ತೆಲಂಗಾಣ ಮಾಜಿ ಸಿಎಂ ರಾವ್‌ ಪುತ್ರಿ ಸೆರೆ

KannadaprabhaNewsNetwork |  
Published : Mar 16, 2024, 01:48 AM ISTUpdated : Mar 16, 2024, 07:51 AM IST
ಕವಿತಾ ಬಂಧನ | Kannada Prabha

ಸಾರಾಂಶ

ಪ್ರಸಕ್ತ ರದ್ದಾಗಿರುವ ದೆಹಲಿಯ ವಿವಾದಿತ ಲಿಕ್ಕರ್‌ ಲೈಸೆನ್ಸ್‌ ಹಗರಣ ಸಂಬಂಧ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ಪುತ್ರಿ, ಶಾಸಕಿ ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಹೈದ್ರಾಬಾದ್‌/ ನವದೆಹಲಿ: ಪ್ರಸಕ್ತ ರದ್ದಾಗಿರುವ ದೆಹಲಿಯ ವಿವಾದಿತ ಲಿಕ್ಕರ್‌ ಲೈಸೆನ್ಸ್‌ ಹಗರಣ ಸಂಬಂಧ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್‌ ರಾವ್‌ ಪುತ್ರಿ, ಶಾಸಕಿ ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ಇದರೊಂದಿಗೆ ಈ ಪ್ರಕರಣ ದೆಹಲಿಯ ಸಚಿವರಾದ ಮನೀಶ್‌ ಸಿಸೋಡಿಯಾ, ಸಂಜಯ್‌ ಸಿಂಗ್‌ ಬಳಿಕ ಮತ್ತೊಬ್ಬ ಪ್ರಮುಖ ರಾಜಕೀಯ ವ್ಯಕ್ತಿಯ ಬಂಧನವಾದಂತೆ ಆಗಿದೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲು ಕಂಡಿದ್ದ ರಾವ್‌ ನೇತೃತ್ವದ ಭಾರತ್‌ ರಾಷ್ಟ್ರ ಸಮಿತಿ ಪಕ್ಷಕ್ಕೆ ಈ ಬೆಳವಣಿಗೆ ಭಾರೀ ಶಾಕ್‌ ನೀಡಿದೆ.

ಅಲ್ಲದೆ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನಾ ದಿನ ನಡೆದ ಘಟನೆ ಪಕ್ಷದ ಕಾರ್ಯಕರ್ತರ ಅತ್ಮಸ್ಥೈಯಕ್ಕೂ ಭಾರೀ ಹೊಡೆತ ನೀಡಲಿದೆ ಎನ್ನಲಾಗಿದೆ. ಈ ನಡುವೆ ಬಂಧನ ಖಂಡಿಸಿ ಶನಿವಾರ ರಾಜ್ಯವ್ಯಾಪಿ ಪ್ರತಿಭಟನೆಗೆ ಬಿಆರ್‌ಎಸ್‌ ಕರೆ ನೀಡಿದೆ.

ಬಂಧನ: ಇದೇ ಪ್ರಕರಣ ಸಂಬಂಧ ಕಳೆದ ವರ್ಷ ಮೂರು ಕವಿತಾರನ್ನು ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈ ವರ್ಷ ಮತ್ತೆ ಅವರಿಗೆ ಸಮನ್ಸ್‌ ನೀಡಲಾಗಿತ್ತಾದರೂ ಅವರು ಗೈರಾಗಿದ್ದರು. 

ಅದರ ಬೆನ್ನಲ್ಲೇ ಶುಕ್ರವಾರ ಹೈದ್ರಾಬಾದ್‌ನಲ್ಲಿರುವ ಕವಿತಾ ನಿವಾಸದ ಮೇಲೆ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು, ಹಲವು ಗಂಟೆಗಳ ಪರಿಶೀಲನೆ ಬಳಿಕ ಸಂಜೆ 5.20ಕ್ಕೆ ಮಾಜಿ ಸಂಸದೆ, ಹಾಲಿ ಶಾಸಕಿಯನ್ನು ಬಂಧಿಸಿದರು. ಬಳಿಕ ರಾತ್ರಿಯೇ ವಿಮಾನದಲ್ಲಿ ಅವರನ್ನು ದೆಹಲಿಗೆ ಕರೆದೊಯ್ಯಲಾಯಿತು.

