4 ಬಾರಿ ಮೇಘಾಲಯ ಸಿಎಂ ಆಗಿದ್ದ ಡಿ.ಡಿ. ಲಪಾಂಗ್‌ ನಿಧನ

KannadaprabhaNewsNetwork |  
Published : Sep 14, 2025, 01:04 AM IST
ಡಿ.ಡಿ. ಲಪಾಂಗ್‌ | Kannada Prabha

ಸಾರಾಂಶ

ಮುತ್ಸದ್ಧಿ ರಾಜಕಾರಣಿ ಮತ್ತು ಮಾಹೇ ಎಂದೇ ಎಲ್ಲರಿಂದಲೂ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ 4 ಸಲದ ಮೇಘಾಲಯ ಮುಖ್ಯಮಂತ್ರಿ ಡೊನ್ವಾ ಡೆತ್ವೆಲ್ಸನ್ ಲಪಾಂಗ್‌ (ಡಿ.ಡಿ. ಲಪಾಂಗ್‌) ಇಲ್ಲಿಯ ಆಸ್ಪತ್ರೆಯಲ್ಲಿ ನಿಧನರಾದರು.

ಶಿಲ್ಲಾಂಗ್‌: ಮುತ್ಸದ್ಧಿ ರಾಜಕಾರಣಿ ಮತ್ತು ಮಾಹೇ ಎಂದೇ ಎಲ್ಲರಿಂದಲೂ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ 4 ಸಲದ ಮೇಘಾಲಯ ಮುಖ್ಯಮಂತ್ರಿ ಡೊನ್ವಾ ಡೆತ್ವೆಲ್ಸನ್ ಲಪಾಂಗ್‌ (ಡಿ.ಡಿ. ಲಪಾಂಗ್‌) ಇಲ್ಲಿಯ ಆಸ್ಪತ್ರೆಯಲ್ಲಿ ನಿಧನರಾದರು.

93 ವರ್ಷದ ಅವರಿಗೆ ಪತ್ನಿ ಅಮೆಥಿಸ್ಟ್ ಲಿಂಡಾ ಜೋನ್ಸ್ ಬ್ಲಾ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಮೇಘಾಲಯ ಸರ್ಕಾರ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಮಾಜಿ ಮುಖ್ಯಮಂತ್ರಿ ಅಂತ್ಯಕ್ರಿಯೆ ನೆರವೇರಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೀರ್ಘಾವಧಿಯಿದ ಲಫಾಂಗ್‌ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಜೀವನದ ಸಂಧ್ಯಾಕಾಲದಲ್ಲಿ ವಿನ್ಸೆಂಟ್ ಆಸ್ಪತ್ರೆಗೆ ದಾಖಲಾಗಿದ್ದರು.

ದೆಹಲಿಯ ತಾಜ್‌ ಹೋಟೆಲ್‌, ಮ್ಯಾಕ್ಸ್‌ ಆಸ್ಪತ್ರೆಗೆ ಬಾಂಬ್ ಬೆದರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಾಂಬ್ ಬೆದರಿಕೆ ಘಟನೆ ಮುಂದುವರೆದಿದ್ದು, ಇಲ್ಲಿನ ಪ್ರತಿಷ್ಠಿತ ತಾಜ್‌ ಪ್ಯಾಲೇಸ್‌ ಹೋಟೆಲ್‌ ಹಾಗೂ 2 ಮ್ಯಾಕ್ಸ್‌ ಆಸ್ಪತ್ರೆಗಳಿಗೆ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ತಪಾಸಣೆ ಬಳಿ ಇವು ಹುಸಿ ಸಂದೇಶ ಎನ್ನುವುದು ಬಯಲಾಗಿದೆ.ಶನಿವಾರ ಇ- ಮೇಲ್‌ ಮೂಲಕ ಬಂದ ಬೆದರಿಕೆಯಿಂದಾಗಿ ಆತಂಕಗೊಂಡ ಹೋಟೆಲ್‌ ಹಾಗೂ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಬಳಿಕ ಪೊಲೀಸರು, ಬಾಂಬ್‌ ನಿಷ್ಕ್ರೀಯ ದಳ, ಶ್ವಾನ ದಳ ಮತ್ತು ತ್ವರಿತ ಪ್ರತಿಕ್ರಿಯೆ ತಂಡ ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಈ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಶುಕ್ರವಾರವಷ್ಟೇ ದೆಹಲಿಯ ಹೈಕೋರ್ಟ್‌ಗೆ ಇ- ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು.

ಮ್ಯಾನ್ಮಾರ್‌ ಶಾಲೆಗೆ ಸೇನೆ ಬಾಂಬ್‌: ಮಲಗಿದ್ದ19 ಮಕ್ಕಳು ಸಾವು

ನವದೆಹಲಿ: ನೇಪಾಳದ ಬಳಿಕ ಮ್ಯಾನ್ಮಾರ್‌ನಲ್ಲಿಯೂ ಇದೀಗ ಆಂತರಿಕ ಸಂಘರ್ಷ ಭುಗಿಲೆದ್ದಿದ್ದು, ದೇಶದ ಮಿಲಿಟರಿ ಜುಂಟಾ ಪಡೆಯು ರಖೈನ್‌ ರಾಜ್ಯದ 2 ಶಾಲೆಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ 19 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.ಸ್ಥಳೀಯ ಮಾಧ್ಯಮಗಳ ಪ್ರಕಾರ, ವಿದ್ಯಾರ್ಥಿಗಳು ಮಲಗಿದ್ದಾಗ ಜುಂಟಾ ಯುದ್ಧ ವಿಮಾನವು ಶಾಲೆಯ ಮೇಲೆ 500 ಪೌಂಡ್‌ ತೂಕದ ಎರಡು ಬಾಂಬ್‌ಗಳನ್ನು ಹಾಕಿದೆ.

