ಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೇರುವ ಐತಿಹಾಸಿಕ ಮುಹೂರ್ತಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಗಿದೆ.

ಅಧಿಕಾರಿಗೆ ಅಧಿಕಾರ ।ಇಂದು ಬೆಳಗ್ಗೆ 11ಕ್ಕೆ ಪ್ರಮಾಣ । ಮೋದಿ, ಶಾ ಭಾಗಿ । ಸಂಪುಟಕ್ಕೆ ಇಬ್ಬರು ಡಿಸಿಎಂ । ಒಂದು ಸ್ಥಾನ ಮಹಿಳೆ ಪಾಲು?==ಕೊಟ್ಟ ಎಲ್ಲಾ ಭರವಸೆ ಈಡೇರಿಸ್ತೇವೆಬಂಗಾಳದ ಜನ ನಮಗೆ ಐತಿಹಾಸಿಕ ಜನಾದೇಶ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ರಾಜ್ಯದಲ್ಲೀಗ ಭಯವು ಹೋಗಿ ಭರವಸೆ ಬಂದಿದೆ. ನಮ್ಮ ಪ್ರಣಾಳಿಕೆಯಲ್ಲಿದ್ದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸುತ್ತೇವೆ. ಬಂಗಾಳ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಕೆಲಸ ಮಾಡುವುದು ಅತ್ಯಗತ್ಯ.

- ಸುವೇಂದು ಅಧಿಕಾರ, ಬಂಗಾಳ ನಿಯೋಜಿತ ಸಿಎಂ==ಪಿಟಿಐ ಕೋಲ್ಕತಾಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೇರುವ ಐತಿಹಾಸಿಕ ಮುಹೂರ್ತಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಗಿದೆ. ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನು ‘ದೀದಿ ಆಳ್ವಿಕೆಯ ಬಳಿಕ ಇನ್ನು ದಾದಾ ಸಾಮ್ರಾಜ್ಯ’ ಎಂದು ಬಣ್ಣಿಸಲಾಗುತ್ತಿದೆ.ಅಧಿಕಾರಿ ಅವರು ಶನಿವಾರ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು, ಘಟಾನುಘಟಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.ಬಂಗಾಳಕ್ಕೆ ಸಿಎಂ ಆಯ್ಕೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಅಮಿತ್‌ ಶಾ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಸಂಜೆ, ನೂತನ ಶಾಸಕರು ಮತ್ತು ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿ ಆಯ್ಕೆಯನ್ನು ಅಮಿತ್‌ ಶಾ ಘೋಷಿಸಿದರು.‘ಶಾಸಕಾಂಗ ಸಭೆಯಲ್ಲಿ ಸಲ್ಲಿಸಲಾಗಿದ್ದ 8 ಪ್ರಸ್ತಾವನೆಗಳಲ್ಲೂ ಒಂದೇ ಹೆಸರಿತ್ತು (ಸುವೇಂದು ಅಧಿಕಾರಿ). 2ನೇ ಅವಕಾಶ ಕೊಟ್ಟರೂ ಯಾರೂ ಅದನ್ನು ಬದಲಿಸಲು ಬಯಸಲಿಲ್ಲ. ಹಾಗಾಗಿ ಸುವೇಂದು ಅವರನ್ನೇ ಅಂತಿಮವಾಗಿ ಬಂಗಾಳದ ಸಿಎಂ ಆಗಿದೆ ಆಯ್ಕೆ ಮಾಡಲಾಗಿದೆ’ ಎಂದು ಶಾ ಹೇಳಿದರು.ಅಧಿಕಾರಿ ಆರ್‌ಎಸ್‌ಎಸ್‌ ಹಿನ್ನೆಲೆ ಇಲ್ಲದಿದ್ದರೂ (ಮೂಲತಃ ಟಿಎಂಸಿಯವರು- ನಂತರ ಬಿಜೆಪಿಗೆ ಬಂದಿದ್ದರು) ಆಯ್ಕೆ ಆಗಿರುವುದು ವಿಶೇಷ. ಅಧಿಕಾರಿ ಅವರ ಜತೆ ಸಿಎಂ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ದಿಲೀಪ್‌ ಘೋಷ್‌, ಅಗ್ನಿಮಿತ್ರಾ ಪೌಲ್‌, ರೂಪಾ ಗಂಗೂಲಿ ಇದ್ದರು. ಅವರನ್ನೆಲ್ಲ ಹಿಂದಿಕ್ಕಿ ಸುವೇಂದು ಆಯ್ಕೆಯಾಗಿದ್ದಾರೆ.

ಈ ನಡುವೆ, ಅಗ್ನಿಮಿತ್ರಾ ಹಾಗೂ ಶಾಸಕ ಶಂಕರ್‌ ಘೋಷ್ ಅವರಿಗೆ ಡಿಸಿಎಂ ಹುದ್ದೆ ಒಲಿಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.ದೀದಿ ಬಳಿಕ ದಾದಾ:ದಶಕದ ಹಿಂದೆ ರಾಜ್ಯದಲ್ಲಿ ನೆಲೆಯನ್ನೇ ಹೊಂದಿರದ ಬಿಜೆಪಿಯು ಇಂದು ಸರ್ಕಾರ ರಚಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಅತ್ತ ಸತತ 15 ವರ್ಷಗಳ ಕಾಲ ಬಂಗಾಳವನ್ನಾಳಿದ್ದ ಟಿಎಂಸಿಯ ಮಮತಾ ಬ್ಯಾನರ್ಜಿ ಅವರನ್ನು ಕೊನೆಗೂ ಸಿಎಂ ಕುರ್ಚಿಯಿಂದ ಕೆಳಗಿಳಿಸಲಾಗಿದೆ. 2021ರ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿ, ಎದುರಾಳಿ ಮಮತಾರನ್ನು ಮಣಿಸಿದ್ದರು. ಈ ಬಾರಿಯೂ ನಂದಿಗ್ರಾಮವನ್ನು ಗೆಲ್ಲುವುದರ ಜತೆಗೆ, ಭವಾನಿಪುರ ಕ್ಷೇತ್ರದಲ್ಲಿ ಮತ್ತೆ ಪ್ರತಿಸ್ಪರ್ಧಿಯಾಗಿದ್ದ ದೀದಿಗೆ ಮತ್ತೊಮ್ಮೆ ಸೋಲಿನ ರುಚಿ ಉಣಿಸಿದವರು ಅಧಿಕಾರಿ.ಭದ್ರತೆ ಬಿಗಿ:ಅಧಿಕಾರಿಯವರ ಶಪಥಕ್ಕೆ ಘಾಟಾನುಘಟಿ ನಾಯಕರ ಆಗಮನವಾಗಲಿರುವ ಹಿನ್ನೆಲೆಯಲ್ಲಿ, ಕಾರ್ಯಕ್ರಮ ನಡೆಯುವ ಮೈದಾನ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಂಚಾರಿ ನಿಯಮಗಳಲ್ಲೂ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದ್ದು, ಬೆಳಗ್ಗೆ 4 ಗಂಟೆಯಿಂದ ರಾತ್ರಿ 8ರ ವರೆಗೆ ಸರಕು ಸಾಗಣೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.