ಕನ್ನಡಪ್ರಭ ವಾರ್ತೆ ಕೋಲಾರಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧವಿಲ್ಲ, ಆದರೆ ಮೀಸಲಾತಿಗೂ ಮುನ್ನ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದ ಕಾರಣಕ್ಕೆ ವಿರೋಧಿಸಲಾಯಿತು, ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಆಡಳಿತರೂಢ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ಸಾಮೂಹಿಕವಾಗಿ ವಿರೋಧಿಸಿವೆ ಎಂದು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಸ್ಪಷ್ಟಪಡಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಕ್ಕೆ ಮಹಿಳಾ ಸಬಲೀಕರಣ ಸಮಾನತೆ ಸ್ಥಾನಮಾನ ಕುರಿತು ಜಾಗೃತಿ ಅಗತ್ಯ. ಲೋಪದೋಷಗಳ ಕುರಿತು ಚರ್ಚಿಸದೆ ಏಕಾಏಕಿ ಮೀಸಲಾತಿ ಪ್ರಸ್ತಾಪಿಸಿರುವುದರಿಂದ ಎಲ್ಲಾ ವಿಪಕ್ಷಗಳು ವಿರೋಧಿಸಿದೆ ಹೊರತಾಗಿ ಮಹಿಳಾ ಮೀಸಲಾತಿ ಜಾರಿಗೆ ನಮ್ಮ ವಿರೋಧಿವಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಸಹ ಆಡಳಿತರೂಢ ಬಿಜೆಪಿ ಕಾಂಗ್ರೆಸ್ ಪಕ್ಷದ ಮೇಲೆ ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದೆ ಎಂದು ದೂರಿದರು. ಮಹಿಳಾ ಸಬಲೀಕರಣ, ಮಹಿಳೆಯರ ಬೆಳವಣಿಗೆ, ಮಹಿಳೆಯ ಸಾಮಾಜಿಕ ನ್ಯಾಯಕ್ಕಾಗಿ ಚರ್ಚೆಗಳ ಅಗತ್ಯವಿತ್ತು, ಆದರೆ ಅದಕ್ಕೆ ಅವಕಾಶ ನೀಡದೆ, ವಿಪಕ್ಷಗಳ ಅಭಿಪ್ರಾಯ ಪರಿಗಣಿಸದೆ ಏಕಾಏಕಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಲು ಮುಂದಾಗಿರುವುದನ್ನು ವಿಪಕ್ಷಗಳು ವಿರೋಧಿಸುವುದು ಸಮಂಜಸವಾಗಿದೆ ಎಂದರು. ಯುಪಿಎ ಸರ್ಕಾರ ಸಿದ್ಧಪಡಿಸಿದ ಮಹಿಳಾ ಮೀಸಲಾತಿ ಮಸೂದೆಯನ್ನು ೨೦೨೩ರಲ್ಲಿ ಮಂಡಿಸಿ ಒಪ್ಪಿಗೆ ಪಡೆದು ೨೦೨೬ರ ಜನಗಣತಿ ನಂತರ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ನಂತರದಲ್ಲಿ ಜಾರಿಗೆ ತರುವ ಮಾತುಗಳನ್ನಾಡಿದ್ದ ಕೇಂದ್ರವು ೫ ರಾಜ್ಯಗಳ ಚುನಾವಣೆಗಳ ಸಂದರ್ಭದಲ್ಲಿ ಜನರ ಬಳಿ ಹೋಗಲು ಮುಖವಿಲ್ಲದೆ ಮತ್ತೊಮ್ಮೆ ನಾರಿಶಕ್ತಿ ವಂದನ್ ಹೆಸರಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವ ನಾಟಕವಾಡಿ ಮತದಾರರನ್ನು ಮರಳು ಮಾಡುವ ಸಂಚು ಹೂಡಿತ್ತು. ಮಹಿಳೆಯರ ಮೀಸಲಾತಿ ನಿಜವಾದ ವಿರೋಧಿಗಳು ಬಿಜೆಪಿ ಹೊರತಾಗಿ ಕಾಂಗ್ರೆಸ್ ಪಕ್ಷವಲ್ಲ ಎಂದು ಪ್ರತಿಪಾದಿಸಿದರು.
ಮಹಿಳಾ ಮೀಸಲಾತಿ ಚರ್ಚೆಗಳಾಗದೆ ಜಾರಿ ಮಾಡುವುದರಿಂದ ದಕ್ಷಿಣ ರಾಜ್ಯಗಳಲ್ಲಿ ಮಹಿಳೆಯರಿಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಾಗದು. ಉತ್ತರ ಭಾರತದಲ್ಲಿ ಶಿಕ್ಷಣಸ್ಥರ ಸಂಖ್ಯೆ ಕಡಿಮೆ ಇರುವುದು. ಅದರೆ ದಕ್ಷಿಣ ಭಾರತದಲ್ಲಿ ಶಿಕ್ಷಣಸ್ಥರ ಸಂಖ್ಯೆ ಹೆಚ್ಚಿದೆ ಎಂದು ವಿವರಿಸಿದರು.ಕೆ.ಪಿ.ಸಿ.ಸಿ ಸದಸ್ಯೆ ವಸಂತ ಕವಿತಾರೆಡ್ಡಿ, ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಹೇಮಮಾಲಿನಿ, ಮುಖಂಡರಾದ ಮಂಗಳ, ಉಮಾದೇವಿ, ಭಾಗ್ಯಮ್ಮ, ನಾರಾಯಣಸ್ವಾಮಿ, ಮಂಜುನಾಥ್ ಇದ್ದರು.
ಫೋಟೋ ...ಸುದ್ದಿಗೋಷ್ಠಿಯಲ್ಲಿ ಶಾಸಕಿ ರೂಪಕಲಾ ಶಶಿಧರ್ ಮಾತನಾಡಿದರು.