ಟಿವಿಕೆ ಜತೆ ಕಾಂಗ್ರೆಸ್‌ ಪಕ್ಷದ ಮೈತ್ರಿ ಬಹುಕಾಲದ ಮಿತ್ರ ಡಿಎಂಕೆಯನ್ನು ಸಿಟ್ಟಿಗೆಬ್ಬಿಸಿದ್ದು ರಾಷ್ಟ್ರದಲ್ಲೇ ಮೈತ್ರಿ ಕಡಿತಕ್ಕೆ ಮುಂದಾದಂತಿದೆ. ಇದರ ಮೊದಲ ಸಂಕೇತವಾಗಿ ಗುರುವಾರ ನಡೆದ ಡಿಎಂಕೆ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

 ಚೆನ್ನೈ: ಟಿವಿಕೆ ಜತೆ ಕಾಂಗ್ರೆಸ್‌ ಪಕ್ಷದ ಮೈತ್ರಿ ಬಹುಕಾಲದ ಮಿತ್ರ ಡಿಎಂಕೆಯನ್ನು ಸಿಟ್ಟಿಗೆಬ್ಬಿಸಿದ್ದು ರಾಷ್ಟ್ರದಲ್ಲೇ ಮೈತ್ರಿ ಕಡಿತಕ್ಕೆ ಮುಂದಾದಂತಿದೆ. ಇದರ ಮೊದಲ ಸಂಕೇತವಾಗಿ ಗುರುವಾರ ನಡೆದ ಡಿಎಂಕೆ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಇನ್ನೊಂದು ಕಡೆ, ‘ಲೋಕಸಭೆಯಲ್ಲಿ ಕಾಂಗ್ರೆಸ್‌ ಜತೆ ಇನ್ನು ನಾವು ಕೂರಲ್ಲ. ಪ್ರತ್ಯೇಕ ಆಸನ ವ್ಯವಸ್ಥೆ ಮಾಡಿ’ ಎಂದು ಸದನದ ಸ್ಪೀಕರ್‌ಗೆ ಡಿಎಂಕೆ ಸಂಸದೆ ಕನಿಮೋಳಿ ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ ಜತೆ ಡಿಎಂಕೆ ಮೈತ್ರಿ ಕಡಿದುಕೊಂಡರೆ ವಿಪಕ್ಷಗಳ ಇಂಡಿಯಾ ಕೂಟದಿಂದ ಕೂಡ ಅದು ಹೊರಬಂದಂತೆ ಎನ್ನಲಾಗುತ್ತಿದೆ.

ಸ್ಟಾಲಿನ್‌ಗೆ ಬೇಸರ:

ಕಾಂಗ್ರೆಸ್‌ ನಡೆ ಬಗ್ಗೆ ಮಾತನಾಡಿದ ಡಿಎಂಕೆ ನಾಯಕರೊಬ್ಬರು, ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್‌ ತೀವ್ರ ಬೇಸರಗೊಂಡಿದ್ದಾರೆ ಎಂದಿದ್ದಾರೆ. ‘ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು, ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕಾಗಿ ಅವರನ್ನು ನೀವು (ರಾಹುಲ್‌ ಗಾಂಧಿ) ದೇಶದ್ರೋಹಿ ಎಂದು ಕರೆದಿದ್ದೀರಿ. ಈಗ ಇದನ್ನು ಪರಿಗಣಿಸಿ. ಮಂಗಳವಾರ ಮಧ್ಯಾಹ್ನ ನೀವು ಎಂ.ಕೆ. ಸ್ಟಾಲಿನ್‌ಗೆ ಕರೆ ಮಾಡಿ, ‘ನಾನು ನಿಮ್ಮೊಂದಿಗಿದ್ದೇನೆ’ ಎಂದು ಹೇಳಿದ್ದಿರಿ. ಮರುದಿನ ಬೆಳಿಗ್ಗೆ, ನೀವು ಮೈತ್ರಿಕೂಟದಿಂದ ಪಕ್ಷಾಂತರಗೊಂಡು ನಿಮ್ಮ ವಿರುದ್ಧ ಸಡ್ಡು ಹೊಡೆದಿದ್ದ ಪಕ್ಷಕ್ಕೆ ಹಾರಿದ್ದೀರಿ. ಇದು ಅವಕಾಶವಾದಿ ಮತ್ತು ರಾಜಕೀಯವಾಗಿ ಅನೈತಿಕ’ ಎಂದರು.

