ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ರಾಜ್ಯದ ರೈತರು ಆತ್ಮಹತ್ಯೆಯ ಅಂಚಿಗೆ ತಲುಪಿದ್ದಾರೆ. ಕೂಡಲೇ ಕರ್ನಾಟಕವನ್ನು ಬರಪೀಡಿತ ರಾಜ್ಯವೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ರಾಜ್ಯದ ರೈತರು ಆತ್ಮಹತ್ಯೆಯ ಅಂಚಿಗೆ ತಲುಪಿದ್ದಾರೆ. ಕೂಡಲೇ ಕರ್ನಾಟಕವನ್ನು ಬರಪೀಡಿತ ರಾಜ್ಯವೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಕಣ್ಣೀರಿನ ಕಥೆಗಳನ್ನು ಕೇಳಿದರೆ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಹೊಂದಿರುವ ಧೋರಣೆ, ನಿರ್ಲಕ್ಷ್ಯ ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರೈತರ ಸಂಕಷ್ಟದ ಬಗ್ಗೆ ಸಂಪೂರ್ಣ ಅಸೂಕ್ಷ್ಮವಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಪಕ್ಷದ ಆಂತರಿಕ ರಾಜಕಾರಣ, ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆಯಲ್ಲೇ ಮುಳುಗಿದ್ದಾರೆ ಎಂದು ಕಿಡಿಕಾರಿದರು.ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಬರ ಪರಿಶೀಲನಾ ಪ್ರವಾಸ ಮಾಡಿದ್ದೇನೆ. ಕಡಿಮೆ ಮಳೆಯಿಂದ ಜಲಾಶಯಗಳ ನೀರಿನ ಮಟ್ಟ ಕುಸಿಯುತ್ತಿದೆ. ಕೃಷಿ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ರೈತರು ತೀವ್ರ ಸಂಕಷ್ಟದಲ್ಲಿದ್ದು, ಆತ್ಮಹತ್ಯೆಯ ಅಂಚಿಗೆ ತಲುಪಿದ್ದಾರೆ. ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಿದೆ. ಅನೇಕ ರೈತರು ತಮ್ಮ ಅಲ್ಪಸ್ವಲ್ಪ ಸಾಮಾನುಗಳೊಂದಿಗೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ತಾಲೂಕು ಆಡಳಿತದ ಬಳಿ ಬರ ಪರಿಹಾರಕ್ಕೆ ಹಣವಿಲ್ಲ:ತಾಲೂಕು ಮಟ್ಟದ ಆಡಳಿತ ಯಂತ್ರವೂ ಸೂಕ್ತ ಮಾರ್ಗದರ್ಶನ ಮತ್ತು ಅನುದಾನದ ಕೊರತೆಯಿಂದ ಸಂಪೂರ್ಣ ನಿಷ್ಕ್ರಿಯವಾಗಿದೆ. ಮಧ್ಯಮ ಹಂತದ ಅಧಿಕಾರಿಗಳು ಅನಾಮಧೇಯವಾಗಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಬರ ಪರಿಹಾರ ಕಾಮಗಾರಿಗಳಿಗೆ ಅಗತ್ಯವಾದಷ್ಟು ಹಣ ತಮ್ಮ ಬಳಿ ಇಲ್ಲ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ರೈತರ ಸಂಕಷ್ಟದ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ತೋರಿದ ಸರ್ಕಾರ ಮತ್ತೊಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇಂದು ರಾಜ್ಯಾಧ್ಯಕ್ಷರಿಗೆ ಬರ ಕುರಿತ ಸಮಗ್ರ ವರದಿ ಸಲ್ಲಿಕೆ:ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ತಮ್ಮ ತಂಡದ ಸಮಗ್ರ ವರದಿಯನ್ನು ಬುಧವಾರ ಪಕ್ಷದ ರಾಜ್ಯಾಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದು ಇದೇ ವೇಳೆ ರವಿಕುಮಾರ್ ತಿಳಿಸಿದರು.
