ಪುತ್ರಗಿಂತ 15 ವರ್ಷ ಹಿರಿಯ ತಂದೆ, ಅಜ್ಜ 40 ವರ್ಷ ಕಿರಿಯ
ಇದು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಬೆಳಕಿಗೆ ಬಂದ ಅಚ್ಚರಿಗಳು! ಮತದಾರರ ಪಟ್ಟಿ ಪರಿಷ್ಕರಣೆ ವೇಳೆ 85 ಲಕ್ಷ ಮತದಾರರ ಮಾಹಿತಿಗಳು ತಪ್ಪಾಗಿ ದಾಖಲಾಗಿರುವುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ರಾಜ್ಯದಲ್ಲಿ ಸುಮಾರು 1 ಕೋಟಿ ಮತದಾರರ ದಾಖಲೆ ಮರುಪರಿಶೀಲಿಸಲು ಸಿದ್ಧತೆ ನಡೆಸಿದೆ.
ಮೂಲಗಳ ಪ್ರಕಾರ, ಸುಮಾರು 13.5 ಲಕ್ಷ ಮತದಾರರ ತಂದೆ ಮತ್ತು ತಾಯಿ ಹೆಸರಿನ ಜಾಗದಲ್ಲಿ ಒಂದೇ ಹೆಸರು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ರೀತಿಯ ಮತದಾರರ ದಾಖಲೆಗಳನ್ನು ಮತ್ತೆ ಕೂಲಂಕಷವಾಗಿ ಮರುಪರಿಶೀಲಿಸಲು ನಿರ್ಧರಿಸಿದೆ.ಏನೇನು ಯಡವಟ್ಟು?:
ಕೆಲ ಕುಟುಂಬಗಳ ತಂದೆ ಹೆಸರು ತಾಯಿ ಹೆಸರಿನ ಜಾಗದಲ್ಲಿ ಎಂಟ್ರಿಯಾಗಿದೆ. 11.95 ಲಕ್ಷ ಮತದಾರರ ತಂದೆ ವಯಸ್ಸು ಪುತ್ರನಿಗಿಂತ 15 ವರ್ಷ ಅಥವಾ ಅದರ ಒಳಗಿದೆ. ಕನಿಷ್ಠ 3.29 ಲಕ್ಷ ಮತದಾರರ ಅಜ್ಜನ ವಯಸ್ಸು 40 ಅಥವಾ ಅದಕ್ಕಿಂತ ಕಡಿಮೆ ಎಂದು ಎಂಟ್ರಿಯಾಗಿದೆ. ಕನಿಷ್ಠ 24.21 ಲಕ್ಷ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿಗೆ ಆರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳಿದ್ದಾರೆ ಎಂದು ದಾಖಲಾಗಿದೆ.ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ದಾಖಲೆಗಳ ಮರುಪರಿಶೀಲನೆ ಬಳಿಕ ಈ ಗೊಂದಲ ಬೆಳಕಿಗೆ ಬಂದಿದೆ. ಈ ಕುರಿತು ಚುನಾವಣಾ ಆಯೋಗ ಅನುಮಾನಾಸ್ಪದ ಎಂಟ್ರಿ ಆಗಿರುವ ಮತದಾರರನ್ನು ಮುಂದಿನ ವಾರದಿಂದಲೇ ಕರೆದು ಪರಿಶೀಲನೆ ನಡೆಸುವ ನಿರೀಕ್ಷೆ ಇದೆ.
57.52 ಲಕ್ಷ ಮತದಾರರ ಹೆಸರು ರದ್ದು?:ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಕನಿಷ್ಠ 57.52 ಲಕ್ಷ ಮಂದಿ ಮತದಾರರ ಹೆಸರು ರದ್ದಾಗುವ ಸಾಧ್ಯತೆ ಇದೆ. ಇದರಲ್ಲಿ 24.14 ಲಕ್ಷ ಮಂದಿ ಮೃತಪಟ್ಟಿದ್ದರೆ, ಸುಮಾರು 11.57 ಲಕ್ಷಕ್ಕೂ ಹೆಚ್ಚು ಮಂದಿ ಪತ್ತೆ ಸಾಧ್ಯವಾಗಿಲ್ಲ. 19.89 ಲಕ್ಷ ಮಂದಿ ಬೇರೆ ವಿಳಾಸಕ್ಕೆ ವರ್ಗಾವಣೆಯಾಗಿದ್ದಾರೆ. 13.05 ಲಕ್ಷ ಮಂದಿ ಹೆಸರು ಒಂದಕ್ಕಿಂದ ಹೆಚ್ಚಿನ ಕಡೆ ದಾಖಲಾಗಿದೆ. ಅದೇ ರೀತಿ 11.57 ಲಕ್ಷ ಮಂದಿ ಅರ್ಜಿಯನ್ನು ನಾನಾ ಕಾರಣಗಳಿಂದ ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.