದಲ್ಲಿ ಉತ್ತಮ ಆಡಳಿತ, ನಿಜವಾದ ಸಾಮಾಜಿಕ ನ್ಯಾಯ ಜಯಿಸಿದೆ ಹಾಗೂ ಸುಳ್ಳು, ವಂಚನೆ ಹೀನಾಯವಾಗಿ ಸೋತಿದೆ’ ಎಂದು ಸಂತಸ ವ್ಯಕ್ತಪಡಿಸಿದರು

ಈ ವೇಳೆ ವಿಪಕ್ಷವಾದ ಇಂಡಿಯಾ ಕೂಟವನ್ನು ಕಟುವಾಗಿ ಟೀಕಿಸಿರುವ ಅವರು, ‘ಜನ ‘ದೇಶ ಮೊದಲು’ ಎನ್ನುವವರೊಂದಿಗೆ ಇದ್ದಾರೆ ಹೊರತು ‘ಕುರ್ಚಿ ಮೊದಲು’ ಎನ್ನುವವರೊಂದಿಗೆ ಅಲ್ಲ. ಆದರೆ ಇದನ್ನು ಅರ್ಥೈಸಿಕೊಳ್ಳುವಲ್ಲಿ ಇಂಡಿಯಾ ಕೂಟ ಸೋತಿದೆ. ಇಂದು ಕಾಂಗ್ರೆಸ್‌ ಪರಾವಲಂಬಿಯಾಗಿದ್ದು, ಸ್ವಂತ ಬಲದಲ್ಲಿ ಸರ್ಕಾರ ರಚಿಸಲು ಅಶಕ್ತವಾಗಿದೆ. ಕಾರಣ ಹಿಂದಿನ ಕಾಂಗ್ರೆಸ್‌ ಈಗ ಉಳಿದಿಲ್ಲ. ‘ರಾಜ ಪರಿವಾರ’ಕ್ಕೆ ಮಾತ್ರವೇ ಕಾಂಗ್ರೆಸ್‌ ಅನ್ನು ಮುನ್ನಡೆಸಲು ಅವಕಾಶವಿದೆಯೇ ಹೊರತು, ಸಮರ್ಪಿತ ಕಾರ್ಯಕರ್ತರಿಗೂ ಮುಂದೆ ಬರಲಾಗದಂತಹ ವಾತಾವರಣವನ್ನು ಪಕ್ಷದಲ್ಲಿ ಸೃಷ್ಟಿಸಲಾಗಿದೆ. ಕಾಂಗ್ರೆಸ್‌ ಅಧಿಕಾರದ ಆಸೆಯಿಂದ ಜಾತಿಯ ವಿಷ ಹರಡುತ್ತಿದೆ. ಅದಕ್ಕೆ ತನ್ನ ಪರಿವಾರ ಮುಖ್ಯವೇ ಹೊರತು ಜನರಲ್ಲ’ ಎಂದರು.

ರಾಹುಲ್‌ಗೆ ಚಾಟಿ:

ಈ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿ, ‘ಆ ಪಕ್ಷವು ಉತ್ತರಕ್ಕೆ ಹೋದಾಗ ದಕ್ಷಿಣಕ್ಕೆ ಅವಮಾನ ಮಾಡುತ್ತದೆ ಹಾಗೂ ದಕ್ಷಿಣಕ್ಕೆ ಹೋದಾಗ ಉತ್ತರಕ್ಕೆ ಅವಮಾನ ಮಾಡುತ್ತದೆ. ಸಾಲದೆಂಬಂತೆ ವಿದೇಶದಲ್ಲಿ ಭಾರತವನ್ನೇ ಅವಮಾನಿಸುತ್ತದೆ’ ಎಂದರು.

ಕರ್ನಾಟಕ ಕಾಂಗ್ರೆಸ್‌ ಗ್ಯಾರಂಟಿಗೆ ಚಾಟಿ

‘ಕೊಟ್ಟ ಭರವಸೆಯನ್ನು ಈಡೇರಿಸಲಾಗದೆ ಕಾಂಗ್ರೆಸ್‌ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಒದ್ದಾಡುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ’ ಎಂದು ಪ್ರಧಾಜಿ ಮೋದಿ ಪುನರುಚ್ಚರಿಸಿದರು.

ದೇಶದ ಅಭಿವೃದ್ಧಿಗೆ ನಗರಗಳೇ ಇಂಜಿನ್‌ ಎಂದಿರುವ ಮೋದಿ, ಭಾರತದ ನಗರಗಳನ್ನು ವಿಶ್ವದ ಉತ್ತಮ ನಗರಗಳಲ್ಲಿ ಒಂದಾಗಿಸುವುದು ನಮ್ಮ ಗುರಿ ಎಂದಿದ್ದಾರೆ. ಜೊತೆಗೆ, ಜಮ್ಮು ಕಾಶ್ಮೀರದಲ್ಲಿ ರದ್ದಾದ 370ನೇ ವಿಧಿಯನ್ನು ಮರುಸ್ಥಾಪಿಸಲು ಯಾವ ಶಕ್ತಿಗೂ ಸಾಧ್ಯವಿಲ್ಲ. ಕಾರಣ, ಜನ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನವನ್ನಷ್ಟೇ ಒಪ್ಪಿಕೊಳ್ಳುತ್ತಾರೆ ಎಂದರು.

ಜಾರ್ಖಂಡ್‌ನಲ್ಲಿ ಎನ್‌ಡಿಎ ಕೂಟದ ಪರಾಭವವನ್ನು ನೆನೆದ ಮೋದಿ, ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸುವ ಭರವಸೆ ನೀಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ದೇಶದಲ್ಲಿ ಭಾರೀ ಮಳೆ, ಬಿರುಗಾಳಿ ಸಾಧ್ಯತೆ: ಇಲಾಖೆ ಮುನ್ಸೂಚನೆ