ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಶೇ.80ರಷ್ಟು ಸ್ಥಾನಗಳನ್ನು ‘ಮಹಾಯುತಿ’ ಬಾಚಿಕೊಂಡ ಬೆನ್ನಲ್ಲೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಲವು ದಿನಗಳಿಂದ ಬಾಕಿ ಇರುವ ಸುಧಾರಣೆ ಪ್ರಕ್ರಿಯೆಗಳಿಗೆ ಕೈಹಾಕುವ ಸಾಧ್ಯತೆ ಇದೆ. ಏಕರೂಪ ನಾಗರಿಕ ಸಂಹಿತೆ, ‘ಒಂದು ದೇಶ ಒಂದು ಚುನಾವಣೆ’ಯಂತಹ ಮಹತ್ವಾಕಾಂಕ್ಷಿ ಸುಧಾರಣೆಗಳಿಗೆ ಚಾಲನೆ ನೀಡುವ ನಿರೀಕ್ಷೆ ಇದೆ.
ಇದಕ್ಕೆ ಇಂಬು ನೀಡುವಂತೆ, ಶನಿವಾರ ರಾತ್ರಿ ಮಾಡಿದ ವಿಜಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಹಿಂದುತ್ವ ಹಾಗೂ ಪರಂಪರೆ ಆಧರಿತ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.
ಈಗಾಗಲೇ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯಭೇರಿ ಬಾರಿಸಿರುವ ಬಿಜೆಪಿ, ಇದೀಗ ಮಹಾರಾಷ್ಟ್ರ ಚುನಾವಣೆಯಲ್ಲಿ ತನ್ನ ಜೈತ್ರಯಾತ್ರೆ ಮುಂದುವರಿಸಿದೆ. ಈ ಎರಡೂ ರಾಜ್ಯಗಳ ಗೆಲುವು ಒಂದು ದೇಶ ಒಂದು ಚುನಾವಣೆ ಜಾರಿಗೆ ಬಿಜೆಪಿಯ ಹಾದಿಯನ್ನು ಸುಗಮಗೊಳಿಸಿವೆ. ಹಾಗೆಯೇ ಏಕರೂಪ ನಾಗರಿಕ ಸಂಹಿತೆ ಜಾರಿಗೂ ಈ ಜಯದಿಂದ ಬಿಜೆಪಿಗೆ ಉತ್ಸಾಹ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.
ಇದರ ಜತೆಗೆ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ.100ಕ್ಕೆ ಹೆಚ್ಚಳಕ್ಕೂ ಕೇಂದ್ರ ಸರ್ಕಾರ ಮುಂದಾಗುವ ನಿರೀಕ್ಷೆ ಇದೆ.
ಮಹಾರಾಷ್ಟ್ರ: 75 ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ಗೆ 10ರಲ್ಲಿ ಜಯ!
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ 75 ಸ್ಥಾನಗಳಲ್ಲಿ ಮುಖಾಮುಖಿಯಾದ ಕಾಂಗ್ರೆಸ್, ಅವುಗಳ ಪೈಕಿ ಕೇವಲ 10 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಶಕ್ತವಾಗಿದೆ. ಈ ಮೂಲಕ ಬಿಜೆಪಿ ವಿರುದ್ಧ ಹೀನಾಯ ಸೋಲು ಕಂಡಿದೆ.288 ಸ್ಥಾನಗಳ ಪೈಕಿ 149 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಿದರೆ, ಕಾಂಗ್ರೆಸ್ 101 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಇದರಲ್ಲಿ ಶೇ.27ರಷ್ಟು ಮತಗಳು ಬಿಜೆಪಿ ಪರವಾಗಿದ್ದರೆ, ಕಾಂಗ್ರೆಸ್ ಕೇವಲ ಶೇ.12ರಷ್ಟು ಮತಗಳನ್ನು ಸೆಳೆಯಿತು. ಇದರರ್ಥ, ತಾನು ಸ್ಪರ್ಧಿಸಿದ ಕ್ಷೇತ್ರಗಳಲ್ಲಿ ಶೇ.51.5ನ್ನು ಬಿಜೆಪಿ ಗೆದ್ದರೆ, ಕಾಂಗ್ರೆಸ್ ಕೇವಲ ಶೇ.34.7ರಷ್ಟರಲ್ಲಿ ವಿಜಯಿಯಾಯಿತು.
2019ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿತ್ತು, ಜೊತೆಗೆ ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ 17 ಸ್ಥಾನ ಪಡೆದಿತ್ತು.
ಮಹಾರಾಷ್ಟ್ರದಲ್ಲಿ ಏನಾಯ್ತು ಎಂದೇ ಅರ್ಥ ಆಗ್ತಿಲ್ಲ: ಕಾಂಗ್ರೆಸ್
ನವದೆಹಲಿ: ಮಹಾರಾಷ್ಟ್ರದಲ್ಲಿ ಅನಿರೀಕ್ಷಿತವಾಗಿ ಅತ್ಯಂತ ಘೋರ ಪರಾಭವ ಕಂಡ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ವಿಕ್ಷ ಕೂಟವಾದ ಮಹಾ ವಿಕಾಸ ಅಘಾಡಿ (ಎಂವಿಎ) ಕೇವಲ 46 ಸೀಟು ಗೆದ್ದಿದೆ. ಇದು ವಿಪಕ್ಷದ ಸರ್ವಾಧಿಕ ಕಳಪೆಯಾಗಿದೆ. ಈ ಬಗ್ಗೆ ಮಾತನಾಡಿದ ವೇಣು, ‘ಇದು ಆಘಾತಕಾರಿ ಫಲಿತಾಂಶ. ನಂಬಲು ಆಗುತ್ತಿಲ್ಲ. ಏನಾಯ್ತು ಎಂಬುದೇ ಅರ್ಥ ಆಗುತ್ತಿಲ್ಲ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದರು.‘ಮಹಾರಾಷ್ಟ್ರ ಹಾಗೂ ಹರ್ಯಾಣ ಫಲಿತಾಂಶ ಅಚ್ಚರಿ ಮೂಡಿಸಿವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಭದ್ರಕೋಟೆ, ಶರದ್ ಪವಾರ್ ಹಾಗೂ ಠಾಕ್ರೆ ಭದ್ರಕೋಟೆಗಳಲ್ಲೇ ಎಂವಿಎ ಸೋತಿದೆ. ಇದು ಕಾಂಗ್ರೆಸ್ ಪಕ್ಷದ ಹಿನ್ನಡೆ ಮಾತ್ರವಲ್ಲ. ಇಡೀ ಕೂಟದ ಹಿನ್ನಡೆ’ ಎಂದರು.