ಕನ್ನಡಪ್ರಭ ವಾರ್ತೆ ಹುಕ್ಕೇರಿತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ, ಸೂಕ್ತ ಬರ ಪರಿಹಾರ ಮಂಜೂರು ಮಾಡುವಂತೆ ಆಗ್ರಹಿಸಿ ಸೋಮವಾರ ಹುಕ್ಕೇರಿಯಲ್ಲಿ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ, ಸೂಕ್ತ ಬರ ಪರಿಹಾರ ಮಂಜೂರು ಮಾಡುವಂತೆ ಆಗ್ರಹಿಸಿ ಸೋಮವಾರ ಹುಕ್ಕೇರಿಯಲ್ಲಿ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಯಿತು.

ಮಾಜಿ ಸಂಸದ ರಮೇಶ ಕತ್ತಿ ಮಾರ್ಗದರ್ಶನದಲ್ಲಿ ಶಾಸಕ ನಿಖಿಲ್ ಕತ್ತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹುಕ್ಕೇರಿ ಹಾಗೂ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಸಾವಿರಾರು ಜನರು ಭಾಗವಹಿಸಿದರು.ಪಿಎಲ್‌ಡಿ ಬ್ಯಾಂಕ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕೋರ್ಟ್ ಸರ್ಕಲ್‌ವರೆಗೆ ಸಾಗಿತು. ಬಳಿಕ ಪ್ರತಿಭಟನಾಕಾರರು ಸಂಕೇಶ್ವರ–ಜೇವರ್ಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಖರ ಬಿಸಿಲನ್ನೂ ಲೆಕ್ಕಿಸದೆ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಹುಕ್ಕೇರಿ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ರಾಜ್ಯ ಸರ್ಕಾರ ಜನ ಹಾಗೂ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಬರಪೀಡಿತ ತಾಲೂಕುಗಳ ಪಟ್ಟಿ ಸಿದ್ಧಪಡಿಸುವಲ್ಲಿ ಹುಕ್ಕೇರಿ ತಾಲೂಕಿಗೆ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬರದ ಜತೆಗೆ ಅನಿಯಮಿತ ವಿದ್ಯುತ್ ಕಡಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸರ್ಕಾರ ಈ ಭಾಗದ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.ಹುಕ್ಕೇರಿ ಕ್ಷೇತ್ರವನ್ನು ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಕಡೆಗಣಿಸಿದ್ದು, ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ದೂರಿದರು.ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಶಾಸಕ ನಿಖಿಲ್ ಕತ್ತಿ ಅವರು ಹುಕ್ಕೇರಿ ತಾಲೂಕಿನ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ, ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವುದು ದುರದೃಷ್ಟಕರ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.ಹುಕ್ಕೇರಿಯನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲದಿದ್ದರೆ ಮುಂದಿನ ವಾರ ಹತ್ತರಗಿ ಬಳಿಯ ರಾಷ್ಟ್ರೀಯ ಹೆದ್ದಾರಿ ಟೋಲ್‌ ನಾಕಾ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಮಾಜಿ ಸಂಸದ ರಮೇಶ ಕತ್ತಿ ಹಾಗೂ ಶಾಸಕ ನಿಖಿಲ್ ಕತ್ತಿ ಮಾತನಾಡಿದರು. ಮಹಾವೀರ ನಿಲಜಗಿ, ಗಜಾನನ ಕ್ವಳ್ಳಿ, ಸತ್ಯಪ್ಪ ನಾಯಿಕ, ಕಲಗೌಡ ಪಾಟೀಲ, ಕೆಂಪಣ್ಣ ದೇಸಾಯಿ, ನಂದು ಮುಡಸಿ, ಗುರುಪ್ಪ ತಳವಾರ, ರಾಮಚಂದ್ರ ಜೋಶಿ, ಪಿ.ಎಸ್.ಮುತಾಲಿಕ, ಡಿ.ಕೆ. ಅವರಗೋಳ, ಕೆ.ಬಿ. ಕುರಬೇಟ, ಮಾರುತಿ ಅಷ್ಟಗಿ, ಬಸವರಾಜ ಹುಂದ್ರಿ, ರಾಚಯ್ಯ ಹಿರೇಮಠ, ರಾಜು ಮುನ್ನೋಳಿ, ಗುರುರಾಜ ಕುಲಕರ್ಣಿ, ಶ್ರೀಶೈಲ ಮಠಪತಿ, ಸುನೀಲ ಪರ್ವತರಾವ್, ಸಾತಪ್ಪ ಕರ್ಕಿನಾಯಿಕ, ಬಾಹುಬಲಿ ನಾಗನೂರಿ, ಬಸವರಾಜ ತಳವಾರ, ಆನಂದ ಲಕ್ಕುಂಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.ರೈತರು, ಕೃಷಿ ಕಾರ್ಮಿಕರು, ವಕೀಲರ ಸಂಘದ ಸದಸ್ಯರು, ಪ್ರಗತಿಪರ ದಲಿತ ಸಂಘಟನೆಗಳ ಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದ ಜನ ಹಾಗೂ ವಾಹನ ಸಂಚಾರಕ್ಕೆ ಕೆಲಕಾಲ ತೀವ್ರ ಅಡಚಣೆ ಉಂಟಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತೆ ಕೈಗೊಳ್ಳಲಾಗಿತ್ತು.

ಸಚಿವ ಜಾರಕಿಹೊಳಿಗೆ ಕಪ್ಪು ಭಾವುಟ ಪ್ರದರ್ಶನದ ಎಚ್ಚರಿಕೆಯಮಕನಮರಡಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ಸತೀಶ ಜಾರಕಿಹೊಳಿ ಅವರು ಹುಕ್ಕೇರಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಲ್ಲಿ ವಿಫಲರಾಗಿದ್ದು, ಸಚಿವರು ತಾಲೂಕಿನಲ್ಲಿ ನಡೆಯುವ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದರೆ ಕಪ್ಪು ಭಾವುಟ ಪ್ರದರ್ಶಿಸಿ ವಿರೋಧಿಸಲಾಗುವುದು ಎಂದು ಎಚ್ಚರಿಸಿದರು.

ಹುಕ್ಕೇರಿ ತಾಲೂಕಿನ ರೈತರ ವಾಸ್ತವ ಪರಿಸ್ಥಿತಿ ಅವಲೋಕಿಸಿ ಕೂಡಲೇ ಬರ ಘೋಷಿಸಬೇಕು. ಬರಗಾಲದಲ್ಲಿ ರೈತರಿಗೆ ನೆರವಾಗಬೇಕಾದ ಸರ್ಕಾರ ಈ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಜನರ ಆಕ್ರೋಶಕ್ಕೆ ಗುರಿಯಾಗಲಿದೆ. ಹುಕ್ಕೇರಿಯನ್ನು ತಕ್ಷಣ ಬರಪೀಡಿತ ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕುರ್ಚಿ ಬಿಟ್ಟು ಕೆಳಗಿಳಿಯಬೇಕು.

-ರಮೇಶ ಕತ್ತಿ, ಮಾಜಿ ಸಂಸದ