ಅತ್ಯಂತ ಅಚ್ಚರಿಯ ಹಾಗೂ ಆಘಾತಕಾರಿ ವಿದ್ಯಮಾನವೊಂದರಲ್ಲಿ ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನ ಉಳಿದಿರುವಾಗ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.
ನವದೆಹಲಿ: ಅತ್ಯಂತ ಅಚ್ಚರಿಯ ಹಾಗೂ ಆಘಾತಕಾರಿ ವಿದ್ಯಮಾನವೊಂದರಲ್ಲಿ ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನ ಉಳಿದಿರುವಾಗ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ.
ಭಾರತದ ಚುನಾವಣಾ ಆಯೋಗವು 3 ಸದಸ್ಯರ ಆಯೋಗವಾಗಿದ್ದು, ಮುಖ್ಯ ಆಯುಕ್ತ ಹಾಗೂ ಇತರ ಇಬ್ಬರು ಆಯುಕ್ತರು ಇರುತ್ತಾರೆ. ಈಗಾಗಲೇ ಆಯೋಗದಲ್ಲಿ 1 ಆಯುಕ್ತರ ಹುದ್ದೆ ಖಾಲಿ ಇತ್ತು.
ಈಗ ಗೋಯೆಲ್ ರಾಜೀನಾಮೆಯೊಂದಿಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತ್ರ ಆಯೋಗದಲ್ಲಿ ಉಳಿದುಕೊಂಡಿದ್ದಾರೆ. ಗೋಯೆಲ್ ರಾಜೀನಾಮೆಗೆ ಕಾರಣ ತಿಳಿದುಬಂದಿಲ್ಲ. 2027ರವರೆಗೆ ಇವರ ಅವಧಿ ಇತ್ತು.
ಒಬ್ಬರಿಂದಲೇ ಘೋಷಣೆ?
ಈ ಹಿಂದೆ 1999 ಹಾಗೂ 2009ರಲ್ಲಿ ಕೇವಲ ಮುಖ್ಯ ಆಯುಕ್ತ ಸೇರಿ ಇಬ್ಬರು ಆಯುಕ್ತರು ಚುನಾವಣೆ ಘೋಷಿಸಿದ್ದರು. ಈ ಸಲ 2 ಆಯುಕ್ತ ಹುದ್ದೆಗಳೂ ಖಾಲಿ ಆಗಿರುವ ಕಾರಣ ಕೇವಲ ಒಬ್ಬರು ಆಯುಕ್ತರು ಚುನಾವಣೆ ಘೋಷಿಸುವರೇ ಎಂಬುದನ್ನು ಕಾದು ನೋಡಬೇಕಿದೆ.
ಒಬ್ಬರೇ ಆಯುಕ್ತರು ಲೋಕಸಭೆ ಚುನಾವಣೆ ಘೋಷಿಸಿದರೆ ಇದು ಇಂಥ ಮೊದಲ ವಿದ್ಯಮಾನವಾಗಲಿದೆ.ಅಲ್ಲದೆ , ಗೋಯೆಲ್ ಅವರ ರಾಜೀನಾಮೆಯು ಚುನಾವಣೆ ದಿನಾಂಕ ಘೋಷಣೆಯ ಪರಿಣಾಮ ಬೀರುತ್ತದೆಯೇ ಎಂದು ನೋಡಬೇಕಿದೆ.
ಇದಲ್ಲದೆ ಅಷ್ಟರೊಳಗೆ ಪ್ರಧಾನಿ ನೇತೃತ್ವದ ಚುನಾವಣಾ ಆಯುಕ್ತರ ನೇಮಕ ಸಮಿತಿ ಸಭೆ ಸೇರಿ ಹೊಸ ಆಯುಕ್ತರ ಹೆಸರು ಶಿಫಾರಸು ಮಾಡಲಿದೆಯೇ ಎಂಬುದೂ ಪ್ರಶ್ನೆಯಾಗಿದೆ.
ಈ ಹಿಂದೆ ಟಿ.ಎನ್. ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಆಯೋಗ ಏಕಸದಸ್ಯ ಆಯೋಗವಾಗಿತ್ತು. ನಂತರ ಕಾಯ್ದೆಯನ್ನು ಬದಲಿಸಿ ಒಬ್ಬ ಮುಖ್ಯ ಚುನಾವಣಾ ಆಯುಕ್ತರ ಜತೆ, ಅವರ ಅಧೀನದಲ್ಲಿ ಕೆಲಸ ಮಾಡಲು ಇನ್ನೆರಡು ಆಯುಕ್ತರ ಹುದ್ದೆ ಸೃಷ್ಟಿಸಲಾಗಿತ್ತು.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು: ಗೋಯೆಲ್, 1985-ಬ್ಯಾಚ್ ಐಎಎಸ್ ಅಧಿಕಾರಿ. ನವೆಂಬರ್ 18, 2022 ರಂದು ಸ್ವಯಂ ನಿವೃತ್ತಿ ಪಡೆದು ಮತ್ತು ಒಂದು ದಿನದ ನಂತರ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು.
ಅವರ ನೇಮಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ನೇಮಕಕ್ಕೆ ಅಷ್ಟು ಆತುರ ಏಕೆ ಎಂದು ಕೋರ್ಟ್ ಕೂಡ ಪ್ರಶ್ನಿಸಿತ್ತು.