ಮುಂದೇನು?
ಇದೇ ಪ್ರಕರಣದಲ್ಲಿ ಬಂಧಿತನ ಆಪ್‌ ಸಚಿವರು, ಮಧ್ಯವರ್ತಿಗಳು ಮತ್ತು ಸಾಕ್ಷಿಗಳ ಜೊತೆ ಮುಖಾಮುಖಿ ಕವಿತಾರನ್ನು ಕೂರಿಸಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿಶನ್‌ ರೆಡ್ಡಿ, ‘ತನ್ನ ತನಿಖೆಯ ಭಾಗವಾಗಿ ಇ.ಡಿ. ಕವಿತಾರನ್ನು ಬಂಧಿಸಿದೆ. ಮೇಲಾಗಿ ಅವರು ಪದೇ ಪದೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಅವರು ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದಾದಲ್ಲಿ ವಿಚಾರಣೆಗೆ ಹಾಜರಾಗಲು ಹೆದರಿಕೆ ಏಕೆ ಎಂದು ಪ್ರಶ್ನಿಸಿದ್ದಾರೆ.

ಏನಿದು ಹಗರಣ?
ದೆಹಲಿಯ ಅರವಿಂದ್‌ ಕೇಜ್ರಿವಾಲ್‌ ಸರ್ಕಾರ ದೆಹಲಿಯಲ್ಲಿ ಮದ್ಯದಂಗಡಿ ಲೈಸೆನ್ಸ್‌ ಹಂಚಿತ್ತು. ಇದರಲ್ಲಿ ದೊಡ್ಡ ಪಾಲು ಪಡೆಯಲು ದಕ್ಷಿಣ ಭಾರತದ ಹಲವು ಉದ್ಯಮಿಗಳು ’ಸೌತ್‌ ಗ್ರೂಪ್‌’ ಹೆಸರಲ್ಲಿ ಗುಂಪು ರಚಿಸಿಕೊಂಡಿದ್ದರು. 

ಇದರಲ್ಲಿ ಅರವಿಂದೋ ಫಾರ್ಮ್‌ನ ಶರತ್‌ ರೆಡ್ಡಿ, ವೈಎಸ್‌ಆರ್‌ ಕಾಂಗ್ರೆಸ್‌ ಸಂಸದ ಎಂ. ಶ್ರೀನಿವಾಸುಲು ರೆಡ್ಡಿ, ಅವರ ಪುತ್ರ ರಾಘವ್‌, ಕವಿತಾ ಮತ್ತಿತರು ಸದಸ್ಯರು. 

ಈ ತಂಡ ಲೈಸೆನ್ಸ್‌ ಪಡೆಯಲು ದೆಹಲಿ ಆಪ್‌ ನಾಯಕರೊಗೆ 100 ಕೋಟಿ ರು. ಲಂಚ ನೀಡಿತ್ತು. ಇದನ್ನು ವಿಜಯ್‌ ನಾಯರ್‌ ಎಂಬಾತ ಸ್ವೀಕರಿಸಿದ್ದ ಎಂಬುದು ಇ.ಡಿ.ವಾದ. 

ಪ್ರಕರಣ ನಡೆದಾಗ ಮನೀಶ್‌ ಸಿಸೋಡಿಯಾ ದೆಹಲಿಯ ಅಬಕಾರಿ ಸಚಿವರಾಗಿದ್ದರು. ಇದೇ ಪ್ರಕರಣದಲ್ಲಿ ಆಪ್‌ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರ ಬಂಧನವಾಗಿದೆ.

ದೆಹಲಿ ಸಿಎಂ ಕೇಜ್ರಿಗೂ ಸಂಕಷ್ಟ?
ಇದೇ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಕೂಡಾ ಆರೋಪಿ ಎಂದು ಇ.ಡಿ. ಆರೋಪಿಸಿದೆ. ಈ ಸಂಬಂಧ 9 ಬಾರಿ ಸಮನ್ಸ್‌ ನೀಡಿದ್ದರೂ ಅವರು ವಿಚಾರಣೆಗೆ ಕೇಜ್ರಿವಾಲ್‌ ಹಾಜರಾಗಿಲ್ಲ. 

ಈ ಬಗ್ಗೆಯೂ ಪ್ರತ್ಯೇಕ ಕೇಸು ದಾಖಲಾಗಿದೆ. ಹೀಗಾಗಿ ಈ ಪ್ರಕರಣ ದೆಹಲಿ ಸಿಎಂ ಪಾಲಿಗೂ ಸಂಕಷ್ಟ ತಂದರೂ ಅಚ್ಚರಿ ಇಲ್ಲ ಎನ್ನಲಾಗಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !