ಸಿಎಂ ಸ್ಥಾನಕ್ಕೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಹೆಸರು ಪ್ರಸ್ತಾಪಿಸಿದ್ದೇ ನಾನು: ಶಿಂಧೆ

KannadaprabhaNewsNetwork |  
Published : Dec 05, 2024, 12:32 AM ISTUpdated : Dec 05, 2024, 04:38 AM IST
 ಫಡ್ನವೀಸ್ | Kannada Prabha

ಸಾರಾಂಶ

ಸಿಎಂ ಸ್ಥಾನಕ್ಕೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಹೆಸರು ಪ್ರಸ್ತಾಪಿಸಿದ್ದೇ ನಾನು’ ಎಂದು ನಿರ್ಗಮಿತ ಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ. ಇದೇ ವೇಳೆ, ‘ಶಿಂಧೆ ಸರ್ಕಾರ ಸೇರಲು (ಡಿಸಿಎಂ ಆಗಲು) ಒಪ್ಪಿದ್ದಾರೆ’ ಎಂದು ಫಡ್ನವೀಸ್‌ ತಿಳಿಸಿದ್ದಾರೆ.

ಮುಂಬೈ: ‘ಸಿಎಂ ಸ್ಥಾನಕ್ಕೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಹೆಸರು ಪ್ರಸ್ತಾಪಿಸಿದ್ದೇ ನಾನು’ ಎಂದು ನಿರ್ಗಮಿತ ಸಿಎಂ ಏಕನಾಥ ಶಿಂಧೆ ಹೇಳಿದ್ದಾರೆ. ಇದೇ ವೇಳೆ, ‘ಶಿಂಧೆ ಸರ್ಕಾರ ಸೇರಲು (ಡಿಸಿಎಂ ಆಗಲು) ಒಪ್ಪಿದ್ದಾರೆ’ ಎಂದು ಫಡ್ನವೀಸ್‌ ತಿಳಿಸಿದ್ದಾರೆ.

ಅಜಿತ್‌ ಪವಾರ್‌ ಹಾಗೂ ಫಡ್ನವೀಸ್‌ ಜತೆಗೂಡಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಂಧೆ, ‘ಎರಡೂವರೆ ವರ್ಷಗಳ ಹಿಂದೆ ಫಡ್ನವೀಸ್ ನನ್ನ ಹೆಸರನ್ನು ಮುಖ್ಯಮಂತ್ರಿಯಾಗಲು ಶಿಫಾರಸು ಮಾಡಿದ್ದರು. ಈ ಬಾರಿ ಮುಖ್ಯಮಂತ್ರಿಯಾಗಲು ನಾವು ಅವರ ಹೆಸರನ್ನು ಶಿಫಾರಸು ಮಾಡಿದ್ದೇವೆ’ ಎಂದರು.

ಆಗ ಶಿಂಧೆಗೆ ಧನ್ಯವಾದ ಸಲ್ಲಿಸಿದ ಫಡ್ನವೀಸ್, ‘ನಾನು ನಿನ್ನೆ ಏಕನಾಥ್ ಶಿಂಧೆ ಅವರನ್ನು ಸಂಪುಟದಲ್ಲಿ ಉಳಿಯುವಂತೆ ವಿನಂತಿಸಿದ್ದೆ . ಅವರು ಒಪ್ಪಿಕೊಂಡಿದ್ದಾರೆ, ಮುಖ್ಯಮಂತ್ರಿ ಹುದ್ದೆಯು ನಮ್ಮ ನಡುವಿನ ತಾಂತ್ರಿಕ ಒಪ್ಪಂದವಾಗಿದೆ. ನಮ್ಮ ನಡುವೆ ಒಗ್ಗಟ್ಟಿದೆ’ ಎಂದರು.

