ಚುನಾವಣಾ ಅಪಪ್ರಚಾರ ಮೇಲೆ ಕೃತಕ ಬುದ್ಧಿಮತ್ತೆ ನಿಗಾ

KannadaprabhaNewsNetwork | Updated : Mar 17 2024, 08:12 AM IST

ಸಾರಾಂಶ

ಇದಕ್ಕಾಗಿ ಗೂಗಲ್‌ ಜತೆ ಚುನಾವಣಾ ಆಯೋಗ ಒಪ್ಪಂದ ಮಾಡಿಕೊಂಡಿದ್ದು, ಚುನಾವಣೆ ವೇಳೆಯ ಭಾರಿ ಯುಪಿಐ ವಹಿವಾಟು ಮೇಲೂ ಕಣ್ಣು ಇಡಲಾಗುತ್ತದೆ.

ನವದೆಹಲಿ: ಮುಕ್ತ ಹಾಗೂ ಪಾರದರ್ಶಕ ಲೋಕಸಭಾ ಚುನಾವಣೆಗಾಗಿ ಇದೇ ಮೊದಲ ಬಾರಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಚುನಾವಣಾ ಆಯೋಗ ನಿರ್ಧರಿಸಿದೆ. 

ಇದಕ್ಕಾಗಿ ಗೂಗಲ್‌ ಜತೆ ಆಯೋಗ ಒಪ್ಪಂದ ಮಾಡಿಕೊಂಡಿದೆ. ಇದಲ್ಲದೆ ನಗದು ವ್ಯವಹಾರ ಮಾತ್ರವಲ್ಲ, ಭಾರಿ ಪ್ರಮಾಣದ ಯುಪಿಐ ಹಣದ ವಹಿವಾಟು ಹಾಗೂ ಬ್ಯಾಂಕ್‌ ವಹಿವಾಟು ಮೇಲೂ ಕಣ್ಣಿಡಲಿದೆ.

‘ಸುಗಮ ಚುನಾವಣೆಗಾಗಿ ಕೃತಕ ಬುದ್ಧಿಮತ್ತೆಯನ್ನು ಆಯೋಗ ಬಳಸಲು ನಿರ್ಧರಿಸಿದೆ. ಇದಕ್ಕಾಗಿ ಪ್ರತ್ಯೇಕ ಎಐ ವಿಭಾಗವನ್ನೇ ಚುನಾವಣಾ ಆಯೋಗದಡಿ ತೆರೆಯಲಾಗುತ್ತದೆ. 

ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಕಟವಾಗುವ ತಪ್ಪು ಮಾಹಿತಿಗಳನ್ನು ಪತ್ತೆ ಹಚ್ಚಿ, ಅದನ್ನು ತೆಗೆದುಹಾಕುವ ಕೆಲಸವನ್ನು ಈ ಎಐ ವಿಭಾಗ ಮಾಡಲಿದೆ’ ಎಂದು ಆಯೋಗ ಹೇಳಿದೆ.

ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಭಾಷಣವನ್ನು ತೆಗೆದುಹಾಕುವ ಪ್ರಕ್ರಿಯೆ ಅತ್ಯಂತ ವೇಗವಾಗಿರಲಿದೆ. 

ಒಂದು ವೇಳೆ, ಅಭ್ಯರ್ಥಿಗಳು ಪದೇ ಪದೇ ನಿಯಮ ಉಲ್ಲಂಘಿಸಿದರೆ ಅವರ ಸಾಮಾಜಿಕ ಜಾಲತಾಣಗಳ ಖಾತೆಯನ್ನೇ ಅಮಾನತು ಅಥವಾ ಬ್ಲಾಕ್‌ ಮಾಡುವಂತಹ ಕಠಿಣ ಕ್ರಮಕ್ಕೂ ಆಯೋಗ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.

ಯುಪಿಐ ಮೇಲೂ ನಿಗಾ: ಇತ್ತೀಚೆಗೆ ಅಭ್ಯರ್ಥಿಗಳು ನೇರವಾಗಿ ನಗದು ಹಂಚುವುದನ್ನು ಬಿಟ್ಟು, ಹೊಸ ತಂತ್ರಜ್ಞಾನವಾದ ಯುಪಿಐ ಮೂಲಕ ಮತದಾರರಿಗೆ ಹಣ ಕಳಿಸಿ ಆಮಿಷ ಒಡ್ಡುವುದು ಕಂಡು ಬಂದಿದೆ. 

ಹೀಗಾಗಿ ವ್ಯಕ್ತಿಗಳು ಭಾರಿ ಪ್ರಮಾಣದಲ್ಲಿ ಯುಪಿಐ ಮತ್ತು ಇಂಟರ್ನೆಟ್‌ ಬ್ಯಾಂಕಿಂಗ್‌ ವಹಿವಾಟು ನಡೆಸುವ ಮೇಲೆ ಆಯೋಗ ನಿಗಾ ವಹಿಲಸಲಿದೆ.

Share this article