ಗೋಧ್ರಾ ಗಲಭೆಯಲ್ಲಿ ನನ್ನನ್ನು ಬಲಿಪಶು ಮಾಡಲು ಸಂಚು : ಕೈಗೆ ಪ್ರಧಾನಿ ನರೇಂದ್ರ ಮೋದಿ ಚಾಟಿ

KannadaprabhaNewsNetwork |  
Published : Mar 17, 2025, 01:33 AM ISTUpdated : Mar 17, 2025, 05:43 AM IST
ಪ್ರಧಾನಿ ನರೇಂದ್ರ ಮೋದಿ | Kannada Prabha

ಸಾರಾಂಶ

  ಗೋಧ್ರೋತ್ತರ ಗಲಭೆಗಳ ಕುರಿತಾದ ಚರ್ಚೆಗಳೆಲ್ಲಾ ನನ್ನ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಹೆಣೆದ ಕಟ್ಟುಕಥೆಯಾಗಿದ್ದವು.  ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು  ನನಗೆ ಶಿಕ್ಷೆಯಾಗುವುದನ್ನು ಬಯಸಿದ್ದರು,  ನ್ಯಾಯಾಲಯ ನನ್ನನ್ನು ನಿರ್ದೋಷಿ ಎಂದು ಘೋಷಿಸಿತು’ ಎಂದು ಪ್ರಧಾನಿ  ಮೋದಿ ಹೇಳಿದ್ದಾರೆ.

 ನವದೆಹಲಿ : ‘2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರೋತ್ತರ ಗಲಭೆಗಳ ಕುರಿತಾದ ಚರ್ಚೆಗಳೆಲ್ಲಾ ನನ್ನ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಹೆಣೆದ ಕಟ್ಟುಕಥೆಯಾಗಿದ್ದವು. ಹಿಂಸೆಯ ಬಳಿಕ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು (ಕಾಂಗ್ರೆಸ್ ಪಕ್ಷ) ನನಗೆ ಶಿಕ್ಷೆಯಾಗುವುದನ್ನು ಬಯಸಿದ್ದರು, ಆದರೆ ನ್ಯಾಯಾಲಯ ನನ್ನನ್ನು ನಿರ್ದೋಷಿ ಎಂದು ಘೋಷಿಸಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ಪ್ರಸಾರವಾದ ಅಮೆರಿಕದ ಖ್ಯಾತ ಪಾಡ್‌ಕಾಸ್ಟರ್‌ ಲೆಕ್ಸ್‌ ಫ್ರೀಡ್‌ಮನ್‌ ಅವರೊಂದಿಗಿನ 3 ಗಂಟೆ 17 ನಿಮಿಷದ ಪಾಡ್‌ಕಾಸ್ಟ್‌ನಲ್ಲಿ ಗುಜರಾತ್‌ ಗಲಭೆ, ಆರ್‌ಎಸ್‌ಎಸ್‌, ಭಾರತ- ಚೀನಾ ಸಂಬಂಧ- ಅಮೆರಿಕ- ಉಕ್ರೇನ್‌ ಯುದ್ಧ, ಧ್ಯಾನ, ಉಪವಾಸ, ಶಿಕ್ಷಣ, ತಮ್ಮ ಬಾಲ್ಯ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೊದಲಾದ ವಿಷಯಗಳ ಬಗ್ಗೆ ಮೋದಿ ಸುದೀರ್ಘವಾಗಿ ಮಾತನಾಡಿದ್ದಾರೆ. ಈ ವೇಳೆ ಗೋಧ್ರೋತ್ತರ ಗಲಭೆ ವಿಷಯದಲ್ಲಿ ತಮ್ಮನ್ನು ಹೇಗೆ ಬಲಿಪಶು ಮಾಡುವ ಯತ್ನ ನಡೆಯಿತು ಎಂಬುದರ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

ಕಾಂಗ್ರೆಸ್‌ಗೆ ಕುಟುಕು:

‘2002 ಗುಜರಾತ್‌ ಗಲಭೆಯನ್ನು ಗುಜರಾತ್‌ ಇತಿಹಾಸದಲ್ಲೇ ಅತಿದೊಡ್ಡ ಗಲಭೆ ಎಂದು ಬಿಂಬಿಸಲಾಯಿತು. ಆದರೆ 2002ಕ್ಕೂ ಹಿಂದಿನ ದಾಖಲೆಗಳನ್ನು ನೀವು ಒಮ್ಮೆ ಪರಿಶೀಲಿಸಿದರೆ ಗುಜರಾತ್‌ ಆಗಾಗ್ಗೆ ಗಲಭೆಗಳನ್ನು ಎದುರಿಸುತ್ತಿತ್ತು ಎಂಬುದನ್ನು ಕಾಣಬಹುದು. ರಾಜ್ಯದಲ್ಲಿ ಕರ್ಫ್ಯೂಗಳನ್ನು ನಿರಂತರವಾಗಿ ವಿಧಿಸಲಾಗುತ್ತಿತ್ತು. ಗಾಳಿಪಟ ಹಾರಿಸುವ ಸ್ಪರ್ಧೆಗಳು ಅಥವಾ ಸೈಕಲ್ ಡಿಕ್ಕಿಯಂಥ ಕ್ಷುಲ್ಲಕ ವಿಷಯಗಳಿಗೂ ರಾಜ್ಯದಲ್ಲಿ ಕೋಮು ಹಿಂಸಾಚಾರ ಭುಗಿಲೇಳುತ್ತಿತ್ತು. 1969ರಲ್ಲಿ ನಡೆದ ಗಲಭೆಗಳು 6 ತಿಂಗಳಿಗೂ ಹೆಚ್ಚಿನ ಕಾಲ ನಡೆದಿತ್ತು. ಅದು ನಾನಿನ್ನೂ ರಾಜಕೀಯಕ್ಕೆ ಕಾಲಿಡದ ಸಮಯವಾಗಿತ್ತು’ ಎಂದು ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯ ಘಟನೆಗಳನ್ನು ಪರೋಕ್ಷವಾಗಿ ಮೋದಿ ಉದಾಹರಿಸಿದರು.