‘ನಾವು ನಿಮಗೆ 28 ಸೀಟು ಬಿಟ್ಟವು. 5ರಲ್ಲಿ ಗೆದ್ದಿರಿ. ನಮ್ಮಿಂದಾಗಿ ಈ ಸೀಟು ಬಂದವು ಎಂಬುದನ್ನೂ ಮರೆತಿದ್ದೀರಿ’ ಎಂದು ಕಿಡಿಕಾರಿದ್ದಾರೆ.

ಬೇರೆ ಆಸನ ವ್ಯವಸ್ಥೆಗೆ ಬೇಡಿಕೆ:

ಈ ನಡುವೆ, ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿರುವ ಸಂಸದೆ ಕನಿಮೋಳಿ, ‘ಲೋಕಸಭೆಯಲ್ಲಿ ಡಿಎಂಕೆಗೆ ಸಂಸದರ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ವಿನಂತಿಸುತ್ತೇನೆ. ಕಾಂಗ್ರೆಸ್‌ ಜತೆಗಿನ ನಮ್ಮ ಮೈತ್ರಿ ಮುರಿದುಬಿದ್ದಿರುವ ವೇಳೆ ಸದನದಲ್ಲಿ ಅವರೊಂದಿಗೆ ಕೂರುವುದು ಸರಿಯಾಗದು’ ಎಂದಿದ್ದಾರೆ. ಈತನಕ ಲೋಕಸಭೆಯಲ್ಲಿ ಕಾಂಗ್ರೆಸ್‌ ಜತೆಗೇ ಡಿಎಂಕೆ ಸಂಸದರು ಕೂರುತ್ತಿದ್ದರು.

ಬಹುಮತ ಪಡೆದು ಸರ್ಕಾರ ರಚಿಸಲು ಟಿವಿಕೆಗೆ 10 ಸೀಟುಗಳ ಆವಶ್ಯಕತೆ ಇದೆ. ಹೀಗಾಗಿ 5 ಸೀಟು ಪಡೆದಿರುವ ಕಾಂಗ್ರೆಸ್‌, ವಿಜಯ್‌ರನ್ನು ಬೆಂಬಲಿಸಿದೆ. ‘ಇದು ನಮಗೆ ಬಗೆದ ದ್ರೋಹ. ಕಾಂಗ್ರೆಸ್‌ಗೆ ಅಷ್ಟು ಸೀಟು ದಕ್ಕಿರುವುದೂ ನಮ್ಮಿಂದಲೇ’ ಎಂದು ಡಿಎಂಕೆ ಇತ್ತೀಚೆಗೆ ಹೇಳಿತ್ತು.

ಹಲವು ದಶಕಗಳಿಂದ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಹೊಂದಿದ್ದ ಡಿಎಂಕೆ

ಆದರೆ ತಮಿಳ್ನಾಡು ಚುನಾವಣೆ ಬಳಿಕ ವಿಜಯ್‌ರ ಟಿವಿಕೆ ಪಕ್ಷ ಬೆಂಬಲಿಸಿದ್ದ ಕಾಂಗ್ರೆಸ್‌

ಕಾಂಗ್ರೆಸ್‌ನ ಈ ನಡೆ ಬಗ್ಗೆ ಡಿಎಂಕೆ ಮೈತ್ರಿಕೂಟದ ಸಭೆಯಲ್ಲಿ ಸಿಎಂ ಸ್ಟಾಲಿನ್ ಆಕ್ರೋಶ

ಕಷ್ಟದ ಸಮಯದಲ್ಲಿ ಹಲವು ಬಾರಿ ಬೆಂಬಲಿಸಿದ್ದರೂ ಇದೀಗ ಕಾಂಗ್ರೆಸ್‌ ಕೈಕೊಟ್ಟ ಆರೋಪ

ಹೀಗಾಗಿ ಲೋಕಸಭೇಲಿ ಪ್ರತ್ಯೇಕ ಸ್ಥಾನ ನೀಡುವಂತೆ ಸ್ಪೀಕರ್‌ ಡಿಎಂಕೆ ನಾಯಕರ ಮನವಿ

ಶೀಘ್ರವೇ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟಕ್ಕೂ ಡಿಎಂಕೆ ವಿದಾಯ ಹೇಳುವ ಸಂಭವ