ಮಹಾರಾಷ್ಟ್ರ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ : ದೇವೇಂದ್ರ ಫಡ್ನವೀಸ್‌ ಹೊಸ ಬಾಸ್‌

KannadaprabhaNewsNetwork |  
Published : Dec 05, 2024, 12:31 AM ISTUpdated : Dec 05, 2024, 04:39 AM IST
ಮಹಾಯುತಿ ನಾಯಕರು | Kannada Prabha

ಸಾರಾಂಶ

ಮಹಾರಾಷ್ಟ್ರ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್‌ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್‌ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಂಬೈನ ಆಜಾದ್‌ ಮೈದಾನದಲ್ಲಿ ಗುರುವಾರ ಸಂಜೆ 5.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಫಡ್ನವೀಸ್‌ ಜತೆ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಪಕ್ಕಾ ಆಗಿದೆ. ನಿರ್ಗಮಿತ ಸಿಎಂ ಏಕನಾಥ್‌ ಶಿಂಧೆ ಕೂಡ ಡಿಸಿಎಂ ಆಗಬಹುದು ಎಂದು ಮೂಲಗಳು ಹೇಳಿವೆ. ಆದರೆ ಈ ಕುರಿತು ಶಿಂಧೆ ಬಣದಿಂದ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಫಡ್ನವೀಸ್‌ ಆಯ್ಕೆ:

ಬುಧವಾರ ಬೆಳಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಫಡ್ನವೀಸ್ (54) ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಳಿಕ ಫಡ್ನವೀಸ್‌, ಶಿಂಧೆ, ಪವಾರ್‌ ಹಾಗೂ ಇತರ ಮಹಾಯುತಿ ಒಕ್ಕೂಟದ ನಾಯಕರು ಬುಧವಾರ ಮಧ್ಯಾಹ್ನ 3.30 ಗಂಟೆಗೆ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಅಲ್ಲಿಗೆ ಸರ್ಕಾರ ರಚನೆ ಬಿಕ್ಕಟ್ಟು ಅಂತ್ಯಗೊಂಡಿತು.

ಫಡ್ನವೀಸ್‌ಗೆ ಅಭಿನಂದನೆ:

ಮುಂಬೈನ ವಿಧಾನ ಭವನದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ವೀಕ್ಷಕರಾಗಿ ಆಗಮಿಸಿದ್ದರು. ಫಡ್ನವೀಸ್ ಸರ್ವಾನುಮತದ ಆಯ್ಕೆ ಬಳಿಕ ಅವರನ್ನು ಎಲ್ಲರೂ ಅಭಿನಂದಿಸಿದರು.ಬಳಿಕ ಮಾತನಾಡಿದ ಫಡ್ನವೀಸ್‌, ‘ಪ್ರಧಾನಿ ಮೋದಿ ಅವರ ‘ಏಕ್ ಹೈ ತೋ ಸೇಫ್‌ ಹೈ’ ಮಂತ್ರದಿಂದ ನಮಗೆ ಗೆಲುವಾಗಿದೆ. ಆದರೆ ನನ್ನ ಮುಂದೆ ರಾಜ್ಯದ ಅಭಿವೃದ್ಧಿಯ ದೊಡ್ಡ ಗುರಿ ಇದೆ. ಅದನ್ನು ಈಡೇರಿಸುವ ಭರವಸೆ ಇದೆ’ ಎಂದು ಹೇಳಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಮಾಣ ವಚನಕ್ಕೆ ಭರದ ಸಿದ್ಧತೆ:

ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಗುರುವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಮೋದಿ, ಜೊತೆಗೆ ಸುಮಾರು 2,000 ವಿವಿಐಪಿಗಳು ಮತ್ತು 40,000 ಬೆಂಬಲಿಗರು ಭಾಗಿಯಾಗಲಿದ್ದಾರೆ.ಹಲವಾರು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ 19 ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.ನ.20 ರಂದು ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಯಶಸ್ಸನ್ನು ಸಾಧಿಸಿತ್ತು. ರಾಜ್ಯದ 288 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 132, ಅದರ ಮಿತ್ರಪಕ್ಷಗಳಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 57 ಮತ್ತು ಅಜಿತ್ ಪವಾರ್ ಅವರ ಎನ್‌ಸಿ 41 ಸ್ಥಾನ ಪಡೆದಿದ್ದವು. ಒಟ್ಟಾರೆ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟವು 230 ಸ್ಥಾನಗಳ ಬಹುಮತವನ್ನು ಹೊಂದಿದೆ.

ಪ್ರಧಾನಿ ಮೋದಿ ಅವರ ‘ಏಕ್ ಹೈ ತೋ ಸೇಫ್‌ ಹೈ’ ಮಂತ್ರದಿಂದ ನಮಗೆ ಗೆಲುವಾಗಿದೆ. ಆದರೆ ನನ್ನ ಮುಂದೆ ರಾಜ್ಯದ ಅಭಿವೃದ್ಧಿಯ ದೊಡ್ಡ ಗುರಿ ಇದೆ. ಅದನ್ನು ಈಡೇರಿಸುವ ಭರವಸೆ ಇದೆ.

ದೇವೇಂದ್ರ ಫಡ್ನವೀಸ್‌, ನಿಯೋಜಿತ ಸಿಎಂ

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