ನಾಗ್ಪುರ ಮೇಯರ್‌ನಿಂದ ಸಿಎಂ ಕುರ್ಚಿಗೆ 

ಮುಂಬೈ: ದೇವೇಂದ್ರ ಫಡ್ನವೀಸ್‌ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಗುರುವಾರ 3ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಗಪುರದಲ್ಲಿ ಕಾರ್ಪೋರೇಟರ್‌ ಆಗಿ ಬಳಿಕ ಮೇಯರ್‌ ಆಗಿದ್ದ ಅವರಿಗೆ 3ನೇ ಬಾರಿ ಸಿಎಂ ಪಟ್ಟ ಒಲಿದು ಬಂದಿದೆ.

ಫಡ್ನವೀಸ್ 1992ರಲ್ಲಿ ಮೊದಲ ಬಾರಿ ನಾಗಪುರ ಪಾಲಿಕೆ ಸದಸ್ಯರಾದರು. ನಂತರ ಅವರು ಮೇಯರ್ ಆದರು. ಭಾರತದ 2ನೇ ಕಿರಿಯ ಮೇಯರ್ ಮತ್ತು ನಾಗ್ಪುರದ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಬಳಿಕ ಅವರು ಸತತ 5 ಅವಧಿಗೆ ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾದರು. 2014ರಲ್ಲಿ ಮೊದಲ ಬಾರಿ ಸಿಎಂ ಆದರು. ಬಳಿಕ ಅವರು ಕಳೆದ 47 ವರ್ಷಗಳಲ್ಲಿ ಸಂಪೂರ್ಣ ಏಕ ಅವಧಿಯನ್ನು ಪೂರ್ಣಗೊಳಿಸಿದ ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಮತ್ತು ರಾಜ್ಯದ ಇತಿಹಾಸದಲ್ಲಿ ಎರಡನೇ ಮುಖ್ಯಮಂತ್ರಿ ಎಂಬ ಕೀರ್ತಿ ಪಡೆದರು.

80 ತಾಸಿನ ಸಿಎಂ!:

2019ರ ಚುನಾವಣೆಯ ನಂತರ ಶಿವಸೇನೆ-ಬಿಜೆಪಿ ಮೈತ್ರಿ ಮುರಿದುಬಿತ್ತು. ಇದು ರಾಜಕೀಯ ಬಿಕ್ಕಟ್ಟನ್ನು ಹುಟ್ಟುಹಾಕಿತು.ಈ ಪ್ರಕ್ಷುಬ್ಧತೆಯ ಸಮಯದಲ್ಲಿ (2019ರ ನವೆಂಬರ್‌ನಲ್ಲಿ) ಫಡ್ನವೀಸ್ ಅವರು ಎನ್‌ಸಿಪಿಯಿಂದ ಜಿಗಿದು ಬಂದ ಅಜಿತ್‌ ಪವಾರ್‌ ಅವರ ಜತೆ ಸರ್ಕಾರ ರಚಿಸಿದರು, ಆದರೆ ಕೇವಲ 80 ತಾಸಿನ ಬಳಿಕ ಅಜಿತ್ ಪವಾರ್ ಮಾತೃ ಪಕ್ಷ ಎನ್‌ಸಿಪಿಗೆ ಮರಳಿದ ಕಾರಣ ಸರ್ಕಾರ ಪತನವಾಯಿತು.ಫಡ್ನವೀಸ್‌ ‘80 ಗಂಟೆಗಳ ಸಿಎಂ’ ಎಂಬ ಮುಕುಟ ಪಡೆದರು.

