ಲಾತೂರ್ : ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ (90) ಶುಕ್ರವಾರ ಬೆಳಿಗ್ಗೆ ಮಹಾರಾಷ್ಟ್ರದ ತಮ್ಮ ಹುಟ್ಟೂರು ಮಹಾರಾಷ್ಟ್ರದ ಲಾತೂರ್‌ನಲ್ಲಿ ನಿಧನರಾದರು.ಅಲ್ಪಕಾಲದಿಂದ ಅವರು ಅನಾರೋಗ್ಯಪೀಡಿತರಾಗಿದ್ದರು ಹಾಗೂ ಅವರ ನಿವಾಸದಲ್ಲೇ ನಿಧನರಾದರು. ಮಗ ಶೈಲೇಶ್ ಪಾಟೀಲ್, ಸೊಸೆ ಬಿಜೆಪಿ ನಾಯಕಿ ಅರ್ಚನಾ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ. ಅಂತ್ಯಕ್ರಿಯೆ ಶನಿವಾರ ನಡೆಯಲಿದೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರು ಆದಿಯಾಗಿ ಪಕ್ಷಾತೀತವಾಗಿ ಗಣ್ಯರು ಕಂಬನಿ ಮಿಡಿದಿದ್ದಾರೆ.ಸ್ಪೀಕರ್, ಗೃಹ ಸಚಿವ:
1935ರ ಅಕ್ಟೋಬರ್ 12ರಂದು ಜನಿಸಿದ ಪಾಟೀಲ್, ಕಾಂಗ್ರೆಸ್ ಕಟ್ಟಾಳುವಾಗಿದ್ದರು. ಲಾತೂರ್ ಪುರಸಭೆ ಮುಖ್ಯಸ್ಥರಾಗಿ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು ಮತ್ತು 70 ರ ದಶಕದ ಆರಂಭದಲ್ಲಿ ಶಾಸಕರಾಗಿ ಆಯ್ಕೆಯಾದರು. ನಂತರ, ಅವರು ಲಾತೂರ್ ಲೋಕಸಭಾ ಸ್ಥಾನವನ್ನು 7 ಬಾರಿ ಗೆದ್ದಿದ್ದರು.2004ರಿಂದ 2008ರವರೆಗೆ ಕೇಂದ್ರ ಗೃಹ ಸಚಿವರಾಗಿದ್ದರು ಮತ್ತು 1991ರಿಂದ 1996ರವರೆಗೆ ಲೋಕಸಭೆಯ 10 ನೇ ಸ್ಪೀಕರ್ ಆಗಿದ್ದರು. ಪಂಜಾಬ್ ರಾಜ್ಯಪಾಲರಾಗಿ, 2010ರಿಂದ 2015 ರವರೆಗೆ ಕೇಂದ್ರಾಡಳಿತ ಪ್ರದೇಶದ ಚಂಡೀಗಢದ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
26/11 ಮುಂಬೈ ದಾಳಿಯ ರಾತ್ರಿಯಂದು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ 3 ವಿಭಿನ್ನ ಸೂಟ್‌ಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಪಾಟೀಲ್ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾ, ‘ಜನರು ಬಟ್ಟೆಗಳನ್ನಲ್ಲ, ನೀತಿಯನ್ನು ಟೀಕಿಸಬೇಕು’ ಎಂದು ಹೇಳಿದ್ದರು.ಇನ್ನು 2022ರಲ್ಲಿ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಅವರು, ‘ಜಿಹಾದ್ ಪರಿಕಲ್ಪನೆಯು ಇಸ್ಲಾಂನಲ್ಲಿ ಮಾತ್ರವಲ್ಲದೆ ಭಗವದ್ಗೀತೆ ಮತ್ತು ಕ್ರಿಶ್ಚಿಯನ್ ಧರ್ಮದಲ್ಲೂ ಇದೆ’ ಎಂದು ಹೇಳಿ ವಿವಾದ ಬಡಿದೆಬ್ಬಿಸಿದ್ದರು.