ಜನಾಂಗೀಯ ಸಶಸ್ತ್ರ ಗುಂಪು ಅರಕನ್‌ ಆರ್ಮಿ (ಎಎ) ಹೇಳಿಕೆ ಪ್ರಕಾರ, ‘ಕ್ಯುಕ್ತಾವ್‌ ಟೌನ್‌ಶಿಪ್‌ನಲ್ಲಿರುವ 2 ಖಾಸಗಿ ಪ್ರೌಢಶಾಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ. ಇದರಲ್ಲಿ 19 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 15- 21 ವರ್ಷ ವಯಸ್ಸಿನವರು. ಈ ದಾಳಿಯಲ್ಲಿ 22 ಮಂದಿ ಗಾಯಗೊಂಡಿದ್ದಾರೆ’ ಎಂದಿದೆ.

ಎನ್‌ಐಎಯಿಂದ ಬಿಹಾರ ಪಿಎಫ್‌ಐ ಅಧ್ಯಕ್ಷ ನದ್ವಿ ಬಂಧನ

ನವದೆಹಲಿ: 2022ರ ಫುಲ್ವಾರಿ ಷರೀಫ್‌ ಷಡ್ಯಂತ್ರ ಪ್ರಕರಣದಲ್ಲಿ ನಿಷೇಧಿತ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಬಿಹಾರ ಘಟಕದ ಅಧ್ಯಕ್ಷನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಬಂಧಿಸಿದೆ.ಬಿಹಾರದ ಕಟಿಹಾರ ಜಿಲ್ಲೆಯ ಹಸನ್‌ಗಂಜ್ ಪ್ರದೇಶದ ನಿವಾಸಿ ಮಹ್ಬೂಬ್ ಆಲಂ ಅಲಿಯಾಸ್ ಮಹ್ಬೂಬ್ ಆಲಂ ನದ್ವಿಯನ್ನು ಕಿಶನ್‌ಗಂಜ್‌ನಲ್ಲಿ ಬಂಧಿಸಲಾಗಿದೆ. ಈತ ಪ್ರಕರಣದ ಆರೋಪಪಟ್ಟಿಯಲ್ಲಿ ಹೆಸರಿಸಲಾದ 19ನೇ ಆರೋಪಿ ಎಂದು ಎನ್‌ಐಎ ತಿಳಿಸಿದೆ.2047ರ ವೇಳೆಗೆ ಭಾರತವನ್ನು ಸಂಪೂರ್ಣ ಇಸ್ಲಾಮೀಕರಣಗೊಳಿಸುವ ಉದ್ದೇಶದಿಂದ ಪಿಎಫ್‌ಐ ಸದಸ್ಯರು ಕೆಲಸ ಮಾಡುತ್ತಿದ್ದರು. ಧರ್ಮಗಳ ನಡುವೆ ಶತ್ರುತ್ವ ಬಿತ್ತುವುದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವುದು ಮತ್ತು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಎನ್‌ಐಎ ಹೇಳಿದೆ.

ಲಿಫ್ಟ್‌ಗೆ ಕೂದಲು ಸಿಲುಕಿ ಮಹಿಳೆ ದಾರುಣ ಸಾವು

ತಿರುಚ್ಚಿ: ಸಾವು ಯಾವ ಗಳಿಗೆಯಲ್ಲಾದರೂ ಬಂದು ವಕ್ಕರಿಸಬಹುದು ಎನ್ನುವುದು ಈ ಘಟನೆಗೆ ಸಾಕ್ಷಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 52 ವರ್ಷದ ಮಹಿಳೆ ಕೂದಲು ಲಿಫ್ಟ್‌ನಲ್ಲಿ ಸಿಲುಕಿದ ಪರಿಣಾಮ ಡಿಕ್ಕಿಯ ರಭಸಕ್ಕೆ ಆಕೆಯ ತಲೆ ಪುಡಿಪುಡಿಯಾಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ.ಇಲ್ಲಿನ ಗಾಂಧಿ ಮಾರುಕಟ್ಟೆಯ ವಾಣಿಜ್ಯ ಸಂಕೀರ್ಣದಲ್ಲಿನ ಅಂಗಡಿಯಲ್ಲಿ ತೆನ್ನೂರಿನ ಡಿ. ಸುಮತಿ ಕೆಲಸದಲ್ಲಿದ್ದರು. 3ನೇ ಮಹಡಿಗೆ ಹೋಗಲು ಸರ್ವೀಸ್‌ ಲಿಫ್ಟ್ ಬಳಸಿದ್ದಾರೆ. ಆಗ ಆಕೆಯ ಕೂದಲು ಲಿಫ್ಟ್‌ನಲ್ಲಿ ಸಿಲುಕಿಕೊಂಡಿತ್ತು. ಬಳಿಕ ಲಿಫ್ಟ್‌ ಬಾಗಿಲು ಮುಚ್ಚಿದೆ. ಈ ವೇಳೆ ರಭಸದ ಹೊಡೆತಕ್ಕೆ ಆಕೆಯ ತಲೆ ಜಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮನೆಮನೆಗೆ ಆಯುರ್ವೇದ ಅಗತ್ಯ : ಸಚ್ಚಿದಾನಂದ ಶ್ರೀ
ಆಪರೇಷನ್‌ ಸಿಂದೂರ ವೇಳೆ ಸೈನಿಕರಿಗೆ ಚಹಾ ಕೊಟ್ಟಿದ್ದ ಬಾಲಕಗೆ ಬಾಲ ಪುರಸ್ಕಾರ