;Resize=(412,232))
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ದೆಹಲಿಯಲ್ಲಿ ನಡೆಯುತ್ತಿದ್ದ ರೈತರ ಧರಣಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ರೈತರಿಗೆ ಉಚಿತ ಪ್ರವಾಸ ಮಾಡಿದಂತಾಗಿದೆ.
ಧರಣಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೆ ಅಯೋಧ್ಯೆ, ಕಾಶಿ, ಉಜ್ಜಯಿನಿ ಸೇರಿ ಮತ್ತಿತರರ ಪ್ರವಾಸ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಿ ಅಲ್ಲಿಂದ ವಾಪಸ್ ಕಳುಹಿಸಲಾಗಿದೆ. ಅವರೆಲ್ಲರೂ ಪ್ರವಾಸ ಮುಗಿಸಿಕೊಂಡು ಹುಬ್ಬಳ್ಳಿಗೆ ಮಂಗಳವಾರ ಮರಳಿ ಬಂದಿದ್ದಾರೆ.
ಆಗಿದ್ದೇನು?
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗಿತ್ತು. ಆ ಧರಣಿಯಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ 70ಕ್ಕೂ ಹೆಚ್ಚು ರೈತರು ತೆರಳಿದ್ದರು. 
ನಿಜಾಮುದ್ದೀನ್ ರೈಲಿನಲ್ಲಿ ತೆರಳುತ್ತಿದ್ದ ಈ ರೈತರನ್ನು ಮಧ್ಯಪ್ರದೇಶದ ಭೋಪಾಲದಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದರು. ಅಲ್ಲಿ ಒಂದು ದಿನ ಇಟ್ಟುಕೊಂಡು ಅಲ್ಲಿಂದ ಉಜ್ಜಯಿನಿಗೆ ಕರೆದುಕೊಂಡು ಹೋಗಿದ್ದರು.
ಅಲ್ಲಿ ದೇವರ ದರ್ಶನವಾದ ಬಳಿಕ ಅಲ್ಲಿಂದ ವಾರಾಣಸಿ ರೈಲು ಹತ್ತಿಸಿದ್ದರು. ಅಲ್ಲಿ ವಿಶ್ವನಾಥನ ದರ್ಶನ ಪಡೆದ ರೈತರನ್ನು ಅಲ್ಲಿಂದ ಅಯೋಧ್ಯೆಗೆ ಕರೆದೊಯ್ದಿದ್ದಾರೆ.
ಅಲ್ಲೂ ಬಾಲರಾಮನ ದರ್ಶನ ಪಡೆದು ಪೂಜೆ ಸಲ್ಲಿಸಿ ಅಲ್ಲಿಂದ ಮರಳಿ ಅವರವರ ಊರಿನ ರೈಲಿಗಳಿಗೆ ಪೊಲೀಸರೇ ಹತ್ತಿಸಿ ಕಳುಹಿಸಿದ್ದಾರೆ.
ಹೀಗಾಗಿ ಇವರ್‍ಯಾರು ದೆಹಲಿಗೆ ಪ್ರತಿಭಟನೆ ನಡೆಸಲು ತೆರಳಲು ಅವಕಾಶವೇ ಸಿಕ್ಕಿಲ್ಲ. ತೀರ್ಥಕ್ಷೇತ್ರ ದರ್ಶನ ಮಾಡಿಕೊಂಡು ಮರಳಿ ಊರಿಗೆ ಬಂದಿದ್ದಾರೆ.
ಹುಬ್ಬಳ್ಳಿಗೆ ಮಂಗಳವಾರ ಆಗಮಿಸಿರುವ ರೈತರ ಮುಖಂಡ ಪರಶುರಾಮ ಯತ್ತಿನಗುಡ್ಡ ಮಾತನಾಡಿ, ದೆಹಲಿಗೆ ಪ್ರತಿಭಟನೆಗೆ ತೆರಳಿದ್ದೆವು. ಆದರೆ ನಮಗೆ ದೆಹಲಿಗೆ ಹೋಗಲು ಅವಕಾಶವೇ ಸಿಗಲಿಲ್ಲ.
ಉಜ್ಜಯಿನಿ, ಕಾಶಿ, ಅಯೋಧ್ಯೆಗೆ ಕರೆದುಕೊಂಡು ಹೋದರು. ಅಲ್ಲಿ ದೇವರ ದರ್ಶನ ಮಾಡಿಕೊಂಡು, ರೈತರ ಸಮಸ್ಯೆ ಬಗೆಹರಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸಿಕೊಂಡು ವಾಪಸ್ ಬಂದಿದ್ದೇವೆ ಎಂದು ನುಡಿದರು.