ಅಡ್ಡ ಮತ ಭೀತಿ: ಜೆಡಿಎಸ್‌ ಶಾಸಕರು ರೆಸಾರ್ಟ್‌ಗೆ

Published : Jun 18, 2026, 10:57 AM IST
JDS

ಸಾರಾಂಶ

ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ಹಿನ್ನೆಲೆಯಲ್ಲಿ ಅಡ್ಡಮತದಾನದ ಭೀತಿಯಲ್ಲಿ ಜೆಡಿಎಸ್‌ ಪಕ್ಷವು ತನ್ನ ಶಾಸಕರನ್ನು ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಸ್ಥಳಾಂತರಿಸಿದೆ.

  ಬೆಂಗಳೂರು :  ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಗುರುವಾರ ಚುನಾವಣೆ ಹಿನ್ನೆಲೆಯಲ್ಲಿ ಅಡ್ಡಮತದಾನದ ಭೀತಿಯಲ್ಲಿ ಜೆಡಿಎಸ್‌ ಪಕ್ಷವು ತನ್ನ ಶಾಸಕರನ್ನು ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಸ್ಥಳಾಂತರಿಸಿದೆ.

18 ಶಾಸಕರ ಸಂಖ್ಯಾಬಲ ಹೊಂದಿರುವ ಜೆಡಿಎಸ್‌ ಬಳಿ ತಮ್ಮ ಅಭ್ಯರ್ಥಿ ಗೆಲ್ಲುವಷ್ಟು ಮತಗಳಿಲ್ಲ. ಮೈತ್ರಿ ಪಕ್ಷ ಬಿಜೆಪಿಯ ಹೆಚ್ಚುವರಿ ಮತ ಪಡೆದರೂ ಜೆಡಿಎಸ್‌ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ. ಆದರೂ ಆಡಳಿತಾರೂಢ ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಸುಲಭ ಗೆಲುವು ಸಿಗಬಾರದು ಎಂಬ ಕಾರಣಕ್ಕೆ ಜೆಡಿಎಸ್‌ ತನ್ನ ಅಭ್ಯರ್ಥಿ ಕಣಕ್ಕಿಳಿಸಿ ಪೈಪೋಟಿ ನೀಡುತ್ತಿದೆ.

ಈಗಾಗಲೇ ಕಾಂಗ್ರೆಸ್‌ ಪಕ್ಷವು ತನ್ನ ಶಾಸಕರನ್ನು ಬಿಡದಿ ಬಳಿಯ ರೆಸಾರ್ಟ್‌ಗೆ ಕರೆಸಿಕೊಂಡು ಉಳಿಸಿಕೊಂಡಿದೆ. ಇದೀಗ ಚುನಾವಣೆ ವೇಳೆ ತಮ್ಮ ಶಾಸಕರಿಂದ ಅಡ್ಡಮತದಾನ ಆಗಬಾರದು ಎಂಬ ಕಾರಣಕ್ಕೆ ಬುಧವಾರ ಸಂಜೆಯೇ ಜೆಡಿಎಸ್‌ ಕೂಡ ತನ್ನ ಶಾಸಕರನ್ನು ಕರೆಸಿಕೊಂಡು ರೆಸಾರ್ಟ್‌ನಲ್ಲಿ ಉಳಿಸಿದೆ. ಶಾಸಕರು ರಾತ್ರಿ ರೆಸಾರ್ಟ್‌ನಲ್ಲಿಯೇ ವಾಸ್ತವ್ಯ ಹೂಡಲಿದ್ದು, ಗುರುವಾರ ಬೆಳಗ್ಗೆ ನೇರವಾಗಿ ಅಲ್ಲಿಂದ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಲಿದ್ದಾರೆ.

ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ಶಾಸಕರ ಸಭೆ ನಡೆಸಲಾಗಿದೆ. ತಮ್ಮ ಅಭ್ಯರ್ಥಿ ಗೆಲ್ಲುವಷ್ಟು ಮತಗಳು ನಮ್ಮ ಬಳಿ ಇಲ್ಲ. ಆದರೂ ನಾವು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಕಾಂಗ್ರೆಸ್‌ಗೆ ಪೈಪೋಟಿ ನೀಡಬೇಕು. ಹೀಗಾಗಿ ಚುನಾವಣೆ ವೇಳೆ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ನಮ್ಮ ಅಭ್ಯರ್ಥಿಗೇ ಮತ ಹಾಕಬೇಕು ಎಂದು ಶಾಸಕರಿಗೆ ತಿಳಿಸಲಾಗಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಶಾಸಕರಿಗೆ ವಿಪ್‌ ಜಾರಿ:

ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಗೌಪ್ಯ ಮತದಾನ ನಡೆಯಲಿದೆ. ಶಾಸಕರು ಗೌಪ್ಯವಾಗಿ ತಮ್ಮ ಮತ ಚಲಾಯಿಸುತ್ತಾರೆ. ಆದರೂ ಜೆಡಿಎಸ್‌ ಪಕ್ಷದ ಮುಖ್ಯ ಸಚೇತಕ ಹರೀಶ್ ಗೌಡ ಅವರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೋವಿಂದರಾಜು ಅವರಿಗೆ ಕಡ್ಡಾಯವಾಗಿ ಮತ ಹಾಕುವಂತೆ ಜೆಡಿಎಸ್‌ನ ಶಾಸಕರಿಗೆ ವಿಪ್‌ ಜಾರಿ ಮಾಡಿದ್ದಾರೆ.

ಜೆಡಿಎಸ್‌ಗೆ ಯತ್ನಾಳ್ ಮತ?:

ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಯತ್ನಾಳ್‌ ಅವರು ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಸಾಧ್ಯತೆಯಿದೆ. ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಅವರು ಯತ್ನಾಳ್‌ ಅವರೊಂದಿಗೆ ಮಾತನಾಡಿ ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಯತ್ನಾಳ್‌ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿ ಹೆಚ್ಚುವರಿ ಮತಕ್ಕೆ ಮನವಿ:

ವಿಧಾನ ಪರಿಷತ್‌ ಚುನಾವಣೆಯಲ್ಲಿ ಹೆಚ್ಚುವರಿ ಮತಗಳನ್ನು ತಮಗೆ ನೀಡುವಂತೆ ಜೆಡಿಎಸ್‌ ಅಭ್ಯರ್ಥಿ ಗೋವಿಂದರಾಜು ನೇತೃತ್ವದ ಜೆಡಿಎಸ್‌ ನಾಯಕರ ನಿಯೋಗವು ರಾಜ್ಯ ಬಿಜೆಪಿ ನಾಯಕರಿಗೆ ಮನವಿ ಮಾಡಿದೆ. ಬುಧವಾರ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಮೇಲ್ಮನೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಣಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ಜೆಡಿಎಸ್‌ ಅಭ್ಯರ್ಥಿಗೆ ಜಿಟಿಡಿ ಮತ

ಜೆಡಿಎಸ್‌ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ರೆಸಾರ್ಟ್‌ಗೆ ಬಂದಿರಲಿಲ್ಲ. ಮೈಸೂರಿನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೇವೇಗೌಡರು, ಗುರುವಾರ ಬೆಳಗ್ಗೆ ಮೈಸೂರಿನಿಂದ ನೇರವಾಗಿ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಲಿದ್ದಾರೆ.

ಪಕ್ಷದ ನಾಯಕರ ಬಗ್ಗೆ ಅವರಿಗೆ ಯಾವುದೇ ಮುನಿಸಿಲ್ಲ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಾತನಾಡಿ ಎಲ್ಲವನ್ನೂ ಸರಿಪಡಿಸಿದ್ದಾರೆ. ಇನ್ನು ಮುಂದೆ ಪಕ್ಷದ ಚುಟುವಟಿಕೆಗಳಲ್ಲಿ ಜಿ.ಟಿ.ದೇವೇಗೌಡರು ಸಕ್ರಿಯರಾಗಲಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಗೆ ಚಲಾಯಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

22ರವರೆಗೆ ದೇಶದಲ್ಲಿ ‘ಟೆಲಿಗ್ರಾಂ’ಗೆ ನಿರ್ಬಂಧ
ತ.ನಾಡಲ್ಲಿ ಪ್ರತಿಯೊಬ್ಬರ ಮೇಲೆ ₹1.28 ಲಕ್ಷ ಸಾಲದ ಹೊರೆ!