ಬಳಿಕ ಶಿವಸೇನೆಯ ಉದ್ಧವ ಠಾಕ್ರೆ ಸಿಎಂ ಆದರು. ಆದರೆ ಏಕನಾಥ ಶಿಂಧೆ ಬಂಡೆದ್ದ ಕಾರಣ 2 ವರ್ಷದಲ್ಲಿ ಅವರ ಸರ್ಕಾರ ಕೂಡ ಪತನಗೊಂಡಿತು ಹಾಗೂ ನಂತರ ಶಿಂಧೆ ಅವರು ಫಡ್ನವೀಸ್ ಸಹಾಯದಿಂದ ಸಿಎಂ ಅದರು. ಅದರೆ ಶಿಂಧೆ ಬಂಡೆದ್ದು ಬಂದ ಕಾರಣ ಅವರಿಗೆ ಸಿಎಂ ಪಟ್ಟ ನೀಡಲಾಯಿತು. ಪಕ್ಷ ನಿಷ್ಠೆ ಪ್ರದರ್ಶಿಸಿದ ಫಡ್ನವೀಸ್ ಅನಿವಾರ್ಯವಾಗಿ ಡಿಸಿಎಂ ಪಟ್ಟಕ್ಕೆ ಹಿಂಬಡ್ತಿಗೆ ಒಳಗಾದರು.

ಬ್ಯಾಕ್‌ ಬೆಂಚರ್‌ ಫಡ್ನವೀಸ್: ಶಿಕ್ಷಕಿ

ನಾಗಪುರ: ಇಲ್ಲಿನ ಸರಸ್ವತಿ ವಿದ್ಯಾಲಯಲದಲ್ಲಿ 8ರಿಂದ 10ನೇ ಕ್ಲಾಸ್‌ವರೆಗೆ ದೇವೇಂದ್ರ ಫಡ್ನವೀಸ್ ಓದುವಾಗ ‘ಬ್ಯಾಕ್‌ ಬೆಂಚರ್’ ಅಗಿದ್ದರು. ಆದರೂ ಸೂಕ್ಷ್ಮ, ಸಹಾಯಗುಣವುಳ್ಳ ಹಾಗೂ ಸೌಮ್ಯ ವ್ಯಕ್ತಿ ಆಗಿದ್ದರು ಎಂದು ಅವರಿಗೆ ಕಲಿಸಿದ್ದ ಶಿಕ್ಷಕಿ ಸಾವಿತ್ರಿ ಸುಬ್ರಮಣ್ಯಂ ಸ್ಮರಿಸಿದ್ದಾರೆ.

ದೇವೇಂದ್ರ ಫಡ್ನವೀಸ್‌ಗೆ ಹೊಸ ಮಧ್ಯದ ಹೆಸರು!

ಮುಂಬೈ: ಗುರುವಾರ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ದೇವೇಂದ್ರ ಫಡ್ನವೀಸ್‌, ತಮ್ಮ ಪ್ರಮಾಣ ವಚನ ಆಮಂತ್ರಣ ಪತ್ರಿಕೆಯಲ್ಲಿ ತಾಯಿಯ ಹೆಸರನ್ನೂ ಮಧ್ಯನಾಮವಾಗಿ ಸೇರಿಸಿಕೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಮಂತ್ರಣದಲ್ಲಿ ‘ದೇವೇಂದ್ರ ಸರಿತಾ ಗಂಗಾಧರರಾವ್ ಫಡ್ನವೀಸ್’ ಎಂದು ಹೆಸರಿಸಲಾಗಿದೆ. ಸರಿತಾ ಅವರ ತಾಯಿಯ ಹೆಸರು, ಗಂಗಾಧರ್ ಅವರ ತಂದೆ. ಹೆಚ್ಚಾಗಿ ಜನರು ತಮ್ಮ ತಂದೆಯ ಹೆಸರನ್ನು ತಮ್ಮ ಮಧ್ಯದ ಹೆಸರನ್ನಾಗಿ ಬಳಸುವುದು ವಾಡಿಕೆ. ಆದರೆ ಫಡ್ನವೀಸ್ ಅವರು ಅಧಿಕೃತ ಉದ್ದೇಶಕ್ಕಾಗಿ ತಮ್ಮ ತಾಯಿಯ ಹೆಸರನ್ನು ಬಳಸಿರುವುದು ಬಲು ಅಪರೂಪ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ
ಸುಧಾಮೂರ್ತಿ ಡೀಪ್‌ಫೇಕ್‌ ವಿಡಿಯೋ ವೈರಲ್‌ : ನಂಬಿ ಮೋಸಹೋಗದಂತೆ ವಿನಂತಿ