ಜೊತೆಗೆ, ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆಯು, ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಕೇವಲ 3 ದಿನಗಳ ಬಳಿಕ ನಡೆದದ್ದು. ಜನರನ್ನು ಜೀವಂತವಾಗಿಯೇ ಸುಟ್ಟು ಹಾಕಿದ್ದು, ಊಹಿಸುವುದಕ್ಕೆ ಅಸಾಧ್ಯವಾದ ದುರಂತ.

ಕಂದಹಾರ್‌ ವಿಮಾನ ಅಪಹರಣ, ಸಂಸತ್‌ ಮೇಲಿನ ದಾಳಿ, ಅಮೆರಿಕದ ವಿಶ್ವ ವಾಣಿಜ್ಯ ಸಂಸ್ಥೆಯ ಮೇಲಿನ ದಾಳಿ ಮತ್ತು ಅದರ ಬೆನ್ನಲ್ಲೇ ಗುಜರಾತ್‌ನಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಜನರನ್ನು ಜೀವಂತ ಸುಡಲಾಗಿತ್ತು. ಆಗ ರಾಜ್ಯದಲ್ಲಿ ಪರಿಸ್ಥಿತಿ ಎಷ್ಟು ಉದ್ವಿಗ್ನವಾಗಿತ್ತು ಎಂಬುದನ್ನು ನೀವು ಊಹಿಸಬಹುದು ಎಂದು ಗೋಧ್ರೋತ್ತರ ಘಟನೆಗೆ ಕಾರಣವಾದ ಅಂಶಗಳನ್ನು ಮೋದಿ ತೆರೆದಿಟ್ಟರು.

ಜೊತೆಗೆ, ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆ ಕಿಡಿ ಹೊತ್ತಿಸಿದ ಘಟನೆಯಾಗಿತ್ತು. ಅದರ ಬೆನ್ನಲ್ಲೇ ಹಿಂಸಾಚಾರ ನಡೆಯಿತು. ಆದರೆ ಘಟನೆ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಯಿತು. ನಮ್ಮ ರಾಜಕೀಯ ಎದುರಾಳಿಗಳು, ಅಧಿಕಾರದಲ್ಲಿದ್ದವರು ನಮ್ಮ ಮೇಲಿನ ಆರೋಪಗಳು ಹಾಗೆಯೇ ಇರಬೇಕು ಎಂದು ಬಯಸಿದ್ದರು. ಅವರು ನನಗೆ ಶಿಕ್ಷೆಯಾಗುವುದನ್ನು ನೋಡಬೇಕೆಂದು ಬಯಸಿದ್ದರು. ಅವರ ಅವಿರತ ಪ್ರಯತ್ನದ ಹೊರತಾಗಿಯೂ ನ್ಯಾಯಾಲಯವು ಎರಡು ಸಲ ಸೂಕ್ಷ್ಮವಾಗಿ ವಿಶ್ಲೇಷಿಸಿ ಅಂತಿಮವಾಗಿ ನಿರಾಪರಾಧಿ ಎಂದು ಘೋಷಿಸಿತು. ಕಳೆದ 22 ವರ್ಷಗಳಿಂದ ಗುಜರಾತ್‌ ಒಂದೂ ಗಲಭೆಯನ್ನು ಕಂಡಿಲ್ಲ. ಗುಜರಾತ್‌ ಸಂಪೂರ್ಣವಾಗಿ ಶಾಂತಿಯುತವಾಗಿದೆ. ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್‌ ಎನ್ನುವುದು ನಮ್ಮ ಮಂತ್ರ ಎಂದು ಇದೇ ವೇಳೆ ಮೋದಿ ಹೇಳಿದರು. 

ಮೋದಿ ಹೇಳಿದ್ದೇನು?

- 2002ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ನಂತರ ಗುಜರಾತ್‌ ಗಲಭೆ ನಡೆದಿತ್ತು+

- ಈ ಗಲಭೆಗೆ ನಾನು ಕಾರಣ ಎಂದು ಬಲಿಪಶು ಮಾಡುವ ಯತ್ನ

- ರಾಜಕೀಯ ವಿರೋಧಿಗಳಿಂದ ನನ್ನ ವಿರುದ್ಧ ಸುಳ್ಳು ಕಥೆ ಸೃಷ್ಟಿ

- ನನಗೆ ಶಿಕ್ಷೆಯಾಗುವುದನ್ನು ನನ್ನ ವಿರೋಧಿಗಳು ಬಯಸಿದ್ದರು

- ಆದರೆ ನ್ಯಾಯಾಲಯ ನನ್ನನ್ನು ನಿರಪರಾಧಿ ಎಂದು ಘೋಷಿಸಿತು

- ನಂತರದ 22 ವರ್ಷದಲ್ಲಿ ಗುಜರಾತಲ್ಲಿ ಒಂದೂ ಗಲಭೆ ಆಗಿಲ್ಲ

- ಕಾಂಗ್ರೆಸ್‌ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಪ್ರಧಾನಿ ಮೋದಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